ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ ಚಿಂತನೆ?| ಹಂತಹಂತವಾಗಿ ದರ ಇಳಿಕೆ: ಸಚಿವ ಪ್ರಧಾನ್
ನವದೆಹಲಿ(ಮಾ.15): ಪೆಟ್ರೋಲ್ ಹಾಗೂ ಡೀಸೆಲ್ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿ ಜನಸಾಮಾನ್ಯರಿಗೆ ತೀವ್ರ ಹೊರೆಯಾಗಿರುವಾಗಲೇ, ಈ ತೈಲಗಳ ಮೇಲಿನ ತೆರಿಗೆಯನ್ನು ಎಷ್ಟರ ಮಟ್ಟಿಗೆ ಕಡಿತಗೊಳಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚರ್ಚೆಯಲ್ಲಿ ತೊಡಗಿದೆ ಎನ್ನಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒಂದೇ ವೇದಿಕೆಗೆ ತಂದು ಶ್ರೀಸಾಮಾನ್ಯರ ಮೇಲಿನ ಹೊರೆಯನ್ನು ಯಾವ ರೀತಿ ತಗ್ಗಿಸಬಹುದು ಎಂಬ ಕುರಿತು ಹಣಕಾಸು ಸಚಿವಾಲಯದ ಅಧಿಕಾರಿಗಳ ನಡುವೆ ಸಮಾಲೋಚನೆ ಪ್ರಾರಂಭವಾಗಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
undefined
ಈ ನಡುವೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ. ದರ ಹಂತಹಂತವಾಗಿ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಬೆಲೆ ಹೆಚ್ಚಳವಾಗಿದೆ. ಇದು ತಾತ್ಕಾಲಿಕ. ಹಂತಹಂತವಾಗಿ ಬೆಲೆಯನ್ನು ಇಳಿಕೆ ಮಾಡಲಾಗುತ್ತದೆ. ಈ ಸಂಬಂಧ ತೈಲ ಉತ್ಪಾದಕ ರಾಷ್ಟ್ರಗಳ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತೈಲಗಳ ಮೇಲಿನ ತೆರಿಗೆ ಕೇಂದ್ರ ಹಾಗೂ ರಾಜ್ಯಗಳ ಪಾಲಿಗೆ ಸಂಪನ್ಮೂಲ. ಕೋವಿಡ್‌ನಿಂದ ಸೃಷ್ಟಿಯಾಗಿರುವ ಸನ್ನಿವೇಶದಲ್ಲಿ ಆರ್ಥಿಕತೆಯನ್ನು ಮೇಲಕ್ಕೆತ್ತಲು ಈ ಸಂಪನ್ಮೂಲ ನೆರವಾಗಲಿವೆ ಎಂದು ಹೇಳಿದ್ದಾರೆ.