ದೇಶದಲ್ಲಿ ಕೊರೋನಾ ರೀತಿಯಲ್ಲಿಯೇ ಪೆಟ್ರೋಲ್ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೂನ್ 18ರಂದು ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 80 ರುಪಾಯಿ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.19): ಒಂದು ಕಡೆ ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ದೇಶದ ಜನತೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತೆ ಭಾಸವಾಗುತ್ತಿದೆ. ಗುರುವಾರ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 80 ರುಪಾಯಿಗಳ ಗಡಿ ದಾಟಿದೆ.
ಹೌದು, ಸತತ 12ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡಲಾಗಿದೆ. ಗುರುವಾರ ಪ್ರತಿ ಲೀಟರ್ ಪೆಟ್ರೋಲ್ 53 ಪೈಸೆ ಮತ್ತು ಡೀಸೆಲ್ 64 ಪೈಸೆ ಏರಿಕೆ ಆಗಿದೆ. ಹೀಗಾಗಿ 12 ದಿನದಲ್ಲಿ ಪೆಟ್ರೋಲ್ 6.55 ರು. ಹಾಗೂ ಡೀಸೆಲ್ 7.04 ರು. ಏರಿಕೆ ಕಂಡಿದೆ.
ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ 80.33 ರು. ಹಾಗೂ ಡೀಸೆಲ್ 72.68 ರು. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ತೈಲ ದರದಲ್ಲಿ ಹೆಚ್ಚಳ ಮಾಡುತ್ತಿವೆ. ಜೂ.7ರಿಂದ ದೈನಂದಿನ ದರ ಪರಿಷ್ಕರಣೆ ಮಾಡಲಾಗುತ್ತಿದೆ.
ಪೆಟ್ರೋಲ್ ಮೂಲ ಬೆಲೆ 18 ರೂ, ಕೇಂದ್ರ ಹಾಗೂ ರಾಜ್ಯದ ಸುಂಕ ಶೇ. 275; ವಿಶ್ವದ ದುಬಾರಿ ಟ್ಯಾಕ್ಸ್!
ಭಾರತದ 85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪೆಟ್ರೋಲ್ ಮೂಲ ಬೆಲೆ ಕೇವಲ 18 ರುಪಾಯಿಗಳು ಮಾತ್ರ. ಆದರೆ ಭಾರತೀಯರು 275% ಟ್ಯಾಕ್ಸ್ ನೀಡಿ ಪೆಟ್ರೋಲ್ ಖರೀದಿಸುತ್ತಿದ್ದಾರೆ. ಇದು ವಿಶ್ವದಲ್ಲಿಯೇ ಅತಿ ದುಬಾರಿ ಟ್ಯಾಕ್ಸ್ ಎನ್ನುವ ಕುಖ್ಯಾತಿಗೂ ಒಳಗಾಗಿದೆ.