
ಬೆಂಗಳೂರು (ನ.06): ಮೂರು ದಿನಗಳ ಕಾಲ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರು. ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು, ಶೇ.90ಕ್ಕೂ ಹೆಚ್ಚು ಯೋಜನೆಗಳಲ್ಲಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಹೂಡಿಕೆ ಮಾಡಲು ಉದ್ಯಮದಾರರು ಆಸಕ್ತಿ ತೋರಿಸಿದ್ದಾರೆ. ಉದ್ದಿಮೆ ಸ್ಥಾಪನೆಗೆ 90 ದಿನಗಳ ಒಳಗೆ ಅನುಮೋದನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಯಶಸ್ಸಿನ ಕುರಿತು ವಿವರಿಸಿದ ಅವರು, 9,81,784 ಕೋಟಿ ಬಂಡವಾಳ ಹೂಡಿಕೆ ಒಪ್ಪಂದದ ಪೈಕಿ ಲಕ್ಷ ಕೋಟಿ ರು. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5,41,369 ಕೋಟಿ ರು. ಮೊತ್ತದ 57 ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 1.57 ಲಕ್ಷ ಕೋಟಿ ರು. ಮೊತ್ತದ ಎರಡು ಯೋಜನೆಗಳನ್ನು ಸಮಾವೇಶದಲ್ಲಿ ಘೋಷಿಸಲಾಗಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.
Global Investors Meet 2022: ಕುಲಕರ್ಣಿ, ಗೌಡ, ಪಾಟೀಲರು ಉದ್ಯಮಿ ಆಗ್ಬೇಕು: ಸಿಎಂ ಬೊಮ್ಮಾಯಿ
ವಿವಿಧ ಉದ್ಯಮಿಗಳು 2 ಲಕ್ಷ ಕೋಟಿ ರು. ಹೂಡಿಕೆ ಮಾಡುವ ಕುರಿತು ಒಪ್ಪಂದದ ಪ್ರಸ್ತಾವನೆಗಳೊಂದಿಗೆ ಬಂದಿದ್ದರು. ಆದರೆ ಈ ಯೋಜನೆಗಳಿಗೆ ಭೂಮಿ, ವಿದ್ಯುತ್, ಕಚ್ಚಾ ವಸ್ತುಗಳು ಹಾಗೂ ಸಹಾಯಧನ ಸೇರಿದಂತೆ ವಿವಿಧ ವಿಷಯಗಳು ಇತ್ಯರ್ಥವಾಗಬೇಕಾಗಿದ್ದರಿಂದ ಒಪ್ಪಂದ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಉದ್ಯಮಿಗಳೊಂದಿಗೆ ನಮ್ಮ ಅಧಿಕಾರಿಗಳು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ವಿವರಿಸಿದರು.
90 ದಿನದೊಳಗೆ ಒಪ್ಪಿಗೆ: ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗವುದು. ಒಪ್ಪಂದಗಳಿಗೆ 90 ದಿನದೊಳಗೆ ಅನುಮೋದನೆ ನೀಡಲಾಗುವುದು. ಒಡಂಬಡಿಕೆ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು ಎಂದ ಅವರು, ಆಗಿರುವ ಒಪ್ಪಂದದ ಪೈಕಿ ಶೇ.70ರಷ್ಟು ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿಗೆ ವಿಮಾನ ನಿಲ್ದಾಣ, ಎರಡು ಹೊಸ ಕ್ರಿಕೆಟ್ ಕ್ರೀಡಾಂಗಣ: ಕ್ಯಾಬಿನೆಟ್ ಸಭೆಯ ಮುಖ್ಯಾಂಶ
‘ಬಿಯಾಂಡ್ ಬೆಂಗಳೂರು’: ಬೆಂಗಳೂರಿನ ಆಚೆಗೆ ಕೈಗಾರಿಕೆಗಳನ್ನು ವಿಸ್ತರಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಮಾಡಿಕೊಂಡಿರುವ ಒಪ್ಪಂದದ ಪೈಕಿ ಶೇ.90ರಷ್ಟು ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ. ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.