ಷೇರು ಮಾರುಕಟ್ಟೆಯಲ್ಲಿ PB Fintech ರಕ್ತದೋಕುಳಿ, ಮ್ಯೂಚುವಲ್‌ ಫಂಡ್‌ ಹೌಸ್‌ಗಳೀಗೆ 9 ಸಾವಿರ ಕೋಟಿ ನಷ್ಟ!

Published : Sep 24, 2026, 07:32 PM IST
PB Fintech Shares Crash

ಸಾರಾಂಶ

ಐಆರ್‌ಡಿಎಐ ವಿಮಾ ಕಮಿಷನ್ ದರಗಳಲ್ಲಿ ಬದಲಾವಣೆ ಪ್ರಸ್ತಾಪಿಸಿದ ಬೆನ್ನಲ್ಲೇ ಪಾಲಿಸಿಬಜಾರ್ ಮಾತೃಸಂಸ್ಥೆ ಪಿಬಿ ಫಿನ್‌ಟೆಕ್ ಷೇರುಗಳು ಶೇ. 34ರಷ್ಟು ಕುಸಿದಿವೆ. ಇದರಿಂದಾಗಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಮ್ಯೂಚುವಲ್ ಫಂಡ್ ಸಂಸ್ಥೆಗಳು ಒಂದೇ ದಿನದಲ್ಲಿ 9,700 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಅನುಭವಿಸಿವೆ.

ಬೆಂಗಳೂರು (ಸೆ.24): ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ವಿಮಾ ವಿತರಣೆಯ ಆರ್ಥಿಕ ಮಾದರಿಯಲ್ಲಿ ಹಾಗೂ ಕಮಿಷನ್‌ ದರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸಿದ ಬೆನ್ನಲ್ಲೇ, 'ಪಾಲಿಸಿಬಜಾರ್' (Policybazaar) ಕಂಪನಿಯ ಮಾತೃ ಸಂಸ್ಥೆಯಾದ 'ಪಿಬಿ ಫಿನ್‌ಟೆಕ್' (PB Fintech) ಷೇರುಗಳು ಗುರುವಾರ (ಸೆಪ್ಟೆಂಬರ್ 24) ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿವೆ. ಒಂದೇ ದಿನದಲ್ಲಿ ಕಂಪನಿಯ ಷೇರು ಮೌಲ್ಯ ಶೇಕಡಾ 34 ರಷ್ಟು ಕುಸಿತ ಕಂಡಿದ್ದು, ಇದರಿಂದಾಗಿ ಕಂಪನಿಯಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಹೊಂದಿದ್ದ ಮ್ಯೂಚುವಲ್ ಫಂಡ್ ಸಂಸ್ಥೆಗಳು ಬರೋಬ್ಬರಿ 9,700 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಅನುಭವಿಸಿವೆ. ಬುಧವಾರದ ವಹಿವಾಟಿನಲ್ಲಿ 1,886.30 ರೂಪಾಯಿಯಷ್ಟಿದ್ದ ಪಿಬಿ ಫಿನ್‌ಟೆಕ್ ಷೇರು ಬೆಲೆ, ಗುರುವಾರ ವಹಿವಾಟು ಮುಕ್ತಾಯದ ವೇಳೆಗೆ 1,244 ರೂಪಾಯಿಗೆ ಕುಸಿದಿದೆ.

ಮ್ಯೂಚುವಲ್ ಫಂಡ್‌ಗಳ ಹೂಡಿಕೆಗೆ ಭಾರಿ ನಷ್ಟ

'ಏಸ್ ಈಕ್ವಿಟಿ' (Ace Equity) ಲಭ್ಯವಿರುವ ದತ್ತಾಂಶದ ಪ್ರಕಾರ, ಆಗಸ್ಟ್ ಅಂತ್ಯದ ವೇಳೆಗೆ ವಿವಿಧ ಮ್ಯೂಚುವಲ್ ಫಂಡ್ ಸಂಸ್ಥೆಗಳು ಪಿಬಿ ಫಿನ್‌ಟೆಕ್‌ನ ಒಟ್ಟು 15.15 ಕೋಟಿ ಷೇರುಗಳನ್ನು ಹೊಂದಿದ್ದವು. ಬುಧವಾರದ ಅಂತ್ಯದ ಬೆಲೆಯ ಆಧಾರದಲ್ಲಿ ಈ ಷೇರುಗಳ ಒಟ್ಟು ಮೌಲ್ಯ ಸುಮಾರು 28,577 ಕೋಟಿ ರೂಪಾಯಿಗಳಷ್ಟಿತ್ತು.

ಆದರೆ, ಗುರುವಾರದ ಭಾರಿ ಕುಸಿತದ ನಂತರ ಈ ಹೂಡಿಕೆಯ ಮೌಲ್ಯ ಸುಮಾರು 18,852 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಇದರಿಂದಾಗಿ ಮ್ಯೂಚುವಲ್ ಫಂಡ್‌ಗಳು ಒಂದೇ ದಿನದ ವಹಿವಾಟಿನಲ್ಲಿ ಬರೋಬ್ಬರಿ 9,725 ಕೋಟಿ ರೂಪಾಯಿಗಳ ಮೌಲ್ಯವನ್ನು ಕಳೆದುಕೊಂಡಂತಾಗಿದೆ. ಸೆಪ್ಟೆಂಬರ್ 24 ರ ಮಾರುಕಟ್ಟೆ ಬಂಡವಾಳೀಕರಣದ ಪ್ರಕಾರ, ಮ್ಯೂಚುವಲ್ ಫಂಡ್‌ಗಳು ಪಿಬಿ ಫಿನ್‌ಟೆಕ್‌ನಲ್ಲಿ ಶೇಕಡಾ 32.7 ರಷ್ಟು ಈಕ್ವಿಟಿ ಪಾಲನ್ನು ಹೊಂದಿದ್ದು, ಇದು ಜೂನ್ ಅಂತ್ಯದಲ್ಲಿದ್ದ ಶೇ. 28.32 ಕ್ಕಿಂತ ಹೆಚ್ಚಾಗಿದೆ.

ಯಾವ ಫಂಡ್‌ಗೆ ಎಷ್ಟು ನಷ್ಟ? ಎಚ್‌ಡಿಎಫ್‌ಸಿಗೆ ಗರಿಷ್ಠ ಪೆಟ್ಟು

ಪಿಬಿ ಫಿನ್‌ಟೆಕ್‌ನಲ್ಲಿ ಗರಿಷ್ಠ ಹೂಡಿಕೆ ಹೊಂದಿದ್ದ ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ (HDFC Mutual Fund) ಈ ಕುಸಿತದಿಂದ ಹೆಚ್ಚು ಪೆಟ್ಟು ತಿಂದಿದೆ. ಆಗಸ್ಟ್ ಅಂತ್ಯಕ್ಕೆ ಎಚ್‌ಡಿಎಫ್‌ಸಿ ಫಂಡ್ 4,717 ಕೋಟಿ ರೂ. ಮೌಲ್ಯದ 2.52 ಕೋಟಿ ಷೇರುಗಳನ್ನು ಹೊಂದಿತ್ತು. ಶೇ. 34 ರಷ್ಟು ಕುಸಿತದಿಂದಾಗಿ ಎಚ್‌ಡಿಎಫ್‌ಸಿ ಫಂಡ್ ಒಂದೇ ದಿನದಲ್ಲಿ 1,611 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಇನ್ನುಳಿದಂತೆ ಪ್ರಮುಖ ಮ್ಯೂಚುವಲ್ ಫಂಡ್‌ಗಳ ಹೂಡಿಕೆಯ ವಿವರ ಹೀಗಿದೆ

  • ಆಕ್ಸಿಸ್ ಮ್ಯೂಚುವಲ್ ಫಂಡ್: 1.68 ಕೋಟಿ ಷೇರುಗಳು (ಆಗಸ್ಟ್ ಮೌಲ್ಯ: 3,141 ಕೋಟಿ ರೂ.)
  • ಮಿರೆ ಅಸೆಟ್ ಮ್ಯೂಚುವಲ್ ಫಂಡ್: 1.54 ಕೋಟಿ ಷೇರುಗಳು (ಆಗಸ್ಟ್ ಮೌಲ್ಯ: 2,889 ಕೋಟಿ ರೂ.)
  • ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್: 1.40 ಕೋಟಿ ಷೇರುಗಳು
  • ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್: 96.91 ಲಕ್ಷ ಷೇರುಗಳು
  • ಟಾಟಾ ಮ್ಯೂಚುವಲ್ ಫಂಡ್: 88.24 ಲಕ್ಷ ಷೇರುಗಳು
  • ನಿಪ್ಪೋನ್ ಇಂಡಿಯಾ ಮ್ಯೂಚುವಲ್ ಫಂಡ್: 83.60 ಲಕ್ಷ ಷೇರುಗಳು
  • ಮೋತಿಲಾಲ್ ಓಸ್ವಾಲ್ ಮ್ಯೂಚುವಲ್ ಫಂಡ್: 79.41 ಲಕ್ಷ ಷೇರುಗಳು
  • ಸುಂದರಂ ಮ್ಯೂಚುವಲ್ ಫಂಡ್: 47.14 ಲಕ್ಷ ಷೇರುಗಳು

ಇನ್ನು ಅತ್ಯಂತ ಕನಿಷ್ಠ ಹೂಡಿಕೆಯನ್ನು '360 ಒನ್ ಮ್ಯೂಚುವಲ್ ಫಂಡ್' (171 ಷೇರುಗಳು), 'ಓಲ್ಡ್ ಬ್ರಿಡ್ಜ್ ಮ್ಯೂಚುವಲ್ ಫಂಡ್' (350 ಷೇರುಗಳು) ಹಾಗೂ 'ಟಾರಸ್ ಮ್ಯೂಚುವಲ್ ಫಂಡ್' (383 ಷೇರುಗಳು) ಹೊಂದಿವೆ.

ಷೇರು ಕುಸಿತಕ್ಕೆ ಪ್ರಮುಖ ಕಾರಣವೇನು?

ವಿಮಾ ವಿತರಣೆಯಲ್ಲಿ ಏಜೆಂಟರು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ನೀಡಲಾಗುವ ಕಮಿಷನ್‌ಗಳ ಮೇಲೆ ಗರಿಷ್ಠ ಮಿತಿ (Caps) ಹೇರಲು ಐಆರ್‌ಡಿಎಐ (IRDAI) ಪ್ರಸ್ತಾಪಿಸಿದೆ. ಆರೋಗ್ಯ (Health), ಮೋಟಾರ್ (Motor) ಹಾಗೂ ಜೀವ ವಿಮಾ (Life Insurance) ಉತ್ಪನ್ನಗಳ ಕಮಿಷನ್ ಕಡಿತಗೊಳಿಸುವ ಕುರಿತು ಸಮಾಲೋಚನಾ ವರದಿ (Consultation Paper) ಬಿಡುಗಡೆ ಮಾಡಿದೆ.

ಈ ಪ್ರಸ್ತಾಪವು ಜಾರಿಗೆ ಬಂದರೆ ಪಾಲಿಸಿಬಜಾರ್‌ನಂತಹ ವಿಮಾ ವಿತರಣಾ ಪ್ಲಾಟ್‌ಫಾರ್ಮ್‌ಗಳ ಆದಾಯ ಮತ್ತು ಲಾಭದ ಪ್ರಮಾಣಕ್ಕೆ (Margins) ತೀವ್ರ ಧಕ್ಕೆಯಾಗಲಿದೆ ಎಂಬ ಆತಂಕ ಹೂಡಿಕೆದಾರರಲ್ಲಿ ಎದುರಾಗಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆ ಜೆಫರೀಸ್ (Jefferies) ವಿಶ್ಲೇಷಣೆಯ ಪ್ರಕಾರ, ಕಮಿಷನ್ ದರದಲ್ಲಿ ಶೇ. 10 ರಷ್ಟು ಕಡಿತವಾದರೂ ಪಿಬಿ ಫಿನ್‌ಟೆಕ್‌ನ ಗಳಿಕೆಯಲ್ಲಿ ಶೇ. 10 ರಿಂದ 12 ರಷ್ಟು ಕುಸಿತವಾಗುವ ಸಾಧ್ಯತೆಯಿದೆ. ಪ್ರಸ್ತುತ ಈ ಕರಡು ಪ್ರಸ್ತಾಪವು ಸಮಾಲೋಚನಾ ಹಂತದಲ್ಲಿದ್ದು, ಐಆರ್‌ಡಿಎಐ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Reserves: ಅತಿ ಹೆಚ್ಚು ಚಿನ್ನ ಸಂಗ್ರಹ ಮಾಡಿಕೊಂಡಿರುವ ಟಾಪ್ 10 ದೇಶಗಳು, ಭಾರತದ ಸ್ಥಾನವೆಷ್ಟು?
ಜಿಯೋ IPOಗೆ ಆರಂಭದಲ್ಲೇ 2.5 ಲಕ್ಷ ಕೋಟಿ ರೂ ಬೇಡಿಕೆ, ಅಕ್ಟೋಬರ್ 19ಕ್ಕೆ ಆಂಕರ್ ಬಿಡ್ಡಿಂಗ್