5 ವರ್ಷ ನಷ್ಟಭರಿಸಿ ಇಲ್ಲವೇ ಹಂಚಿಕೆ ನೀತಿ ಬದಲಾಯಿಸಿ!

By Suvarna News  |  First Published Jun 29, 2022, 8:59 AM IST

* ಕೇಂದ್ರಕ್ಕೆ ವಿಪಕ್ಷಗಳ ಆಡಳಿತದ ರಾಜ್ಯಗಳ ಬೇಡಿಕೆ

* ರಾಜ್ಯಗಳ ಬೇಡಿಕೆ ಬಗ್ಗೆ ಇಂದು ಮಂಡಳಿ ನಿರ್ಧಾರ

* 5 ವರ್ಷ ನಷ್ಟಭರಿಸಿ ಇಲ್ಲವೇ ಹಂಚಿಕೆ ನೀತಿ ಬದಲಾಯಿಸಿ


ಚಂಡೀಗಢ(ಜೂ.29): ಜಿಎಸ್‌ಟಿ ಜಾರಿಯಾದ ಬಳಿಕ ರಾಜ್ಯಗಳಿಗೆ ಆದ ನಷ್ಟವನ್ನು ಕೇಂದ್ರ ಸರ್ಕಾರ ಭರಿಸುವ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಈ ಯೋಜನೆಯನ್ನು ಇನ್ನೂ 5 ವರ್ಷ ವಿಸ್ತರಿಸಿ ಇಲ್ಲವೇ ತೆರಿಗೆ ಆದಾಯ ಹಂಚಿಕೆ ನೀತಿಯಲ್ಲಿ ಬದಲಾವಣೆ ಮಾಡಿ ಎಂದು ವಿಪಕ್ಷಗಳ ಆಡಳಿತದ ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಿವೆ.

ಮಂಗಳವಾರದಿಂದ ಇಲ್ಲಿ ಆರಂಭವಾದ ಎರಡು ದಿನಗಳ ಜಿಎಸ್‌ಟಿ ಮಂಡಳಿ ಸಭೆಗೂ ಮುನ್ನ ವಿಪಕ್ಷಗಳ ಆಡಳಿತದ ರಾಜ್ಯಗಳು ಇಂಥದ್ದೊಂದು ಬೇಡಿಕೆ ಇಟ್ಟಿವೆ. ಈ ಕುರಿತು ಬುಧವಾರದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.

Tap to resize

Latest Videos

ಬೇಡಿಕೆ ಏನು?:

ನಷ್ಟಭರಿಸುವ ಅವಧಿ 2022ರ ಜುಲೈಗೆ ಮುಗಿಯಲಿದೆ. ಆದರೆ ರಾಜ್ಯಗಳಿಗೆ ಇನ್ನೂ ಹೆಚ್ಚಿನ ತೆರಿಗೆ ಹಣ ಹರಿದು ಬರದೇ ಇರುವ ಕಾರಣ ಇನ್ನೂ 5 ವರ್ಷ ಕೇಂದ್ರ ಸರ್ಕಾರವೇ ನಷ್ಟಭರಿಸಬೇಕು ಎಂದು ರಾಜ್ಯಗಳು ಒತ್ತಾಯಿಸಿವೆ. ಒಂದು ವೇಳೆ ಇದಕ್ಕೆ ಒಪ್ಪದೇ ಹೋದಲ್ಲಿ ಹಾಲಿ ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಜಾರಿಯಲ್ಲಿರುವ ಶೇ.50-ಶೇ.50 ಹಂಚಿಕೆ ವಿಧಾನ ಬದಲಾಯಿಸಬೇಕು. ರಾಜ್ಯಗಳಿಗೆ ಶೇ.70-80ರಷ್ಟುಪಾಲು ಕೊಡಬೇಕು ಎಂದು ಅವು ಒತ್ತಾಯಿಸಿವೆ.

ಸುಪ್ರೀಂ ತೀರ್ಪು ಉಲ್ಲೇಖಿಸಿ ಎಚ್ಚರಿಕೆ

ಇತ್ತೀಚಿನ ತೀರ್ಪೊಂದರ ವೇಳೆ ಸುಪ್ರೀಂಕೋರ್ಚ್‌, ಜಿಎಸ್‌ಟಿ ಮಂಡಳಿಯ ನಿರ್ಧಾರ ಪಾಲನೆ ರಾಜ್ಯಗಳಿಗೆ ಕಡ್ಡಾಯವಲ್ಲ. ಅದರ ನಿರ್ಧಾರ ರಾಜ್ಯಗಳ ಪಾಲಿಗೆ ಕೇವಲ ಸಲಹೆ ರೂಪದ್ದು ಎಂದು ಹೇಳಿತ್ತು. ಈ ಅಂಶಗಳನ್ನು ತಮ್ಮ ಬೇಡಿಕೆಯಲ್ಲಿ ಪ್ರಸ್ತಾಪಿಸಿರುವ ರಾಜ್ಯಗಳು, ಒಂದು ವೇಳೆ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗೆ ಒಪ್ಪದೇ ಹೋದಲ್ಲಿ ತಾವೇ ತೆರಿಗೆ ದರ ನಿಗದಿ ಮಾಡಬಹುದು ಎಂಬ ಪರೋಕ್ಷ ಎಚ್ಚರಿಕೆ ಸಂದೇಶವನ್ನು ರಾಜ್ಯಗಳಿಗೆ ರವಾನಿಸಿವೆ.

click me!