ಚಾಟ್‌ಜಿಪಿಟಿ ಖ್ಯಾತಿಯ ತಂತ್ರಜ್ಞನನ್ನೇ ವಜಾಗೊಳಿಸಿದ ಓಪನ್‌ ಎಐ ಕಂಪನಿ

By Kannadaprabha News  |  First Published Nov 19, 2023, 11:13 AM IST

ಕೃತಕ ಬುದ್ಧಿಮತ್ತೆಯ ಮುಖ ಎಂದೇ ಪ್ರಸಿದ್ಧರಾಗಿರುವ ಪ್ರಖ್ಯಾತ ತಂತ್ರಜ್ಞ ಸ್ಯಾಮ್‌ ಆಲ್ಟ್‌ಮನ್‌ ಅವರನ್ನು ಓಪನ್‌ ಎಐ ಕಂಪನಿ ಹಠಾತ್ ವಜಾಗೊಳಿಸಿದೆ. 


ನವದೆಹಲಿ: ಸೆಲೆಬ್ರಿಟಿಗಳ ಫೋಟೋಗಳನ್ನು ಸುಲಭವಾಗಿ ತಿರುಚುವ ಡೀಪ್‌ಫೇಕ್‌ ತಂತ್ರಜ್ಞಾನದ ಮೂಲವಾಗಿರುವ ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಭಾರತದಲ್ಲಿ ಬಿರುಗಾಳಿ ಎಬ್ಬಿರುವಾಗಲೇ, ಜಾಗತಿಕ ಮಟ್ಟದಲ್ಲಿ ‘ಕೃತಕ ಬುದ್ಧಿಮತ್ತೆಯ ಮುಖ’ ಎಂದೇ ಪ್ರಸಿದ್ಧರಾಗಿರುವ ಪ್ರಖ್ಯಾತ ತಂತ್ರಜ್ಞ ಸ್ಯಾಮ್‌ ಆಲ್ಟ್‌ಮನ್‌ ಅವರನ್ನು ಓಪನ್‌ ಎಐ ಕಂಪನಿ ಹಠಾತ್ ವಜಾಗೊಳಿಸಿದೆ. ಈ ಬೆಳವಣಿಗೆ ವಿಶ್ವ ತಂತ್ರಜ್ಞಾನ ಲೋಕದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆಲ್ಟ್‌ಮನ್‌ ಅವರ ಸ್ಥಾನಕ್ಕೆ ಮಿರಾ ಮುರಾಟಿ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ.

ಕಳೆದ ವರ್ಷ ಚಾಟ್‌ಜಿಪಿಟಿ (ChatGPT) ಬಿಡುಗಡೆ ಮೂಲಕ ವಿಶ್ವಾದ್ಯಂತ ಓಪನ್‌ ಎಐ ಕಂಪನಿ (AI company) ಗಮನಸೆಳೆದಿತ್ತು. ಆ ಕಂಪನಿಗೆ ಸ್ಯಾಮ್‌ ಆಲ್ಪ್‌ಮನ್‌ ಅವರು ಸಹಸಂಸ್ಥಾಪಕರಾಗಿದ್ದರು. ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Chief Executive Officer) ಆಗಿ ಸೇವೆ ಸಲ್ಲಿಸುತ್ತಿದ್ದರು. ಸ್ಯಾಮ್‌ ಜತೆಗೆ ಮತ್ತೊಬ್ಬ ಸಹಸಂಸ್ಥಾಪಕ ಗ್ರೇಗ್‌ ಬ್ರೊಕ್‌ಮನ್‌ (Greg Brockman) ಅವರನ್ನು ಕೂಡ ದಿಢೀರನೆ ಕಂಪನಿಯಿಂದ ಕಿತ್ತು ಹಾಕಲಾಗಿದೆ.

Tap to resize

Latest Videos

ಡೀಪ್‌ಫೇಕ್ ಬಗ್ಗೆ ಪ್ರಧಾನಿ ಮೋದಿ ಕಳವಳ: ಕೃತಕ ಬುದ್ಧಿಮತ್ತೆಯ ದುರ್ಬಳಕೆ ಬಗ್ಗೆ ಅತಂಕ

ಗಮನಾರ್ಹ ಎಂದರೆ, ಮಾತನಾಡಬೇಕು ಎಂದು ಗೂಗಲ್‌ ಮೀಟ್‌ ಲಿಂಕ್‌ (Google Meet link) ಅನ್ನು ಕಳುಹಿಸಿ, ಆನ್‌ಲೈನ್‌ ಸಭೆಗೆ ಹಾಜರಾಗುತ್ತಿದ್ದಂತೆ ಕಂಪನಿಯಿಂದ ವಜಾಗೊಳಿಸಲಾಗಿದೆ. ಓಪನ್‌ ಎಐ ಕಂಪನಿಯ ಸಹಸಂಸ್ಥಾಪಕ ಹಾಗೂ ನಿರ್ದೇಶಕ ಮಂಡಳಿ ಸದಸ್ಯ ಇಲ್ಯಾ ಸುಟ್ಸ್‌ಕೀವರ್‌ ಅವರು ಇಬ್ಬರಿಗೂ ವಜಾ ವಿಷಯವನ್ನು ಪ್ರಕಟಿಸಿದ್ದಾರೆ.

ಈ ಬೆಳವಣಿಗೆಯಿಂದ ಸ್ಯಾಮ್‌ ಹಾಗೂ ತಮಗೆ ತೀವ್ರ ಆಘಾತ ಹಾಗೂ ದುಃಖವಾಗಿದೆ. ಏನಾಗಿದೆ ಎಂಬುದನ್ನು ಅರಗಿಸಿಕೊಳ್ಳಲೇ ಆಗುತ್ತಿಲ್ಲ ಎಂದು ಗ್ರೇಗ್‌ ತಿಳಿಸಿದ್ದಾರೆ. ಅಲ್ಲದೆ ತಮಗೆ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

ತಮ್ಮ ವಜಾ ಕುರಿತು ಸ್ಯಾಮ್‌ ಆಲ್ಟ್‌ಮನ್‌ ಕೂಡ ಪ್ರತಿಕ್ರಿಯಿಸಿದ್ದು, ಹಲವು ಬಗೆಯಲ್ಲಿ ಇದೊಂದು ವಿಚಿತ್ರ ಅನುಭವವಾಗಿದೆ. ಆದರೆ ವ್ಯಕ್ತವಾಗುತ್ತಿರುವ ಪ್ರೀತಿ ಮಾತ್ರ ಅದ್ಭುತವಾಗಿದೆ ಎಂದಿದ್ದಾರೆ.

ವಜಾ ಮಾಡಿದ್ದು ಏಕೆ?

ಆಲ್ಟ್‌ಮನ್‌ ವಜಾ ಮಾಡಿದ ನಿರ್ಧಾರ ಕೈಗೊಂಡಿದ್ದು ಏಕೆ ಎಂಬುದಕ್ಕೆ ಓಪನ್‌ ಎಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಸಂಹವನದಲ್ಲಿ ಸುಸ್ಥಿರ ಸ್ಪಷ್ಟತೆ ಆಲ್ಟ್‌ಮನ್‌ಗೆ ಇರಲಿಲ್ಲ. ಜವಾಬ್ದಾರಿಯನ್ನು ನಿಭಾಯಿಸಲು ಸಮಸ್ಯೆ ಎದುರಿಸುತ್ತಿದ್ದರು. ಅವರ ಸಾಮರ್ಥ್ಯದ ಬಗ್ಗೆ ನಿರ್ದೇಶಕ ಮಂಡಳಿಗೆ ವಿಶ್ವಾಸ ಇರಲಿಲ್ಲ. ಹೀಗಾಗಿ ವಿಸ್ತೃತ ಚರ್ಚೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಭಾರತದ AI ಜರ್ನಿ: ನೀತಿ, ನಿರೀಕ್ಷೆ ಮತ್ತು ಭವಿಷ್ಯದ ಹಾದಿ ಹೀಗಿದೆ..

ಯಾರು ಸ್ಯಾಮ್‌ ಆಲ್ಟ್‌ಮನ್‌?

ಜಾಗತಿಕ ತಂತ್ರಜ್ಞಾನ ಲೋಕದಲ್ಲಿ ಸಂಚಲನ ಮೂಡಿಸಿರುವ ಅಮೆರಿಕ ವ್ಯಕ್ತಿ. 38 ವರ್ಷ. ಕಳೆದ ವರ್ಷ ಓಪನ್‌ ಎಐ ಕಂಪನಿಯು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ ಆದ ಚಾಟ್‌ಜಿಪಿಟಿ ಅನ್ನು ಬಿಡುಗಡೆ ಮಾಡಿತ್ತು. ಅದರ ಹಿಂದಿನ ಮೆದುಳು ಆಲ್ಟ್‌ಮನ್‌ ಎಂದು ಬಣ್ಣಿಸಲಾಗಿತ್ತು.

ಯಾರು ಮಿರಾ ಮುರಾಟಿ?

ಆಲ್ಬೇನಿಯಾ ಮೂಲದವರು. ಕೆನಡಾದಲ್ಲಿ ಬೆಳೆದವರು. 34 ವರ್ಷ. ಓಪನ್‌ ಎಐ ಕಂಪನಿಯಲ್ಲಿ 2022ರ ಮೇ ತಿಂಗಳಿನಿಂದ ಮುಖ್ಯ ತಾಂತ್ರಿಕ ಅಧಿಕಾರಿಯಾಗಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ಹೈಬ್ರಿಡ್‌ ರೇಸ್‌ ಕಾರ್‌ ಸೃಷ್ಟಿಸಿ ಗಮನ ಸೆಳೆದಿದ್ದರು. ಚಾಟ್‌ಜಿಪಿಟಿ ಆವೃತ್ತಿಗಳು ಸಕಾಲಕ್ಕೆ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

click me!