
ನವದೆಹಲಿ (ಜೂ.13): ಭಾರತದ ಆನ್‌ಲೈನ್ ಫುಡ್ ಡೆಲಿವರಿ ಅಗ್ರಿಗೇಟರ್ ಜೊಮಾಟೋಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ವಿವಾದಾತ್ಮಕ ಜಾಹೀರಾತಿಗಾಗಿ ನೋಟಿಸ್ ಅನ್ನು ಜಾರಿ ಮಾಡಿದೆ. ಅನೇಕರು ಜೊಮಾಟೋ ಬಿತ್ತರ ಮಾಡಿರುವ ಈ ಜಾಹೀರಾತು ಜಾತಿವಾದಿಯಾಗಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ವಿವಾದ ಎದುರಾದ ಬೆನ್ನಲ್ಲಿಯೇ ಪ್ರಖ್ಯಾತ ಬಾಲಿವುಡ್ ಚಿತ್ರ ಲಗಾನ್‌ನಲ್ಲಿ ದಲಿತ ವ್ಯಕ್ತಿ 'ಕಚರಾ' ಪಾತ್ರ ಮಾಡಿದ್ದವರನ್ನು ಮರುಬಳಕೆಯ ತ್ಯಾಜ್ಯದಿಂದ ಮಾಡಿದ ವಸ್ತುಗಳಂತೆ ಚಿತ್ರಿಸಿದ ಜಾಹೀರಾತನ್ನು ಜೊಮಾಟೋ ಕೂಡ ಹಿಂಪಡೆದುಕೊಂಡಿದೆ. ಈ ಜಾಹೀರಾತಿನಲ್ಲಿ ಕಚ್ರಾ ಮತ್ತು "ಕಚ್ರಾ" (ಕಸಕ್ಕೆ ಹಿಂದಿ ಪದ) ನಡುವೆ ಸಮಾನಾಂತರವಾಗಿ ಚಿತ್ರಿಸಲಾಗಿದೆ ಮತ್ತು ಜೂನ್ 5 ರಂದು ವಿಶ್ವ ಪರಿಸರ ದಿನದಂದು ಇದನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಗಿತ್ತು. ಈ ಜಾಹೀರಾತು ಪ್ರಸಾರವಾದ ಬೆನ್ನಲ್ಲಿಯೇ 'ಬಾಯ್ಕಾಟ್ ಜೊಮಾಟೊ' ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು ಮಾತ್ರವಲ್ಲದೆ ಕಂಪನಿಯು ತನ್ನ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಅದರೊಂದಿಗೆ ಕೆಲವು ಸಮುದಾಯಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ನಮಗೆ ಇಂಥ ಉದ್ದೇಶಗಳೇ ಇದ್ದಿರಲಿಲ್ಲ. ಹಾಗಿದ್ದರೂ ನಾವು ಕೆಲವು ಸಮುದಾಯಗಳು ಹಾಗೈ ವ್ಯಕ್ತಿಗಳ ಭಾವನೆಗಳನ್ನು ನೋಯಿಸಿರಬಹುದು. ಹಾಗಾಗಿ ಈ ಜಾಹೀರಾತನ್ನು ವಾಪಾಸ್ ಪಡೆದುಕೊಂಡಿದ್ದೇವೆ ಎಂದು ಕಂಪನಿ ಹೇಳಿದೆ.
"ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಜಾಗೃತಿ ಮತ್ತು ಮರುಬಳಕೆಯ ಪ್ರಯೋಜನಗಳ ಬಗ್ಗೆ ಹಾಸ್ಯಮಯ ರೀತಿಯಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಗುರುಗ್ರಾಮದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಜೊಮಾಟೋ ಸಂಸ್ಥೆ ತಿಳಿಸಿದೆ. ಹಾಗಿದ್ದರೂ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಕಂಪನಿಯ ಕ್ಷಮೆಯಾಚನೆಯಿಂದ ಸುಮ್ಮನಾಗಿಲ್ಲ. ಜೊಮಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರಿಗೆ ನೋಟಿಸ್ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದೆ. "ನಿಗದಿತ ಸಮಯದೊಳಗೆ ಆಯೋಗವು ನಿಮ್ಮಿಂದ ಉತ್ತರವನ್ನು ಸ್ವೀಕರಿಸದಿದ್ದರೆ, ಆಯೋಗವು ನೀವು ವೈಯಕ್ತಿಕವಾಗಿ ಹಾಜರಾಗಲು ಸಮನ್ಸ್ ನೀಡಬಹುದು" ಎಂದು ಜೊಮಾಟೋ ಸಂಸ್ಥಾಪಕರಿಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏನಿದು ಘಟನೆ: ಕಚರಾ ಅನ್ನೋದು ಹಿಂದಿ ಚಿತ್ರ ಲಗಾನ್‌ನಲ್ಲಿದ್ದ ಪ್ರಖ್ಯಾತ ಪಾತ್ರವಾಗಿದೆ. ಐತಿಹಾಸಿಕ ಕ್ರೀಡಾ ಕೇಂದ್ರಚಿತ ಸಿನಿಮಾದಲ್ಲಿ ಆಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, 2001ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕಚರಾ ಪಾತ್ರವನ್ನು ನಟ ಆದಿತ್ಯ ಲಖಿಯಾ ನಿರ್ವಹಿಸಿದ್ದರು. ಅವರು ತೀರಾ ತಳ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿರುವುದು ಮಾತ್ರವಲ್ಲದೆ ಗ್ರಾಹದ ಜನರೇ ಈ ಜಾತಿಯವರನ್ನು ಕೀಳಾಗಿ ನೋಡಿ ಅವರಿಂದ ದೂರವಿರುತ್ತಿದ್ದರು. ಆದರೆ, ಅವರಲ್ಲಿದ್ದ ವಿಶೇಷ ಸ್ಪಿನ್ ಬೌಲಿಂಗ್ ತಂತ್ರದ ಕಾರಣದಿಂದಾಗಿ, ಆಮೀರ್ ಖಾನ್ ನಿರ್ವಹಿಸಿದ್ದ ಭುವನ್ ಪಾತ್ರದಾರಿ ಕಚ್ರಾನನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ಕೊನೆಗೆ ಬ್ರಿಟಿಷರ ವಿರುದ್ಧ ಪ್ರಮುಖ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗುತ್ತಾರೆ.
'ಕಾಫಿಗೂ..ಸೆಕ್ಸ್ ಚೇಂಜ್‌ಗೂ ಏನ್ ಸಂಬಂಧ..' ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಸ್ಟಾರ್‌ಬಕ್ಸ್ ಹೊಸ ಜಾಹೀರಾತು!
ವಿವಾದಿತ ಜಾಹೀರಾತಿನಲ್ಲಿ ಏನಿದೆ: ಅಂದಾಜು 120 ನಿಮಿಷಗಳ ದೀರ್ಘ ಜಾಹೀರಾತಿನಲ್ಲಿ ಸ್ವತಃ ಆದಿತ್ಯ ಲಖಿಯಾ ಕಚರಾ ಪಾತ್ರವನ್ನೇ ನಿರ್ವಹಿಸಿದ್ದು, ದೀಪ, ಪೇಪರ್, ಪೇಪರ್ ವೇಟ್, ವಾಟರ್ ಕ್ಯಾನ್ ಹಾಗೂ ಭಿನ್ನ ಮಾದರಿಯ ಜಾಕೆಟ್‌ಗಳಾಗಿ ನಟಿಸಿದ್ದಾರೆ. ಆ ಮೂಲಕಕಸವನ್ನು ಯಾವುದೇ ರೀತಿಯ ಉಪಯುಕ್ತ ವಸ್ತುಗಳಾಗಿ ಮರುಬಳಕೆ ಮಾಡಬಹುದು ಎನ್ನುವ ಸಂದೇಶವನ್ನು ಈ ಜಾಹೀರಾತಿನ ಮೂಲಕ ನೀಡಲಾಗಿದೆ. ಮರುಬಳಕೆ ಮಾಡಿದರೆ, ಕಚರಾ ಕೂಡ ಬಳಕೆಗೆ ಬರುತ್ತದೆ ಎಂದು ಹೇಳುವ ಮೂಲಕ ಜೊಮಾಟೋ ಈ ಜಾಹೀರಾತನ್ನು ಮುಗಿಸುತ್ತದೆ.
ತನಿಷ್ಕ್ -ಪೇಟಿಎಮ್: 2020ರ ಹೆಚ್ಚು ವಿವಾದತ್ಮಕ ಜಾಹೀರಾತುಗಳು!
ದಾರಿ ತಪ್ಪಿದ ತಮಾಷೆ: ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಕಾರ್ತಿ ಶ್ರೀನಿವಾಸನ್, ಜೊಮಾಟೋ ಕಚರಾ ಎನ್ನುವ ಶಬ್ದವನ್ನು ಬಳಸಿಕೊಂಡು ಜಾಹೀರಾತು ಮಾಡಿತ್ತು. ಆದರೆ, ಅದರ ಪರಿಣಾಮದ ಬಗ್ಗೆ ಕೊಂಚವೂ ಅರಿವಿರಲಿಲ್ಲ ಎಂದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.