ಲಕ್ಷ ಕೋಟಿ ರು. ಕಂಪನಿ ಒಡತಿ ಫಲ್ಗುಣಿ ನಾಯರ್‌, ಈ ಸಾಧನೆ ಮಾಡಿದ ದೇಶದ ಮೊದಲ ಮಹಿಳೆ!

By Suvarna News  |  First Published Nov 11, 2021, 7:06 AM IST

* ನಾಯಿಕಾ ಕಾಸ್ಮೆಟಿಕ್ಸ್‌ ಕಂಪನಿಗೆ ಹಣದ ಹೊಳೆ

* ಲಕ್ಷ ಕೋಟಿ ರು. ಕಂಪನಿ ಒಡತಿ ಫಲ್ಗುಣಿ ನಾಯರ್‌ ಐಪಿಒ

* ಮಹಿಳಾ ಉದ್ಯಮಿ ಆಸ್ತಿ ಮೌಲ್ಯ .56000 ಕೋಟಿ


ಮುಂಬೈ(ನ.11): ಮುಂಬೈ (Mumbai) ಮೂಲದ ನಾಯಿಕಾ ಕಂಪನಿಯ ಒಡತಿ ಫಲ್ಗುಣಿ ನಾಯರ್‌ (Nykaa founder Falguni Nayar) ಬುಧವಾರ ದಿಢೀರನೆ 1 ಲಕ್ಷ ಕೋಟಿ ರು. ಮೌಲ್ಯದ ಕಂಪನಿಯ ಒಡತಿಯಾಗಿ ಹೊರಹೊಮ್ಮಿದ್ದಾರೆ. ಅಷ್ಟುಮಾತ್ರವಲ್ಲ, ಒಂದೇ ದಿನದಲ್ಲಿ ಅವರು ಭಾರತದ ಟಾಪ್‌ 20 ಶ್ರೀಮಂತರು ಮತ್ತು ವಿಶ್ವದ ಟಾಪ್‌ 350 ಶ್ರೀಮಂತರ ಪಟ್ಟಿಯೊಳಗೆ ಸೇರಿದ್ದಾರೆ. ಕೇವಲ 9 ವರ್ಷಗಳ ಹಿಂದೆ ಫಲ್ಗುಣಿ ಅವರು ಸಣ್ಣದಾಗಿ ಆರಂಭಿಸಿದ್ದ ಶೃಂಗಾರ ಸಾಮಗ್ರಿಗಳ ಕಂಪನಿ ಇದೀಗ ಅವರನ್ನು ಇಂಥದ್ದೊಂದು ಹಂತಕ್ಕೆ ಏರಿಸಿದೆ.

ಫಲ್ಗುಣಿ ಅವರ ಬೆಳವಣಿಗೆ ದಿಢೀರ್‌ ಆದರೂ ಪರಿಶ್ರಮದಾಯಕ ಸಾಧನೆಗೆ ಕಾರಣವಾಗಿದ್ದು ಅವರ ಒಡೆತನದ ನಾಯಿಕಾ (Nykaa) ಕಂಪನಿ ಬುಧವಾರ ಷೇರುಪೇಟೆ ಪ್ರವೇಶ ಮಾಡಿದ್ದು. ನಾಯಿಕಾ ಕಂಪನಿಯ ಷೇರುಗಳು ಬುಧವಾರ ಬಾಂಬೆ ಷೇರುಪೇಟೆಯಲ್ಲಿ ಭಾರೀ ಏರಿಕೆಯೊಂದಿಗೆ ನೋಂದಣಿಯಾಗುವುದರ ಮೂಲಕ ಫಲ್ಗುಣಿ ( Falguni Nayar) ಅವರ ಸಂಪತ್ತು ಒಂದೇ ದಿನದಲ್ಲಿ 56000 ಕೋಟಿ ರು. ದಾಟಿದೆ. ನಾಯಿಕಾ ಕಂಪನಿ ಪ್ರತಿ ಷೇರಿಗೆ ತಲಾ 1125 ರು.ನಂತೆ ಐಪಿಒ ಬಿಡುಗಡೆ ಮಾಡಿತ್ತಾದರೂ, ಅವು ಬುಧವಾರ 2001 ರು.ಗೆ ಲಿಸ್ಟ್‌ ಆಗಿ, ಬಳಿಕ 2248 ರು.ನೊಂದಿಗೆ ದಿನ ಪೂರೈಸಿವೆ. ಈ ಮೂಲಕ ಕಂಪನಿಯ ಮಾರುಕಟ್ಟೆಮೌಲ್ಯ 1.04 ಲಕ್ಷ ಕೋಟಿ ರು.ದಾಟಿದೆ. ಹೀಗಾಗಿ ಅವರೀಗ 1 ಲಕ್ಷ ಕೋಟಿ ರು. ಮೌಲ್ಯದ ಕಂಪನಿಯ ಒಡತಿ.

Latest Videos

undefined

ಇನ್ನು ಕಂಪನಿಯಲ್ಲಿ ಫಲ್ಗುಣಿ ಮತ್ತು ಅವರ ಕುಟುಂಬ ಶೇ.54ರಷ್ಟುಷೇರುಪಾಲು ಹೊಂದಿರುವ ಕಾರಣ, ಅವರ ವೈಯಕ್ತಿಕ ಆಸ್ತಿ ಮೊತ್ತವೂ 56000 ಕೋಟಿ ರು. ದಾಟಿದೆ. ಹೀಗಾಗಿ ಅವರೀಗ ವಿಶ್ವದ ಟಾಪ್‌ 350 ಶ್ರೀಮಂತರ ಪಟ್ಟಿಮತ್ತು ಭಾರತದ ಟಾಪ್‌ 20 ಶ್ರೀಮಂತರಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಸ್ವಂತ ಪರಿಶ್ರಮದಿಂದ ಇಷ್ಟುಆಸ್ತಿ ಸಂಪಾದನೆ ಮಾಡಿದ ಮೊದಲ ಮಹಿಳೆ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ನಾಯಿಕಾ ಕಾಸ್ಮೆಟಿಕ್ಸ್‌ ಕಂಪನಿ:

ಗುಜರಾತ್‌ (Gujarat) ಮೂಲದ, ಮುಂಬೈನಲ್ಲಿ ಬೆಳೆದ ಫಲ್ಗುಣಿ ( Falguni Nayar) ಮ್ಯಾನೇಜ್‌ಮೆಂಟ್‌ ಪದವಿ ಪಡೆದು ಹಲವು ವರ್ಷಗಳ ಕಾಲ ಬ್ಯಾಂಕಿಂಗ್‌ ವಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದರು. 2012ರಲ್ಲಿ 50ನೇ ವರ್ಷಕ್ಕೆ ಕಾಲಿಡುವುದಕ್ಕೆ ಕೆಲವೇ ದಿನಗಳ ಮೊದಲು, ಉದ್ಯೋಗ ತೊರೆದ ಫಲ್ಗುಣಿ, ನಾಯಿಕಾ (Nykaa) ಎಂಬ ಕಂಪನಿ ಸ್ಥಾಪಿಸಿದ್ದರು. ಶೃಂಗಾರ ಸಾಮಗ್ರಿಗಳಾದ (Cosmetics) ನೇಲ್‌ ಪಾಲಿಷ್‌, ಲಿಪ್‌ಸ್ಟಿಕ್‌, ಪೌಡರ್‌, ಕ್ರೀಮ್‌, ವಿವಾಹ ಸೌಂದರ್ಯ ಸಾಮಗ್ರಿ, ಕೇಶ ಸಾಮಗ್ರಿಗಳನ್ನು ಈ ಕಂಪನಿ ಉತ್ಪಾದಿಸುತ್ತಿದೆ. ಸಂಸ್ಕೃತದಲ್ಲಿ ನಾಯಕಿಗೆ (Leader) ನಾಯಿಕಾ ಎಂಬ ಪದವಿದ್ದು, ಅದನ್ನೇ ಮಹಿಳೆಯರ ಶೃಂಗಾರ ಸಾಮಗ್ರಿಗಳ ಕುರಿತ ತಮ್ಮ ಕಂಪನಿಯ ಹೆಸರನ್ನಾಗಿ ಫಲ್ಗುಣಿ ಇಟ್ಟಿದ್ದರು. ಕಳೆದ ವರ್ಷ ಕಂಪನಿಯ ಮಾರಾಟ ಶೇ.35ರಷ್ಟುಏರಿಕೆ ಕಂಡು 2475 ಕೋಟಿ ರು. ತಲುಪಿತ್ತು. ಜೊತೆಗೆ ಕಂಪನಿ ಅತ್ಯಂತ ಲಾಭದಲ್ಲೇ ಮುನ್ನಡೆಯುತ್ತಿದೆ. ಹೀಗಾಗಿ ವಹಿವಾಟು ವಿಸ್ತರಣೆಗೆ ಕಂಪನಿ ಷೇರು ಮಾರುಕಟ್ಟೆಪ್ರವೇಶಿಸುವ ನಿರ್ಧಾರ ಕೈಗೊಂಡಿತ್ತು.

ನನ್ನ 50ನೇ ವರ್ಷದಲ್ಲಿ ಯಾವುದೇ ಅನುಭವ ಇಲ್ಲದೆ ನಾಯಿಕಾ ಕಂಪನಿ ಸ್ಥಾಪಿಸಿದ್ದೆ. ಗುಣಮಟ್ಟದ ಉತ್ಪನ್ನವೊಂದೇ ನಮ್ಮ ಗುರಿ. ಅದೇ ಗುರಿ ನಮ್ಮನ್ನು ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ನಮ್ಮ ಕಂಪನಿಯ ಈ ಸಾಧನೆಯ ಹಾದಿ ಪ್ರತಿಯೊಬ್ಬ ನಾಯಿಕಾ (ನಾಯಕಿಗೂ)ಗೂ ಸ್ಫೂರ್ತಿಯಾಗಲಿ ಎಂಬುದೇ ನನ್ನ ಆಶಯ.

ಫಲ್ಗುಣಿ ನಾಯರ್‌, ನಾಯಿಕಾ ಸಿಇಒ

click me!