EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ

By Suvarna NewsFirst Published Mar 27, 2024, 1:21 PM IST
Highlights

ಇಪಿಎಫ್ ಖಾತೆಗೆ ಕೆವೈಸಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಇಪಿಎಫ್ ಒ ಹೊಸ ಸೌಲಭ್ಯವನ್ನು ಕಲ್ಪಿಸಿದೆ. ಇದು ಇಪಿಎಫ್ ಸದಸ್ಯರಿಗೆ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. 
 

ನವದೆಹಲಿ (ಮಾ.27): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಸದಸ್ಯರ ಇ-ಸೇವಾ ಪೋರ್ಟಲ್ ನಲ್ಲಿ ಹೊಸ ಆನ್ ಲೈನ್ ವಿಧಾನವೊಂದನ್ನು ಪರಿಚಯಿಸಿದೆ. ಇದರ ಮೂಲಕ ಇಪಿಎಫ್ ಸದಸ್ಯರು ಈಗ ತಮ್ಮ ನೌ ಯುವರ್ ಕಸ್ಟಮರ್ (ಇ-ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹಾಗೆಯೇ ತಮ್ಮ ಇಪಿಎಫ್ ಖಾತೆಯಲ್ಲಿನ ತಪ್ಪುಗಳನ್ನು ಸರಿಪಡಿಸಬಹುದು. 'ಜಂಟಿ ಘೋಷಣೆ' ಹೆಸರಿನ ಈ ಹೊಸ ಸೌಲಭ್ಯ ಇಪಿಎಫ್ ಸದಸ್ಯರಿಗೆ ಕೆವೈಸಿ ಪ್ರಕ್ರಿಯೆ ಸರಳಗೊಳಿಸಿರುವ ಜೊತೆಗೆ ಆಪ್ ಲೈನ್ ಸಲ್ಲಿಕೆ ಅಗತ್ಯವನ್ನು ತಗ್ಗಿಸಿದೆ. ಈ ಹೊಸ ಸೌಲಭ್ಯ ಇಪಿಎಫ್ ಯೋಜನೆ ಪ್ಯಾರಾ 26(6) ಅಡಿಯಲ್ಲಿ ಇಪಿಎಫ್ ಸದಸ್ಯರಿಗೆ ಅಗತ್ಯವಿದ್ದ ಜಂಟಿ ಘೋಷಣಾ ನಮೂನೆಗಿಂತ ಭಿನ್ನವಾಗಿದೆ. ನಿಗದಿತ ಮಿತಿ (ಪ್ರಸ್ತುತ ತಿಂಗಳಿಗೆ 15,000ರೂ.) ಮೀರಿದ ಮೂಲ ವೇತನ ಹೊಂದಿರೋರು ಇಪಿಎಫ್ ಖಾತೆಗೆ ಹೆಚ್ಚಿನ ಕೊಡುಗೆ ನೀಡಲು ಬಯಸಿದ್ದರೆ ಅಂಥವರಿಗೆ ಈ ಹೊಸ ಅರ್ಜಿ ನಮೂನೆ ಕಡ್ಡಾಯ. 

ಈ ಹೊಸ ಸೌಲಭ್ಯವನ್ನು ಜಂಟಿ ಘೋಷಣೆ ಎಂದು ಕೂಡ ಕರೆಯಲಾಗುತ್ತದೆ. ಇದು ಸದಸ್ಯರಿಗೆ ತಮ್ಮ ಕೆವೈಸಿ ಮಾಹಿತಿಗಳನ್ನು ಆಪ್ ಲೈನ್ ಬದಲು ಆನ್ ಲೈನ್ ನಲ್ಲಿ ಅಪ್ಡೇಟ್ ಮಾಡಲು ನೆರವು ನೀಡುತ್ತದೆ. ಇದು ಅವರಿಗೆ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಇಪಿಎಫ್ ಒ ಪೋರ್ಟಲ್ ನಲ್ಲಿ ಪರಿಶೀಲಿಸಲು ಹಾಗೂ ಬದಲಾಯಿಸಲು ನೆರವು ನೀಡುತ್ತದೆ. ಅಲ್ಲದೆ, ಇದು ಇಪಿಎಫ್ ಒ ಸದಸ್ಯರ ವಿತ್ ಡ್ರಾ ಮನವಿಯನ್ನು ಪ್ಯಾನ್, ಆಧಾರ್ ಹಾಗೂ ಇತರ ಮಾಹಿತಿಗಳ ಕೊರತೆಯಿಂದ ತಿರಸ್ಕರಿಸದಂತೆ ತಡೆಯುತ್ತದೆ. 

ನೀವು ಎರಡು ಇಪಿಎಫ್ ಯುಎಎನ್ ಹೊಂದಿದ್ದೀರಾ? ಹಾಗಾದ್ರೆ ತಡಮಾಡದೆ ಈ ಕೆಲ್ಸ ಮಾಡಿ

ಕೆವೈಸಿ ಅಪ್ಡೇಟ್ ಗೂ ಮುನ್ನ ಈ ಕೆಲ್ಸ ಮಾಡಿ
ಕೆವೈಸಿ ಅಪ್ಡೇಟ್ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸಿ. ಆದರೆ, ನೆನಪಿಡಿ ಕೆಲವು ಮಾಹಿತಿಗಳಿಗೆ ಸೀಮಿತ ಪರಿಷ್ಕರಣೆಗೆ ಮಾತ್ರ ಅವಕಾಶ ಇದೆ. 11 ವೈಯಕ್ತಿಕ ಮಾಹಿತಿಗಳ ಹಾಗೂ 6 ಸೇವಾ ಸಂಬಂಧಿ ಮಾಹಿತಿಗಳ ಅಪ್ಡೇಟ್ ಗೆ ಇಪಿಎಫ್ಒ ಅನುಮತಿ ನೀಡುತ್ತದೆ. 

ವೈಯಕ್ತಿಕ ಮಾಹಿತಿಗಳು: ಹೆಸರು, ಜನ್ಮದಿನಾಂಕ, ಲಿಂಗ, ಪಾಲಕರ ಮಾಹಿತಿ, ಸಂಬಂಧದ ಸ್ಟೇಟಸ್, ವೈವಾಹಿಕ ಸ್ಟೇಟಸ್, ರಾಷ್ಟ್ರೀಯತೆ, ಆಧಾರ್ ಸಂಖ್ಯೆ
ಸೇವಾ ಮಾಹಿತಿಗಳು: ಇಪಿಎಫ್ ಸೇರ್ಪಡೆ ಹಾಗೂ ನಿರ್ಗಮನ ದಿನಾಂಕ, ಇಪಿಎಫ್ ಬಿಡಲು ಕಾರಣ, ಸೇರ್ಪಡೆ ಹಾಗೂ ಬಿಡುತ್ತಿರುವ ದಿನಾಂಕ, ಇಪಿಎಸ್ ಬಿಡಲು ಕಾರಣ.

ಇನ್ನು ಈ ಎಲ್ಲ ಮಾಹಿತಿಗಳ ಪರಿಷ್ಕರಣೆಗೆ ಇಪಿಎಫ್ ಒ ಕೆಲವೊಂದು ದಾಖಲೆಗಳನ್ನು ಕೂಡ ಕೇಳುತ್ತದೆ. ಅಂಥ ದಾಖಲೆಗಳನ್ನು ಒದಗಿಸೋದು ಕೂಡ ಅಗತ್ಯ. 

ಕೆವೈಸಿ ಆನ್ ಲೈನ್ ನಲ್ಲಿ ಅಪ್ಡೇಟ್ ಮಾಡೋದು ಹೇಗೆ?
ಹಂತ 1:
ಇಪಿಎಫ್ಒ ಸದಸ್ಯರ ಇ-ಸೇವಾ ಪೋರ್ಟಲ್ ಗೆ  ಭೇಟಿ ನೀಡಿ.
ಹಂತ 2: ಯುಎಎನ್, ಪಾಸ್ ವರ್ಡ್ ಹಾಗೂ ಕ್ಯಾಪ್ಚ ಕೋಡ್ ಬಳಸಿ ನಿಮ್ಮ ಇಪಿಎಫ್ ಖಾತೆಗೆ ಲಾಗಿನ್ ಆಗಿ.
ಹಂತ 3: ‘Manage’ವಿಭಾಗದಡಿ  "Joint Declaration" ಆಯ್ಕೆ ಮಾಡಿ. ಆ ಬಳಿಕ ಸದಸ್ಯರ ಐಡಿ ಆಯ್ಕೆ ಮಾಡಿ. ಅಲ್ಲಿಅಗತ್ಯ ಮಾಹಿತಿ ತಿದ್ದುಪಡಿ ಮಾಡಬಹುದು. ಇನ್ನು ಸಾಮಾನ್ಯ ಕೆವೈಸಿ ಅಪ್ಡೇಟ್ ಗೆ  ‘Manage’ವಿಭಾಗದಡಿ  'ಕೆವೈಸಿ' ಆಯ್ಕೆ ಮೇಲೆ ಕ್ಲಿಕ್ ಮಾಡಿ. 
ಹಂತ 4: ಇಪಿಎಫ್ ಒ ದಾಖಲೆಗಳನ್ನು ಪರಿಶೀಲಿಸಿ ಹಾಗೂ ಅಲ್ಲಿ ಒದಗಿಸಿರುವ ತಿದ್ದುಪಡಿ ಬಾಕ್ಸ್ ನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿ. ಆ ಬಳಿಕ ಆಧಾರ್ ದೃಢೀಕರಣಕ್ಕೆ ಅನುಮತಿ ನೀಡಿ ಹಾಗೂ 'Proceed' ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ನಿಷೇಧ ಹೇರಿದ ಇಪಿಎಫ್ಒ; ಈ ಬ್ಯಾಂಕ್ ಖಾತೆ ಹೊಂದಿರೋ ಇಪಿಎಫ್ ಸದಸ್ಯರೇನು ಮಾಡ್ಬೇಕು?

ಈಗ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿರುತ್ತದೆ. ಜಂಟಿ ಘೋಷಣೆಯನ್ನು ಯಶಸ್ವಿಯಾಗಿ ಸಲ್ಲಿಕೆ ಮಾಡಿದ ಬಳಿಕ ಇದು ಉದ್ಯೋಗದಾತ ಸಂಸ್ಥೆಯ ಅನುಮೋದನೆಗೆ ಹೋಗುತ್ತದೆ. ಉದ್ಯೋಗದಾತ ಸಂಸ್ಥೆ ತಮ್ಮ ದಾಖಲೆಗಳಲ್ಲಿ ಉದ್ಯೋಗಿಗೆ ಸಂಬಂಧಿಸಿದ ಮಾಹಿತಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಹೀಗೆ ಉದ್ಯೋಗದಾತ ಸಂಸ್ಥೆ ಅನುಮೋದನೆ ನೀಡಿದ ಬಳಿಕ ಜಂಟಿ ಘೋಷಣೆ ಇಪಿಎಫ್ಒ ಕಚೇರಿ ಸೇರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಅನುಮೋದನೆ ನೀಡಿದ ಬಳಿಕ ಇಪಿಎಫ್ಒ ಪೋರ್ಟಲ್ ನಲ್ಲಿ ಬದಲಾವಣೆಗಳು ಕಾಣಿಸುತ್ತದೆ. ಇನ್ನು ಕೆವೈಸಿ ಅಪ್ಡೇಟ್ ಗೆ 20-25 ದಿನಗಳು ಹಿಡಿಯುತ್ತವೆ. 

click me!