ಬಡ್ಡಿ ದರ ಏರಿಸಿದ ಸಮಯದ ಬಗ್ಗೆ ಅಚ್ಚರಿಯಾಯ್ತು: ನಿರ್ಮಲಾ ಸೀತಾರಾಮನ್

Published : May 09, 2022, 06:55 AM ISTUpdated : May 09, 2022, 08:18 AM IST
ಬಡ್ಡಿ ದರ ಏರಿಸಿದ ಸಮಯದ ಬಗ್ಗೆ ಅಚ್ಚರಿಯಾಯ್ತು: ನಿರ್ಮಲಾ ಸೀತಾರಾಮನ್

ಸಾರಾಂಶ

* ದರ ಏರಿಕೆ ನನಗೆ ಅಚ್ಚರಿ ತಂದಿಲ್ಲ: ಕೇಂದ್ರ ವಿತ್ತ ಸಚಿವೆ * ಬಡ್ಡಿ ದರ ಏರಿಸಿದ ಸಮಯದ ಬಗ್ಗೆ ಅಚ್ಚರಿಯಾಯ್ತು: ನಿರ್ಮಲಾ * ಅಮೆರಿಕ, ಆಸ್ಪ್ರೇಲಿಯಾದಲ್ಲೂ ಬಡ್ಡಿ ದರ ಹೆಚ್ಚಳವಾಗಿದೆ

ಮುಂಬೈ(ಮೇ.09): 4 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಠಾತ್‌ ಬಡ್ಡಿ ದರ ಏರಿಕೆ ಮಾಡಿದ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಕ್ರಮದ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಬಡ್ಡಿ ದರ ಹೆಚ್ಚಳ ಮಾಡಿದ ಸಮಯ ನನಗೆ ಅಚ್ಚರಿ ಉಂಟು ಮಾಡಿತೇ ವಿನಃ ಬಡ್ಡಿ ದರ ಏರಿಕೆಯಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಆರ್‌ಬಿಐನ ಈ ಕ್ರಮದಿಂದ ಸರ್ಕಾರದ ಯೋಜಿತ ಮೂಲಸೌಕರ್ಯ ಹೂಡಿಕೆ ಮೇಲೆ ಯಾವುದೇ ಪರಿಣಾಮವೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಡ್ಡಿ ದರ ಏರಿಕೆ ಮಾಡಿದ ಸಮಯ ಅಚ್ಚರಿ ತಂದಿತು. 2 ದ್ವೈಮಾಸಿಕ ಹಣಕಾಸು ನೀತಿ ಸಭೆಗಳ ಮಧ್ಯದಲ್ಲಿ ಆರ್‌ಬಿಐ ಈ ಏರಿಕೆಯನ್ನು ಮಾಡಿರುವುದು ಆಶ್ಚರ್ಯಕ್ಕೆ ಕಾರಣ. ಬಡ್ಡಿ ದರ ಏರಿಕೆ ಬಗ್ಗೆ ಅಮೆರಿಕ ಹೆಳುತ್ತಲೇ ಬಂದಿತ್ತು ಎಂದು ತಿಳಿಸಿದ್ದಾರೆ.

ಕಳೆದ ಬಾರಿ ನಡೆದ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲೂ ಬಡ್ಡಿ ದರ ಏರಿಕೆ ಕುರಿತಂತೆ ಆರ್‌ಬಿಐ ಸುಳಿವು ನೀಡಿತ್ತು. ಆಸ್ಪ್ರೇಲಿಯಾ, ಅಮೆರಿಕ ಕೂಡ ಬಡ್ಡಿ ದರ ಏರಿಕೆ ಮಾಡಿವೆ. ಅಲ್ಲಿನ ಕೇಂದ್ರ ಬ್ಯಾಂಕುಗಳಂತೆ ರಿಸವ್‌ರ್‍ ಬ್ಯಾಂಕ್‌ ಕೂಡ ಇಲ್ಲೂ ಬಡ್ಡಿ ದರ ಹೆಚ್ಚಳ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರೀಯ ಬ್ಯಾಂಕುಗಳ ನಡುವೆ ವಿಶಾಲ ಒಮ್ಮತ ಮೂಡಿದೆ ಎಂದು ತಿಳಿಸಿದರು.

4 ವರ್ಷದ ಬಳಿಕ ಸಾಲದ ಮೇಲಿನ ಬಡ್ಡಿ ದರ ಏರಿಕೆ

 ದಿಢೀರ್‌ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ರೆಪೋ ದರವನ್ನು ಶೇ.0.40ರಷ್ಟುಮತ್ತು ಸಿಆರ್‌ಆರ್‌ ಪ್ರಮಾಣವನ್ನು ಶೇ.0.50ರಷ್ಟುಹೆಚ್ಚಳ ಮಾಡಿದೆ. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರ್‌ಬಿಐ ಕೈಗೊಂಡ ಈ ಕ್ರಮದಿಂದಾಗಿ ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರಗಳು ಶೀಘ್ರವೇ ಏರಿಕೆಯಾಗಲಿದೆ. ಇದು ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ಮತ್ತು ಬಡವರ್ಗದ ಜನರನ್ನು ಇನ್ನಷ್ಟುಸಂಕಷ್ಟಕ್ಕೆ ಒಳಪಡಿಸಲಿದೆ.

2018ರ ಆಗಸ್ಟ್‌ ಬಳಿಕ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. ವಾಸ್ತವವಾಗಿ ಆರ್‌ಬಿಐನ ಮುಂದಿನ ನಿಗದಿತ ದ್ವೈಮಾಸಿಕ ಸಾಲ ನೀತಿ ಜೂನ್‌ನಲ್ಲಿ ಪ್ರಕಟವಾಗಬೇಕಿತ್ತಾದರೂ ಮೇ 2-4ರ ಅವಧಿಯಲ್ಲಿ ದಿಢೀರ್‌ ಸಭೆ ಆಯೋಜಿಸಿದ ಆರ್‌ಬಿಐನ ಮಂಡಳಿ ಬಡ್ಡಿ ದರ ಏರಿಕೆ ನಿರ್ಧಾರ ಕೈಗೊಂಡಿದೆ.

ಡಬಲ್‌ ಶಾಕ್‌:

ಹಾಲಿ ಶೇ.4ರಷ್ಟಿದ್ದ ರೆಪೋ (ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿದರ) ದರವನ್ನು ಶೇ.4.40ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಆರ್‌ಬಿಐ ಕೈಗೊಂಡಿದೆ. ಪರಿಣಾಮ ಸಾಲದ ಮೇಲಿನ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಹೆಚ್ಚಳವಾಗಲಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಚಲಾವಣೆಯಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯುವ ಕ್ರಮವಾಗಿ ಸಿಆರ್‌ಆರ್‌ (ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಇಡಬೇಕಾದ ಹಣದ ಪ್ರಮಾಣ) ದರವನ್ನು ಶೇ.4 ರಿಂದ ಶೇ.4.5ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಮಾರುಟ್ಟೆಯಿಂದ 87000 ಕೋಟಿ ರು. ಹಣ ಆರ್‌ಬಿಐ ಖಜಾನೆ ಸೇರಲಿದೆ. ಆದರೆ ರಿವರ್ಸ್‌ ರೆಪೋ ದರವನ್ನು ಶೇ.3.35ರಲ್ಲೇ ಮುಂದುವರೆಸಲಾಗುವುದು ಎಂದು ಹೊಸ ಸಾಲ ನೀತಿ ಕುರಿತು ಮಾಹಿತಿ ನೀಡಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದರು.

ಬೆಲೆ ಏರಿಕೆಗೆ ಕಡಿವಾಣ:

ರಷ್ಯಾ- ಉಕ್ರೇನ್‌ ಯುದ್ಧ ಬಿಕ್ಕಟ್ಟು, ಕೋವಿಡ್‌ ಸಾಂಕ್ರಾಮಿಕ, ಪೂರೈಕೆ ಜಾಲದಲ್ಲಿನ ಅಸ್ತವ್ಯಸ್ತದ ಪರಿಣಾಮ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಹಣದುಬ್ಬರ ಪ್ರಮಾಣ ಆರ್‌ಬಿಐ ನಿರೀಕ್ಷೆ ಮೀರಿ ಮೇಲೇರಿದೆ. ಶೇ.2- ಶೇ.6 ಪ್ರಮಾಣದ ಹಣದುಬ್ಬರವನ್ನು ಆರ್‌ಬಿಐ ನಿರೀಕ್ಷೆ ಮಾಡಿತ್ತಾದರೂ, ಕಳೆದ ಮೂರು ತಿಂಗಳಿನಿಂದ ಹಣದುಬ್ಬರ ಪ್ರಮಾಣ ಶೇ.6.9ರಲ್ಲೇ ಇದೆ. ಇದು ಕಳೆದ 17 ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಹೀಗಾಗಿ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೆಪೋ ಮತ್ತು ಸಿಆರ್‌ಆರ್‌ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಆರ್‌ಬಿಐ ಕೈಗೊಂಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!