ಜಿಎಸ್‌ಟಿ ಪದ್ಧತಿಯಲ್ಲಿ ತೆರಿಗೆ ವಂಚನೆ ತಡೆ ಹಾಗೂ ರಿಟರ್ನ್ ಸಲ್ಲಿಕೆ ವ್ಯವಸ್ಥೆ ಇನ್ನಷ್ಟು ಸರಳೀಕರಣ ಮಾಡಲು ಬರುವ ಅಕ್ಟೋಬರ್ ಒಂದರಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ.
ಬೆಂಗಳೂರು [ಜೂ.30] : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಲ್ಲಿ ತೆರಿಗೆ ವಂಚನೆ ತಡೆ ಹಾಗೂ ರಿಟರ್ನ್ ಸಲ್ಲಿಕೆ ವ್ಯವಸ್ಥೆ ಇನ್ನಷ್ಟುಸರಳೀಕರಣ ಮಾಡಲು ಬರುವ ಅಕ್ಟೋಬರ್ ಒಂದರಿಂದ ಹೊಸ ರಿಟರ್ನ್ ಸಲ್ಲಿಕೆ ಪದ್ಧತಿ (ಜಿಎಸ್‌ಟಿ-2) ಜಾರಿಗೆ ಬರಲಿದೆ.
ವಾರ್ಷಿಕ ಐದು ಕೋಟಿ ರು.ಗಿಂತ ಕಡಿಮೆ ವಹಿವಾಟನ್ನು ಕೇವಲ ಗ್ರಾಹಕರ ಜೊತೆ ಮಾಡುವ (ಬಿ2ಸಿ) ವ್ಯಾಪಾರಸ್ಥರು ‘ಸಹಜ’ ನಮೂನೆ ಪತ್ರದಲ್ಲಿ ರಿಟರ್ನ್ ಸಲ್ಲಿಸಬಹುದು. ಉಳಿದಂತೆ ಬಿ2ಬಿ (ಬಿಜಿನೆಸ್ ಟು ಬಿಜಿನೆಸ್) ಬಿಜಿನೆಸ್ ಟು ಕನ್ಸೂಮರ್ಸ್ (ಬಿ2ಸಿ) ಎರಡೂ ಮಾಡುವವರಿಗೆ ಸುಗಮ ನಮೂನೆ ಪತ್ರದಲ್ಲಿ ರಿಟರ್ನ್ ಸಲ್ಲಿಸಬಹುದು. ವಿಶೇಷವಾಗಿ ಶೂನ್ಯ ವಹಿವಾಟು ಮಾಡಿದವರು ಕೇವಲ ಎಸ್‌ಎಂಎಸ್ ಮೂಲಕ ರಿಟರ್ನ್ ಸಲ್ಲಿಸುವ, ಸಣ್ಣ ವ್ಯಾಪಾರಸ್ಥರು ಪ್ರತಿ ತಿಂಗಳ ಬದಲು ವರ್ಷಕ್ಕೆ ನಾಲ್ಕು ಬಾರಿ ಮಾತ್ರ ರಿಟರ್ನ್ ಸಲ್ಲಿಸುವ ಪದ್ಧತಿ ಜಾರಿಗೆ ತರಲಾಗುವುದು ಎಂದು ‘ಜಿಎಸ್‌ಟಿ ಮಾಹಿತಿ ತಂತ್ರಜ್ಞಾನ ಸಮಿತಿ’ ಅಧ್ಯಕ್ಷ ಸುಶೀಲ್‌ಕುಮಾರ್ ಮೋದಿ ತಿಳಿಸಿದ್ದಾರೆ.
undefined
ಎಂಟು ತಿಂಗಳ ನಂತರ ಶನಿವಾರ ಬೆಂಗಳೂರಿನಲ್ಲಿ ನಡೆದ ‘ಜಿಎಸ್‌ಟಿ ಐಟಿ ಸಮಿತಿ’ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಿಎಸ್‌ಟಿ ಪದ್ಧತಿ ಜಾರಿಗೆ ಬಂದು ಬರುವ ಜುಲೈ 1ಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತದೆ. ಹೀಗಾಗಿ ಬರುವ ವರ್ಷಗಳಲ್ಲಿ ತೆರಿಗೆ ಸಲ್ಲಿಕೆಯಲ್ಲಿ ಇನ್ನಷ್ಟುಸರಳೀಕರಣ, ತೆರಿಗೆ ವಂಚನೆ ತಡೆಗೆ ವಿವಿಧ ರೀತಿ ಕ್ರಮ ಕೈಗ್ಳೋಲು ಉದ್ದೇಶಿಸಲಾಗಿದೆ.
ಆನ್‌ಲೈನ್ ಮರುಪಾವತಿ: ರಫ್ತುದಾರರು ಸಲ್ಲಿಸದ ತೆರಿಗೆ ಮೊತ್ತವನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಮರುಪಾವತಿಸಲಾಗುವುದು, ಬರುವ ಸೆಪ್ಟೆಂಬರ್ ತಿಂಗಳಿಂದ ನೂತನ ಪದ್ಧತಿ ಜಾರಿಗೆ ಬರಲಿದೆ. ಕೇಂದ್ರ ಮತ್ತು ರಾಜ್ಯಗಳು ಈವರೆಗೆ ಪ್ರತ್ಯೇಕವಾಗಿ ಮರುಪಾವತಿ ಮಾಡುತ್ತಿತ್ತು. ಇನ್ನು ಮುಂದೆ ಒಂದು ಮೂಲದಿಂದ ಮರುಪಾವತಿ ಆಗಲಿದೆ. ಇದರಿಂದ ವಿಶೇಷವಾಗಿ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ವಂಚಕರಿಗೆ ದಂಡ: ನಿಯಮ ಬಾಹಿರವಾಗಿ ಲಾಭಗಳಿಸಿದ ವ್ಯಾಪಾರಸ್ಥರಿಗೆ ಈವರೆಗೆ 25 ಸಾವಿರ ರು. ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಲಾಭದ ಮೊತ್ತವನ್ನು ಒಂದು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸದಿದ್ದಲ್ಲಿ, ಆ ಮೊತ್ತದ ಮೇಲೆ ಶೇ. 10ರಷ್ಟುದಂಡ ಸಹ ವಿಧಿಸಲಾಗುವುದು ಎಂದು ತಿಳಿಸಿದರು.
ತೆರಿಗೆ ವಂಚನೆ ತಡೆಗೆ ಕ್ರಮ: ಇನ್ನು ಮುಂದೆ ‘ಇ-ವೇ’ (ಎಲೆಕ್ಟ್ರಾನಿಕ್ ವೇ ಬಿಲ್) ಬಿಲ್ ಪದ್ಧತಿ ಜಾರಿಗೆ ತರಲಾಗುವುದು. ಈ ಪದ್ಧತಿಯಿಂದ ವಂಚನೆ ಮಾಡಲು ಅಸಾಧ್ಯ. ಒಂದು ಸಾರಿ ಇ-ವೇ ಮಾಡಿದ ಮೇಲೆ ಕ್ಯಾನ್ಸಲ್ ಮಾಡಲು ಆಗುವುದಿಲ್ಲ, ನಕಲು ಮಾಡಲು ಆಗುವುದಿಲ್ಲ, ಇ-ವೆ ಬಿಲ್ ಸೃಷ್ಟಿಸಿದ ಮೇಲೆ ಅದರ ಸರಕು ಸಾಗಣೆ ವಾಹನ ಯಾವ ಊರಿನಿಂದ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಪಿನ್ ಕೋಡ್ ನಮೂದಿಸಬೇಕು, ಕರ್ನಾಟಕದಲ್ಲಿ ಜಾರಿಯಲ್ಲಿರುವ ಈ ಪದ್ಧತಿಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಸುಶೀಲ್‌ಕುಮಾರ್ ಮೋದಿ ಹೇಳಿದರು.
ಇ-ಇನ್‌ವಾಯ್ಸಿಂಗ್: 50 ಕೋಟಿಗಿಂತ ಹೆಚ್ಚು ವಹಿವಾಟು ಮಾಡುವವರು ಇನ್ನು ಮುಂದೆ ಎಲೆಕ್ಟ್ರಾನಿಕ್ ಇನ್‌ವಾಯ್ಸಿಂಗ್ ಮಾಡಿದರೆ ರಿಟರ್ನ ಸಲ್ಲಿಸುವ ಅಗತ್ಯವಿಲ್ಲ. ತೆರಿಗೆ ವಂಚಿಸುವ ಸಾಧ್ಯತೆಯೇ ಇರುವುದಿಲ್ಲ ಎಂದರು.
ಆರ್‌ಎಫ್‌ಐಡಿ ಟ್ಯಾಗ್: ಜೊತೆಗೆ ಪ್ರತಿ ಸರಕು ಸಾಗಾಣಿಕೆ ವಾಹನಕ್ಕೆ ಆರ್‌ಎಫ್‌ಐಡಿ (ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್) ಟ್ಯಾಗ್ ಅಳವಡಿಸುವುದರಿಂದ ವಾಹನಗಳ ಚಲನವಲನ ತಿಳಿಯುತ್ತದೆ. ವಾಹನ ನಿರ್ದಿಷ್ಟಪ್ರದೇಶ ದಾಟಿದಾಗ ವಾಹನದ ಸಂಖ್ಯೆ ಆಧರಿಸಿ ಆ ವಾಹನದ ಇ-ವೇ ಬಿಲ್ ಆಗಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಎಸ್‌ಟಿ ಕೌನ್ಸಿಲ್ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ. ಬರುವ ದಿನಗಳಲ್ಲಿ ಈ ಪದ್ಧತಿಯನ್ನು ಕಡ್ಡಾಯ ಮಾಡಲಾಗುವುದು ಎಂದರು.
ಸಮಿತಿಯ ಸದಸ್ಯ ಹಾಗೂ ರಾಜ್ಯ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ತೆರಿಗೆ ಸಂಗ್ರಹ ಹೆಚ್ಚಳ : ದೇಶದಲ್ಲಿ ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ನಂತರ ತೆರಿಗೆ ಸಂಗ್ರಹ ಹೆಚ್ಚಾಗಿದೆ. 2017-18 (ಒಂಬತ್ತು ತಿಂಗಳು) ಅವಧಿಯಲ್ಲಿ 7.40 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿದ್ದರೆ, 2018-19 ಅವಧಿಯಲ್ಲಿ 11.77 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಜತೆಗೆ ರಾಜ್ಯದ ಆದಾಯ ಕೂಡಾ ಹೆಚ್ಚಾಗಿದೆ. ಜಿಎಸ್‌ಟಿ ಪದ್ಧತಿಯಿಂದ ರಾಜ್ಯಗಳಿಗೆ ಕೊಡುವ ಪರಿಹಾರದ ಮೊತ್ತ ಕಡಿಮೆ ಆಗುತ್ತಿದೆ. 2019-20 ಅವಧಿಯಲ್ಲಿ ಅನೇಕ ರಾಜ್ಯಗಳು ಪರಿಹಾರ ಸೆಸ್‌ನಿಂದ ಹೊರಬರಲಿವೆ. ಇನ್ನೈದು ವರ್ಷದಿಂದ ದೇಶದ ಎಲ್ಲ ರಾಜ್ಯಗಳು ಪರಿಹಾರ ಸ್ವೀಕರಿಸುವುದರಿಂದ ಹೊರ ಬರಲಿವೆ ಎಂದು ಸುಶೀಲ್‌ಕುಮಾರ್ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.