
ನವದೆಹಲಿ (ಜೂ.13): ನೀವು ಡೆಬಿಟ್ (Debit) ಹಾಗೂ ಕ್ರೆಡಿಟ್ ಕಾರ್ಡ್ (Credit card) ಬಳಕೆದಾರರಾಗಿದ್ದರೆ ಮುಂದಿನ ತಿಂಗಳಿಂದ ಆನ್ ಲೈನ್ ಪಾವತಿಗೆ ಸಂಬಂಧಿಸಿದ ನಿಯಮದಲ್ಲಿನ ಬದಲಾವಣೆ ಬಗ್ಗೆ ಗಮನಿಸೋದು ಅತ್ಯಗತ್ಯ. ಹೌದು, ಆನ್ ಲೈನ್ ಪಾವತಿಯಲ್ಲಿ ಟೋಕನೈಸೇಷನ್ (Tokenization) ವ್ಯವಸ್ಥೆ ಅನುಷ್ಠಾನಕ್ಕೆ ಜೂ.30 ಅಂತಿಮ ಗಡುವು.
ಟೋಕನೈಸೇಷನ್ ಅಳವಡಿಕೆಗೆ ಕಾರ್ಡ್ ಆನ್ ಫೈಲ್ (CoF) ಮಾಹಿತಿ ಅಳಿಸಿ ಹಾಕಲು ಈ ಹಿಂದೆ ಆರ್ ಬಿಐ 2021ರ ಡಿಸೆಂಬರ್ 31ರ ತನಕ ಗಡುವು ನೀಡಿತ್ತು. ಆದ್ರೆ, ಆನ್ ಲೈನ್ ವರ್ತಕರು ಟೋಕನೈಸೇಷನ್ ಗಡುವು ವಿಸ್ತರಿಸುವಂತೆ ಆರ್ ಬಿಐಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಗಡುವನ್ನು ಆರು ತಿಂಗಳ ಕಾಲ ಅಂದ್ರೆ ಜೂ.30ಕ್ಕೆ ವಿಸ್ತರಿಸಲಾಗಿತ್ತು.
2022ರ ಜನವರಿ 1ರಿಂದ ಎಲ್ಲ ಆನ್ ಲೈನ್ ವರ್ತಕರು ಹಾಗೂ ಇ-ಪಾವತಿ ಅಪ್ಲಿಕೇಷನ್ ಗಳು ಕಡ್ಡಾಯವಾಗಿ ಟೋಕನೈಸೇಷನ್ (tokenization) ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆರ್ ಬಿಐ (RBI)ಈ ಹಿಂದೆ ಸೆಪ್ಟೆಂಬರ್ ನಲ್ಲೇ ನಿರ್ದೇಶನ ನೀಡಿತ್ತು. ಆದ್ರೆ ಕಾರ್ಡ್ ಆನ್ ಫೈಲ್ ಟೋಕನೈಸೇಷನ್ (card-on-file tokenization) ವ್ಯವಸ್ಥೆ ಜಾರಿಗೆ ಇನ್ನೂ ಆನ್ ಲೈನ್ ಸಂಸ್ಥೆಗಳು ಸಿದ್ಧಗೊಂಡಿಲ್ಲ. ಈ ವ್ಯವಸ್ಥೆ ಅಳವಡಿಕೆ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿ ಅನೇಕ ಸವಾಲುಗಳಿರೋ ಕಾರಣ ಇದಕ್ಕೆ ತಕ್ಕುದಾದ ಪರಿಸರ ವ್ಯವಸ್ಥೆ ಅಳವಡಿಸಿಕೊಳ್ಳಲು ಇನ್ನೂ ಸಮಯದ ಅಗತ್ಯವಿದೆ ಎಂದು ಆನ್ ಲೈನ್ ವರ್ತಕರ ಸಂಘಟನೆಗಳಾದ MPAI ಹಾಗೂ ADIF ಆರ್ ಬಿಐಗೆ ಮನವಿ ಮಾಡಿದ್ದವು.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇದ್ರಿಂದ ತಕ್ಷಣವೇ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದು ವರ್ತಕ ಹಾಗೂ ಗ್ರಾಹಕ ಇಬ್ಬರಿಗೂ ಸಮಯ ಉಳಿತಾಯ ಮಾಡುತ್ತಿತ್ತು. ಆದ್ರೆ ಟೋಕನೈಸೇಷನ್ ಜಾರಿಗೆ ಬಂದ ಬಳಿಕ ಈ ವ್ಯವಸ್ಥೆ ಇರೋದಿಲ್ಲ.
ಟೋಕನೈಸೇಷನ್ ಅಂದ್ರೇನು ?
ಕ್ರೆಡಿಟ್ (Credit) ಅಥವಾ ಡೆಬಿಟ್ (Debit) ಕಾರ್ಡ್ ಮಾಹಿತಿಗಳನ್ನು ಟೋಕನ್ (Token) ಎಂಬ ಪರ್ಯಾಯ ಕೋಡ್ ಗೆ ಬದಲಾಯಿಸೋ ಪ್ರಕ್ರಿಯೆಯನ್ನು ಟೋಕನೈಸೇಷನ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಡ್ ಮಾಹಿತಿಗಳನ್ನು 'ಟೋಕನ್' ಎಂಬ ವಿಶಿಷ್ಟ ಪರ್ಯಾಯ ಕೋಡ್ ಗೆ ಬದಲಾಯಿಸಲಾಗುತ್ತದೆ. ಪ್ರತಿ ಕಾರ್ಡ್, ಸಾಧನ ಹಾಗೂ ಟೋಕನ್ ಮನವಿದಾರರನ್ನು ಪರಿಗಣಿಸಿ ಹೊಸ ಟೋಕನ್ ನೀಡಲಾಗುತ್ತದೆ. ಈ ಟೋಕನ್ ವ್ಯವಸ್ಥೆಯಿಂದಾಗಿ ಗ್ರಾಹಕರ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ವ್ಯಾಪಾರಿಗೆ ತಿಳಿಯೋದಿಲ್ಲ.
ಹೇಗೆ ಕಾರ್ಯನಿರ್ವಹಿಸುತ್ತದೆ?
-ನೀವು ಆನ್ ಲೈನ್ ವ್ಯಾಪಾರ ತಾಣದಲ್ಲಿ ಖರೀದಿ ಪ್ರಾರಂಭಿಸಿದ ತಕ್ಷಣ ವ್ಯಾಪಾರಿ ಟೋಕನೈಸೇಷನ್ ಪ್ರಕ್ರಿಯೆಗೆ ಚಾಲನೆ ನೀಡುತ್ತಾನೆ. ನಿಮ್ಮ ಡೆಬಿಟ್ /ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ಮಾಡಲು ಅನುಮತಿ ಕೇಳುತ್ತಾನೆ.
-ಗ್ರಾಹಕ ಅನುಮತಿ ನೀಡಿದ ತಕ್ಷಣ ವ್ಯಾಪಾರಿ ಕಾರ್ಡ್ ನೆಟ್ ವರ್ಕ್ ಗೆ ಟೋಕನೈಸೇಷನ್ ಮನವಿ ಕಳುಹಿಸುತ್ತಾನೆ.
-ಕಾರ್ಡ್ ನೆಟ್ ವರ್ಕ್ ತಕ್ಷಣ ಆ ನಿರ್ದಿಷ್ಟ ಕಾರ್ಡ್ಗೆ ಸಂಬಂಧಿಸಿ 16 ಅಂಕೆಗಳ ಟೋಕನ್ ಸೃಷ್ಟಿಸಿ ವ್ಯಾಪಾರಿಗೆ ಕಳುಹಿಸುತ್ತದೆ.
-ವ್ಯಾಪಾರಿಯು ಭವಿಷ್ಯದ ವಹಿವಾಟುಗಳಿಗಾಗಿ ಈ ಟೋಕನ್ ಸೇವ್ ಮಾಡಿಟ್ಟುಕೊಳ್ಳುತ್ತಾನೆ.
-ವಹಿವಾಟು ನಡೆಸಲು ಗ್ರಾಹಕರು ಒಟಿಪಿ(OPT) ಹಾಗೂ ಸಿವಿವಿ( CVV) ಸಂಖ್ಯೆ ಮೂಲಕ ಅನುಮತಿ ನೀಡೋದು ಅಗತ್ಯ.
-ಬೇರೆ ವ್ಯಾಪಾರಿಗಳಿಗೆ ಅಥವಾ ಬೇರೆ ಕಾರ್ಡ್ ಮೂಲಕ ಶಾಪಿಂಗ್ ಮಾಡಿದ್ರೆ ಗ್ರಾಹಕರು ಆನ್ ಲೈನ್ ಪಾವತಿ ಮಾಡಲು ಈ ಎಲ್ಲ ನಿಯಮಗಳನ್ನು ಇನ್ನೊಮ್ಮೆ ಪಾಲಿಸೋದು ಅಗತ್ಯ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.