ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ನ್ಯೂಸ್ ನೀಡಿದೆ. 7ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮಾರ್ಚ್‌ನಲ್ಲಿ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
ನವದೆಹಲಿ (ಫೆ.15): ಕೇಂದ್ರ ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ಸರ್ಕಾರ ಬಂಪರ್ ನ್ಯೂಸ್ ನೀಡಿದೆ. ಮುಂದಿನ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ. 4ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಶೇ. 4ರಷ್ಟು ತುಟ್ಟಿಭತ್ಯೆ ಏರಿಕೆಯ ಬಳಿಕ, ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವು ಶೇ. 50ರಷ್ಟು ಏರಿಕೆಯಾಗಲಿದೆ. ಕೈಗಾರಿಕಾ ಕಾರ್ಮಿಕರ (CPI-IW) ಗ್ರಾಹಕ ಬೆಲೆ ಸೂಚ್ಯಂಕದ 12-ತಿಂಗಳ ಸರಾಸರಿ 392.83 ರಷ್ಟಿದೆ. ಇಟಿ ವರದಿ ಪ್ರಕಾರ ಮೂಲ ವೇತನದ ಶೇ.50.26ರಷ್ಟು ಡಿಎ ಬರುತ್ತಿದೆ. ಅಖಿಲ ಭಾರತ CPI-IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಸರ್ಕಾರವು ಡಿಎ ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ಹೆಚ್ಚಳದ ಪ್ರಮಾಣವನ್ನು ನಿರ್ಧರಿಸುತ್ತದೆ. ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ - ಜನವರಿ ಮತ್ತು ಜುಲೈ ತಿಂಗಳಲ್ಲಿ ಇದರ ಏರಿಕೆ ಸಿಗಲಿದೆ. ಅಕ್ಟೋಬರ್ 2023 ರಲ್ಲಿ ಆದ ಕೊನೆಯ ಹೆಚ್ಚಳದಲ್ಲಿ, ಡಿಎಯನ್ನು ಶೇಕಡಾ 4 ರಷ್ಟು ಏರಿಕೆ ಮಾಡುವ ಮೂಲಕ ತುಟ್ಟಿ ಪರಿಹಾರವನ್ನು ಶೇಕಡಾ 46 ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಹಣದುಬ್ಬರ ದರವನ್ನು ಗಮನಿಸಿದರೆ, ಮುಂದಿನ ಡಿಎ ಹೆಚ್ಚಳವು ಶೇಕಡಾ 4 ರ ನಿರೀಕ್ಷೆಯಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿದ್ದಾರೆ. ಮುಂಬರುವ ಡಿಎ ಹೆಚ್ಚಳದ ನಂತರ, ಈ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯುತ್ತಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಲೆಕ್ಕಾಚಾರ ಹೇಗೆ?
ತುಟ್ಟಿಭತ್ಯೆ ಸರಾಸರಿ = ((ಎಐಸಿಪಿಐನ ಸರಾಸರಿ (ಆಧಾರ ವರ್ಷ 2001=100) ಕಳೆದ 12 ತಿಂಗಳುಗಳಲ್ಲಿ -115.76)/115.76) *100
AICPI ಎಂದರೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ.
ಸಾರ್ವಜನಿಕ ವಲಯದ (ಕೇಂದ್ರ ಸರ್ಕಾರ) ಉದ್ಯೋಗಿಗಳಿಗೆ ಫಾರ್ಮುಲಾ:
ತುಟ್ಟಿಭತ್ಯೆ ಸರಾಸರಿ = ((ಎಐಸಿಪಿಐನ ಸರಾಸರಿ (ಆಧಾರ ವರ್ಷ 2016=100) ಕಳೆದ 3 ತಿಂಗಳುಗಳಲ್ಲಿ -126.33)/126.33) *100