ಟೆಕ್ ಸಿಇಒಗಳಿಗಿಂತ ಹೆಚ್ಚಿದೆ ಸುಧಾಮೂರ್ತಿ ಸಂಪತ್ತು, ಹಾಗಾದ್ರೆ ಇನ್ಫೋಸಿಸ್ ನಲ್ಲಿ ಅವರ ಪಾಲು ಎಷ್ಟಿದೆ?

By Suvarna NewsFirst Published Mar 9, 2024, 3:54 PM IST
Highlights

ಸಮಾಜ ಸುಧಾರಕಿ, ಲೇಖಕಿ, ಕನ್ನಡತಿ ಸುಧಾಮೂರ್ತಿ  ಅವರನ್ನು ನಿನ್ನೆ ಮಹಿಳಾ ದಿನಾಚರಣೆಯಂದು ರಾಷ್ಟ್ರಪತಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಅಂದಹಾಗೇ ಸುಧಾಮೂರ್ತಿ ಅವರು ಇನ್ಫೋಸಿಸ್ ನಲ್ಲಿ ಶೇ.0.83ರಷ್ಟು ಪಾಲು ಹೊಂದಿದ್ದು, ಅವರ ಸಂಪತ್ತು ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಮಾಹಿತಿ. 
 

Business Desk:ಕೋಟಿಗಟ್ಟಲೆ ಸಂಪತ್ತಿದ್ದರೂ ಶ್ರೀಮಂತಿಕೆಯ ಅಹಂಕಾರ, ಅದ್ದೂರಿತನ ಯಾವುದನ್ನು ತೋರಿಸದ ಸರಳ ಜೀವಿ ಸುಧಾ ಮೂರ್ತಿ. ದೇಶದ ಪ್ರತಿಷ್ಟಿತ ಐಟಿ ಕಂಪನಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿಯಾದರೂ ಎಂದೂ ಇವರು ಸಿರಿತನ, ಆಡಂಬರದ ಪ್ರದರ್ಶನ ಮಾಡಿದವರಲ್ಲ. ಬದಲಿಗೆ ಮಧ್ಯಮ ವರ್ಗದ ಸರಳ ಜೀವನಶೈಲಿ ಮೂಲಕ ದೇಶಾದ್ಯಂತ ಮನೆ ಮಾತಾದವರು. ಅಳಿಯ ಇಂಗ್ಲೆಂಡ್ ಪ್ರಧಾನಿಯಾಗಿದ್ದರೂ ಎಲ್ಲಿಯೂ ಹಮ್ಮುಬಿಮ್ಮು ತೋರದವರು. ನೊಂದವರು, ಅಸಹಾಯಕರಿಗೆ ನೆರವಿನ ಹಸ್ತ, ಸ್ಫೂರ್ತಿ ತುಂಬುವ ಮಾತುಗಳು, ಓದಿನ ರುಚಿ ಹೆಚ್ಚಿಸುವ ಬರವಣಿಗೆ ಮೂಲಕ ಅಸಂಖ್ಯಾತ ಜನರ ಮನಗೆದ್ದಿರುವ ಸುಧಾಮೂರ್ತಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಸುಧಾಮೂರ್ತಿ ಈ ಹುದ್ದೆಯ ಘನತೆಯನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಯಾವುದೇ ಅನುಮಾನವಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಸುಧಾಮೂರ್ತಿ ಅವರ ನಾಮನಿರ್ದೇಶನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಸುಧಾಮೂರ್ತಿ ಅವರ ಸಂಪತ್ತು ಎಷ್ಟಿರಬಹುದು ಎಂಬ ಕುತೂಹಲ ಹಲವರಿಗಿರಬಹುದು? ಅದಕ್ಕಿಲ್ಲಿ ಉತ್ತರವಿದೆ.

ಅಂದಾಜು 5,600 ಕೋಟಿ ಒಡತಿ
ಸುಧಾ ಮೂರ್ತಿ ಅವರು ಇನ್ಫೋಸಿಸ್ ನಲ್ಲಿ ಶೇ. 0.83ರಷ್ಟು ಪಾಲು  ಹೊಂದಿದ್ದಾರೆ. ಈಗಿನ ಬೆಲೆಗ ಲೆಕ್ಕ ಹಾಕಿದರೆ ಇದರ ಮೌಲ್ಯ ಅಂದಾಜು 5,600 ಕೋಟಿ ರೂ. ಬಿಎಸ್ ಇಗೆ ಇತ್ತೀಚೆಗೆ ಇನ್ಫೋಸಿಸ್ ಸಲ್ಲಿಕೆ ಮಾಡಿರುವ ಮಾಹಿತಿ ಅನ್ವಯ ಸುಧಾಮೂರ್ತಿ ಅವರು 3.45 ಕೋಟಿ ಇನ್ಫೋಸಿಸ್ ಷೇರುಗಳನ್ನು ಹೊಂದಿದ್ದಾರೆ. ಬಿಎಸ್ ಇಯಲ್ಲಿ ಇನ್ಫೋಸಿಸ್ ಷೇರುಗಳ ಪ್ರಸಕ್ತ ಮಾರುಕಟ್ಟೆ ಮೌಲ್ಯ ಪ್ರತಿ ಷೇರಿಗೆ ಅಂದಾಜು 1,616.95 ರೂ. ಇದೆ. ಹೀಗಾಗಿ ಸುಧಾಮೂರ್ತಿ ಅವರ 3.45 ಕೋಟಿ ಇನ್ಫೋಸಿಸ್ ಷೇರುಗಳ ಮೌಲ್ಯ 5,586.66 ಕೋಟಿ ರೂ. ಇನ್ನು ಸುಧಾಮೂರ್ತಿ ಅವರ ಪತಿ ಎನ್. ನಾರಾಯಣ ಮೂರ್ತಿ ಇನ್ಫೋಸಿಸ್ ನಲ್ಲಿ 1.66 ಕೋಟಿ ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 2,691 ಕೋಟಿ ರೂ. 

ಕನ್ನಡತಿ ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ, ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿಗಳು

ಟಾಟಾ ಕಂಪನಿಗೆ ನೇಮಕಗೊಂಡ ಮೊದಲ ಮಹಿಳಾ ಎಂಜಿನಿಯರ್
73 ವರ್ಷದ ಸುಧಾಮೂರ್ತಿ  19 ಆಗಸ್ಟ್ 1950 ರಂದು ಕರ್ನಾಟಕದ ಹಾವೇರಿಯ ಶಿಗ್ಗಾಂವ್‌ನಲ್ಲಿ ಜನಿಸಿದರು. ಶಸ್ತ್ರಚಿಕಿತ್ಸಕರಾದ RH ಕುಲಕರ್ಣಿ ಮತ್ತು  ವಿಮಲಾ ಕುಲಕರ್ಣಿ ಇವರ ತಂದೆ ತಾಯಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ MEng ಪದವಿ ಪಡೆದಿದ್ದಾರೆ.  ಸುಧಾ ಮೂರ್ತಿ ಅವರು ಭಾರತದ ಅತಿದೊಡ್ಡ ವಾಹನ ತಯಾರಕ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿಯಲ್ಲಿ (ಟೆಲ್ಕೊ) ನೇಮಕಗೊಂಡ ಮೊದಲ ಮಹಿಳಾ ಎಂಜಿನಿಯರ್ ಆಗಿದ್ದಾರೆ. 

ಅಳಿಯ ಇಂಗ್ಲೆಂಡ್ ಪ್ರಧಾನಿ
ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರನ್ನು ವಿವಾಹವಾಗಿರುವ ಸುಧಾ ಮೂರ್ತಿ ಅವರಿಗೆ ಅಕ್ಷತಾ ಹಾಗೂ  ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ. ರೋಹನ್ ಮೂರ್ತಿ ಉದ್ಯಮಿಯಾಗಿದ್ದರೆ, ಫ್ಯಾಷನ್‌ ಡಿಸೈನರ್‌ ಆಗಿರುವ ಮಗಳು ಅಕ್ಷತಾ ಕೂಡ ಇಂಗ್ಲೆಂಡ್ ನಲ್ಲಿ ಉದ್ಯಮ ಹೊಂದಿದ್ದಾರೆ.  ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅಕ್ಷತಾ ಅವರ ಪತಿ.  2006ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ, 2023ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಸುಧಾ ಮೂರ್ತಿ ಅವರಿಗೆ ಲಭಿಸಿದೆ. 

50 ವರ್ಷದ ಪ್ರೀತಿ, 46ನೇ ಮದುವೆ ವಾರ್ಷಿಕೋತ್ಸವ, ಸುಧಾ-ನಾರಾಯಣಮೂರ್ತಿ ಪ್ರೇಮ ಕತೆ ಬಹಿರಂಗ!

ಇನ್ಫೋಸಿಸ್ ಭಾರತದ ಎರಡನೇ ಅತೀದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿದೆ. ಇದು ಮಾರುಕಟ್ಟೆ ಬಂಡವಾಳದಲ್ಲಿ ದೇಶದ ಏಳನೇ ಅತೀದೊಡ್ಡ ಕಂಪನಿ. ಇನ್ಫೋಸಿಸ್ ಮಾರುಕಟ್ಟೆ ಬಂಡವಾಳ 6,71,121 ಲಕ್ಷ ಕೋಟಿ ರೂ. 

click me!