
Business Desk:ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಜವಾಬ್ದಾರಿ ಹೊತ್ತುಕೊಂಡ ಬಳಿಕ ಹೊಸ ಬ್ರ್ಯಾಂಡ್ ಗಳನ್ನು ಪರಿಚಯಿಸುವ ಮೂಲಕ ವಿವಿಧ ಕ್ಷೇತ್ರಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸುತ್ತ ಬಂದಿದ್ದಾರೆ. ಟಿರಾ ಬ್ಯೂಟಿ ಮೂಲಕ ಸೌಂದರ್ಯ ಹಾಗೂ ತ್ವಚೆಯ ಕಾಳಜಿಗೆ ಸಂಬಂಧಿಸಿದ ಉದ್ಯಮಕ್ಕೆ ರಿಲಯನ್ಸ್ ರಿಟೇಲ್ ಈಗಾಗಲೇ ಪ್ರವೇಶಿಸಿದೆ. ಈಗ ಒಳ ಉಡುಪುಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧಗೊಂಡಿದ್ದು, ಬ್ಲಶ್ ಲೇಸ್ ಎಂಬ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿದೆ. ಈ ಮೂಲಕ ಈಗಾಗಲೇ ಈ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ನೈಕಾ, ಕ್ಲೊವಿಯಾ ಹಾಗೂ ಝಿವಾಮಿ ಬ್ರ್ಯಾಂಡ್ ಗಳಿಗೆ ರಿಲಯನ್ಸ್ ರಿಟೇಲ್ ಕಠಿಣ ಸ್ಪರ್ಧೆ ನೀಡುವುದು ಖಚಿತ. ಫಾರ್ಚುನ್ ಇಂಡಿಯಾ ವರದಿ ಅನ್ವಯ ರಿಲಯನ್ಸ್ ರಿಟೇಲ್ ನ ಬ್ಲಶ್ ಲೇಸ್ ಕೆಲವೊಂದು ಉತ್ಪನ್ನಗಳನ್ನು 85ರೂ.ನಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಲಿದೆ. ಹಾಗೆಯೇ ಪ್ರೀಮಿಯರ್ ಗುಣಮಟ್ಟದ ವಿನ್ಯಾಸಗಳನ್ನು ಕೂಡ ಈ ಬ್ರ್ಯಾಂಡ್ ಹೊಂದಿದೆ. ಹೀಗಾಗಿ ಬ್ಲಶ್ ಲೇಸ್ ಗ್ರಾಹಕರನ್ನು ಸುಲಭವಾಗಿ ತನ್ನತ್ತ ಸೆಳೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ರಿಲಯನ್ಸ್ ರಿಟೇಲ್ ಬ್ಲಶ್ ಲೇಸ್ ಎಂಬ ನೂತನ ಬ್ರ್ಯಾಂಡ್ ಮೂಲಕ ಒಳಉಡುಪುಗಳ ಮಾರುಕಟ್ಟೆ ಪ್ರವೇಶಿಸುತ್ತಿರುವ ಬಗ್ಗೆ ಫಾರ್ಚುನ್ ಇಂಡಿಯಾ ವರದಿ ಮಾಡಿದ್ದು, ಇದರ ಉತ್ಪನ್ನಗಳು ಪ್ರೀಮಿಯಂ ಗುಣಮಟ್ಟದ ವಿನ್ಯಾಸಗಳು ಹಾಗೂ ಅರ್ಹ ಬೆಲೆಗಳನ್ನು ಹೊಂದಿರಲಿವೆ ಎಂಬ ಮಾಹಿತಿಯನ್ನು ನೀಡಿದೆ. ಇನ್ನು ಕೆಲವು ಉತ್ಪನ್ನಗಳನ್ನು 85ರೂ.ಗೆ ಮಾರಾಟ ಮಾಡುವ ಮೂಲಕ ಈಗಾಗಲೇ ಒಳ ಉಡುಪು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಕ್ಲೊವಿಯಾ, ಝಿವಾಮಿ, ಅಮಂಟೆ ಹಾಗೂ ನೈಕಾ ಫ್ಯಾಷನ್ ಬ್ರ್ಯಾಂಡ್ ಗಳಿಗೆ ಪೈಪೋಟಿ ನೀಡಲಿದೆ ಎಂದು ತಿಳಿಸಿದೆ.
ಮುಕೇಶ್ ಅಂಬಾನಿ ನಂಬಿಕಸ್ಥ ರಿಲಯನ್ಸ್ ಗ್ರೂಪ್‌ನ ಹೈಯೆಸ್ಟ್ ಪೇಯ್ಡ್ ಉದ್ಯೋಗಿ, ಸ್ಯಾಲರಿ ಎಷ್ಟ್ ಗೊತ್ತಾ?
ಇಶಾ ಅಂಬಾನಿ ನೇತೃತ್ವದಲ್ಲಿ ಬ್ಲಶ್ ಲೇಸ್ ಬ್ರ್ಯಾಂಡ್ ದೇಶದ ಟೈರ್ 2 ಹಾಗೂ ಟೈರ್ 3 ನಗರಗಳಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ದೇಶಾದ್ಯಂತ ಈ ಬ್ರ್ಯಾಂಡ್ ನ ನೂರಾರು ಮಳಿಗೆಗಳನ್ನು ತೆರೆಯುವ ಗುರಿಯನ್ನು ಕೂಡ ರಿಲಯನ್ಸ್ ರಿಟೇಲ್ ಹೊಂದಿದೆ.
ಇನ್ನು ಲ್ಯಾಕ್ಮಿ, ಲೋರೆಲ್, ಮಾರ್ಕ್ಸ್ ಹಾಗೂ ಸ್ಪೆನ್ಸರ್ಸ್, ಕ್ಲೊವಿಯಾ, ಅಮಂಟೆ ಹಾಗೂ ಇತರ ಕಾಸ್ಮೆಟಿಕ್ಸ್ ಹಾಗೂ ಒಳ ಉಡುಪುಗಳ ಬ್ರ್ಯಾಂಡ್ ಗಳ ಜೊತೆಗೆ ಬ್ಲಶ್ ಲೇಸ್ ದೇಶಾದ್ಯಂತ ಒಪ್ಪಂದ ಮಾಡಿಕೊಳ್ಳಲಿದೆ. ಆ ಮೂಲಕ ಉತ್ಪನ್ನಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ಸ್ ನೀಡಲಿದೆ. ಹಾಗೆಯೇ ಕೆಲವು ಬ್ರ್ಯಾಂಡ್ ಗಳನ್ನು ಅತೀಕಡಿಮೆ ಅಂದರೆ 85ರೂ.ಗೆ ಮಾರಾಟ ಮಾಡಲಿದೆ ಎಂದು ಹೇಳಲಾಗಿದೆ.
ಫ್ರೆಂಚ್ ಐಷಾರಾಮಿ ಬ್ಯೂಟಿ ಬ್ರ್ಯಾಂಡ್ ಸೆಫೋರಾ ಉತ್ಪನ್ನಗಳನ್ನು ಮಾರಾಟ ಮಾಡಲು ಅರವಿಂದ್ ಫ್ಯಾಷನ್ ಜೊತೆಗೆ ಭಾರತದ ಪರವಾನಗಿ ಪಡೆಯುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ರಿಲಯನ್ಸ್ ರಿಟೇಲ್ ಗೆ ಸಾಧ್ಯವಾಗಿರಲಿಲ್ಲ. ಇದಾದ ಬಳಿಕವೇ ಇಶಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಅವರಿಗೆ ಬ್ಲಶ್ ಲೇಸ್ ಪ್ರಾರಂಭಿಸುವ ಯೋಚನೆ ಬಂದಿದೆ.
ಹಣಕಾಸು ಸೇವಾ ಕ್ಷೇತ್ರಕ್ಕೆ ರಿಲಯನ್ಸ್ ಪ್ರವೇಶ; ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫಿನ್ ಸರ್ವ್ ಗೆ ನಡುಕ!
ಬ್ಲಶ್ ಲೇಸ್ ಬಿಡುಗಡೆ ಮುಖೇಶ್ ಅಂಬಾನಿ ಹಾಗೂ ಇಶಾ ಅಂಬಾನಿ ಅವರ ಯಶಸ್ಸಿನ ಕಿರೀಟಕ್ಕೆ ಇನ್ನೊಂದು ಗರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಸ್ತುತ ರಿಲಯನ್ಸ್ ರಿಟೇಲ್ 2.60 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಆದಾಯ ಹೊಂದಿದೆ. ರಿಲಯನ್ಸ್ ರಿಟೇಲ್ ನ ಈ ಹೊಸ ಉತ್ಪನ್ನ ಫಲ್ಗುಣಿ ನಾಯರ್ ಅವರ ನೈಕಾ ಹಾಗೂ ವಿನೀತ್ ಸಿಂಗ್ ಶುಗರ್ ಕಾಸ್ಮೆಟಿಕ್ಸ್ ಜೊತೆಗೆ ನೇರ ಪೈಪೋಟಿ ನಡೆಸಲಿದೆ. ಇನ್ನು ಬ್ಲಶ್ ಲೇಸ್ ಮೊದಲ ಮಳಿಗೆ ಈ ವರ್ಷದಲ್ಲೇ ಮುಂಬೈನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.