
ನವದೆಹಲಿ(ಆ.2): ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ಬೆಸ್ಟ್ ಫ್ರೆಂಡ್ ಭಾರತಕ್ಕೆ ಮರಳಿ ಬಂದಿದ್ದಾನೆ. ಕೇವಲ ಬರುವುದಷ್ಟೇ ಅಲ್ಲ, ತನ್ನ ಜೊತೆಗೆ ಸಿಹಿ ಸುದ್ದಿಯೊಂದನ್ನೂ ಹೊತ್ತು ತಂದಿದ್ದಾನೆ. ಯಾರಪ್ಪ ಅದು ಮೋದಿ ಬೆಸ್ಟ್ ಫ್ರೆಂಡ್?. ಇಷ್ಟು ದಿನ ಎಲ್ಲಿದ್ದ? ಅಂತೆಲ್ಲಾ ಪ್ರಶ್ನೆ ನೀವು ಕೇಳಿದರೆ ಅದು ಸಹಜವೇ. ಪ್ರಧಾನಿ ಮೋದಿ ಬೆಸ್ಟ್ ಫ್ರೆಂಡ್ ಮತ್ಯಾರೂ ಅಲ್ಲ ದೇಶಕ್ಕೆ ಆಮದಾಗುವ ಕಚ್ಛಾ ತೈಲ.
ಹೌದು, ಕಚ್ಛಾತೈಲ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿ ಗಂಭೀರ ಪರಿಣಾಮ ಬೀರಬಲ್ಲ ವಸ್ತು. ದೇಶವೊಂದರ ಮುಖ್ಯಸ್ಥರು ಆರ್ಥಿಕ ಶಿಸ್ತು ಕಾಪಾಡಲು ಕಚ್ಛಾ ತೈಲ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಬಾರದು ಎಂದೇ ಬಯಸುತ್ತಾರೆ. ಕಾರಣ ಕಚ್ಛಾ ತೈಲವೊಂದೇ ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಕಾಣುವ ವಸ್ತು.
ಅದರಂತೆ ಮೋದಿ ಪ್ರಧಾನಿಯಾದ ಹೊಸತರಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಸ್ಥಿರತೆ ಇತ್ತಾದರೂ, ಕಳೆದ ಒಂದು ವರ್ಷದ ಅವಧಿಯಲ್ಲಿ ಕಚ್ಛಾ ತೈಲದ ಬೆಲೆಯಲ್ಲಿ ಹಾವು ಏಣಿ ಆಟ ಆರಂಭವಾಗಿತ್ತು. ಅದರಲ್ಲೂ ಅಮೆಇಕ ಮತ್ತು ಚೀನಾ ಜಾಗತಿಕ ವಾಣಿಜ್ಯ ಯುದ್ಧದಲ್ಲಿ ನಿರತವಾದ ಮೇಲೆ, ಇರಾನ್ ಜೊತೆಗೆ ಹೆಚ್ಚಿನ ವಾಣಿಜ್ಯ ವ್ಯಾಪಾರ ಬೇಡ ಎಂಬ ಅಮೆರಿಕದ ಕಟ್ಟಪ್ಪಣೆ ಹಿನ್ನೆಲೆಯಲ್ಲಿ ಭಾರತ ಕಚ್ಛಾ ತೈಲಕ್ಕಾಗಿ ಪರಿತಪಿಸುತ್ತಿತ್ತು.
ಕಚ್ಛಾ ತೈಲ ಬೆಲೆಯಲ್ಲಿ ಹೆಚ್ಚಳವಾದರೆ ಭಾರತದ ಚಾಲ್ತಿ ಖಾತೆ ಮೇಲೆ ನೇರ ಪರಿಣಾಂ ಬೀರುತ್ತದೆ. ಕಾರಣ ಭಾರತ ತೈಲಕ್ಕಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕಚ್ಛಾ ತೈಲ ಬೆಲೆ ಏರಿದರೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಿಸುವ ಅನಿವಾರ್ಯತೆಗೆ ಸರ್ಕಾರ ಸಿಲುಕಿಕೊಳ್ಳುತ್ತದೆ. ಇದು ಜನರ ಆಕ್ರೋಶವನ್ನು ಎದುರಿಸುವ ಪರಿಸ್ಥಿತಿ ಸೃಷ್ಟಿಸುತ್ತದೆ.
ಆದರೆ ಇದೀಗ ಕಚ್ಛಾ ತೈಲ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ 6 ತಿಂಗಳಲ್ಲಿ ಕಚ್ಛಾ ತೈಲದ ಬೆಲೆ ಸಂಪೂರ್ಣವಾಗಿ ಸ್ಥಿರತೆ ಪಡೆಯುತ್ತದೆ. ಇದು ಭಾರತದ ಮಟ್ಟಿಗಂತೂ ಸಂತಸದ ಸುದ್ದಿಯೇ ಹೌದು.
ಪ್ರತೀ ಬ್ಯಾರಲ್ ಕಚ್ಛಾ ತೈಲದ ಬೆಲೆ 60 ಡಾಲರ್ ಇದ್ದರೆ ಭಾರತ ಸುಲಭವಾಗಿ ಆಮದು ಮಾಡಿಕೊಳ್ಳಬಹುದು. ಒಂದು ವೇಳೇ ಪ್ರತೀ ಬ್ಯಾರಲ್ ಕಚ್ಛಾ ತೈಲದ ಬೆಲೆ 70 ಡಾಲರ್ ಆಸುಪಾಸಿನಲ್ಲಿದ್ದರೂ ಭಾರತ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಆದರೆ ಪ್ರತೀ ಬ್ಯಾರಲ್ ಕಚ್ಛಾ ತೈಲದ ಬೆಲೆ 80 ಡಾಲರ್ ತಲುಪಿದರೆ ಆರ್ಥಿಕ ಸ್ಥಿರತೆಗಾಗಿ ಭಾರತ ಹೆಣಗಬೇಕಾಗುತ್ತದೆ.
ಆದರೆ ಸದ್ಯ ಪ್ರತೀ ಬ್ಯಾರಲ್ ಕಚ್ಛಾ ತೈಲದ ಬೆಲೆ 73 ಡಾಲರ್ ಗೆ ಬಂದು ಸಾಧ್ಯತೆ ಇದ್ದು, ಇದು ಭಾರತಕ್ಕೆ ಸಮಾಧಾನಕರ ಸುದ್ದಿಯಾಗಿದೆ. ಹಲವು ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಶಿಸ್ತನ್ನು ಕಾಪಾಡುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ಮೋದಿ, ಕಚ್ಛಾ ತೈಲದ ಬೆಲೆಯಲ್ಲಿ ಸ್ಥಿರತೆ ಕಂಡುಬಂದರೆ ಖಂಡಿತ ಹೊಸ ಮೈಲುಗಲ್ಲನ್ನು ತಲುಪಲಿದ್ದಾರೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.