*ಜು.31ರೊಳಗೆ ಐಟಿಆರ್ ಸಲ್ಲಿಕೆ ಮಾಡಿರೋರಿಗೆ ಪರಿಶೀಲನೆಗೆ 120 ದಿನಗಳ ಕಾಲಾವಕಾಶ
*ಜು.31ರ ಗಡುವು ಮೀರಿ ವಿಳಂಬ ಐಟಿಆರ್ ಸಲ್ಲಿಕೆ ಮಾಡೋರಿಗೆ ಪರಿಶೀಲನೆಗೆ ಸಮಯಾವಕಾಶ 30 ದಿನಗಳಷ್ಟೇ
*ಐಟಿಆರ್ ಪರಿಶೀಲನೆ ಗಡುವು ಮೀರಿದ್ರೂ ಬೀಳುತ್ತೆ ದಂಡ
Business Desk: 2022-2023ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಸಲ್ಲಿಕೆ ಮಾಡಿರೋರ ಕೆಲಸ ಇನ್ನೂ ಮುಗಿದಿಲ್ಲ. ನೀವು ಐಟಿಆರ್ ಪರಿಶೀಲನೆ ನಡೆಸೋದು ಅತ್ಯಗತ್ಯ. ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆದಾರ ಐಟಿಆರ್ ಸಲ್ಲಿಕೆ ಮಾಡಿದ 120 ದಿನಗಳೊಳಗೆ ಅದನ್ನು ದೃಢೀಕರಿಸದಿದ್ರೆ ಆಗ ಅಂಥ ಐಟಿಆರ್ 'ಅಪೂರ್ಣ ರಿಟರ್ನ್' ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ, ಅಂಥ ಐಟಿಆರ್ ಗಳನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ. ಪರಿಣಾಮ ನೀವು ಈ ವರ್ಷ ತೆರಿಗೆ ಪಾವತಿಸಿಲ್ಲವೆಂದೇ ದಾಖಲೆಗಳಲ್ಲಿ ನಮೂದಾಗುತ್ತದೆ. ಅಷ್ಟೇ ಅಲ್ಲ, ಅಂತಿಮ ಗಡುವಿನೊಳಗೆ ಆದಾಯ ತೆರಿಗೆ ರಿಟರ್ನ್ ಪರಿಶೀಲನೆ ನಡೆಸದಿದ್ರೆ 5000ರೂ. ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಇಲಾಖೆ ಇತ್ತೀಚೆಗಷ್ಟೇ ಐಟಿಆರ್ ಸಲ್ಲಿಕೆ ಅಂತಿಮ ಗಡುವು ಮುಗಿದ ಬಳಿಕ ಫೈಲ್ ಮಾಡೋರಿಗೆ ಅಂದ್ರೆ 2022-2023ನೇ ಮೌಲ್ಯಮಾಪನ ವರ್ಷಕ್ಕೆ ಆಗಸ್ಟ್ 1ರಿಂದ ಸಲ್ಲಿಕೆ ಮಾಡೋರಿಗೆ ಐಟಿಆರ್ ಪರಿಶೀಲನೆಗೆ ನೀಡಿರುವ ಸಮಯಾವಧಿಯನ್ನು 120 ದಿನಗಳಿಂದ 30 ದಿನಗಳಿಗೆ ಇಳಿಕೆ ಮಾಡಿದೆ. ಪರಿಣಾಮ ಜುಲೈ 31ರ ತನಕ ಐಟಿಆರ್ ಫೈಲ್ ಮಾಡಿದವರಿಗೆ ಪರಿಶೀಲನೆಗೆ 120 ದಿನಗಳ ಕಾಲಾವಕಾಶವನ್ನೇ ನೀಡಲಾಗಿದೆ. ಆದರೆ, ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡಿರೋರಿಗೆ ಮಾತ್ರ ಈ ಹಿಂದಿನಂತೆ 120 ದಿನಗಳ ಕಾಲಾವಕಾಶ ನೀಡಲಾಗಿದೆ.
ಈ 3 ಸಂದರ್ಭಗಳಲ್ಲಿ ಐಟಿಆರ್ ಫೈಲಿಂಗ್, ಪರಿಶೀಲನೆ
ಸಂದರ್ಭ 1: ಒಂದು ವೇಳೆ ನೀವು ಅಂತಿಮ ಗಡುವಾದ ಜುಲೈ 31ಕ್ಕಿಂತ ಮೊದಲು ಐಟಿಆರ್ (ITR) ಸಲ್ಲಿಕೆ ಮಾಡಿದ್ರೆ ರಿಟರ್ನ್ ಪರಿಶೀಲನೆಗೆ ನಿಮಗೆ 120 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ನೀವು ಪರಿಶೀಲನೆಗೆ ನೀಡಿರುವ ಅಂತಿಮ ಗಡುವು ಮೀರಿದ್ರೆ ವಿಳಂಬವಾಗಿರೋದಕ್ಕೆ ಕ್ಷಮೆ ( condonation) ಕೋರಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನಿಮ್ಮ ವಿಳಂಬ ಮನವಿ ಸ್ವೀಕಾರವಾದ್ರೆ, ಆಗ ನಿಮ್ಮ ಐಟಿಆರ್ ಪರಿಶೀಲನೆ ( ITR verification) ನಡೆಸಬಹುದು. ಒಂದು ವೇಳೆ ನಿಮ್ಮ ಕ್ಷಮೆ ಅರ್ಜಿ ತಿರಸ್ಕೃತಗೊಂಡರೆ, ಆಗ ನಿಮ್ಮ ಐಟಿಆರ್ ಸಲ್ಲಿಕೆಯಾಗಿಲ್ಲ ಎಂದೇ ಪರಿಗಣಿಸಲಾಗುತ್ತದೆ. ಇಂಥ ಸಮಯದಲ್ಲಿ ನೀವು ವಿಳಂಬ ಐಟಿಆರ್ (Belated ITR) ಸಲ್ಲಿಕೆ ಮಾಡಬೇಕು. ಅಷ್ಟೇ ಅಲ್ಲ, ವಿಳಂಬ ಐಟಿಆರ್ ಸಲ್ಲಿಕೆಗಾಗಿ 5000ರೂ. ದಂಡ ಪಾವತಿಸಬೇಕಾಗುತ್ತದೆ. ವಿಳಂಬ ಐಟಿಆರ್ ಪರಿಶೀಲನೆಗೆ ನಿಮಗೆ ಮತ್ತೆ 30 ದಿನಗಳ ಕಾಲಾವಕಾಶ ಸಿಗುತ್ತದೆ.
ಮೈದಾ, ರವೆ, ಗೋಧಿ ಹಿಟ್ಟಿನ ರಫ್ತಿಗೆ ಆ.14 ರಿಂದ ನಿರ್ಬಂಧ; ಬೆಲೆಯೇರಿಕೆಗೆ ಕಡಿವಾಣ ಬೀಳುತ್ತಾ?
ಸಂದರ್ಭ 2: ಒಂದು ವೇಳೆ ನೀವು ಐಟಿಆರ್ ಸಲ್ಲಿಕೆ ಅಂತಿಮ ಗಡುವು ಅಂದ್ರೆ ಜುಲೈ 31ಮೀರಿ ಐಟಿಆರ್ ಫೈಲ್ ಮಾಡಿದ್ರೆ ನೀವು 5000ರೂ. ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ನಿಮಗೆ ಐಟಿಆರ್ ಪರಿಶೀಲನೆಗೆ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ನೀವು ಪರಿಶೀಲನೆ ಗಡುವು ಮೀರಿದ್ರೆ ಆಗ ನಿಮಗೆ ಇನ್ನೊಮ್ಮೆ ದಂಡ ಅಥವಾ ವಿಳಂಬ ಶುಲ್ಕ ಪಾವತಿಸಬೇಕಾದ ಅಗತ್ಯವಿಲ್ಲ. ಏಕೆಂದ್ರೆ ನೀವು ವಿಳಂಬ ಐಟಿಆರ್ ಸಲ್ಲಿಕೆಗೆ ಈಗಾಗಲೇ ದಂಡ ಪಾವತಿಸಿರುವ ಕಾರಣ ಇನ್ನೊಮ್ಮೆ ಪಾವತಿಸಬೇಕಾದ ಅಗತ್ಯವಿಲ್ಲ.
ಸಾಲ ತೀರಿಸಲು ಮನೆ ಮಾರಲು ಹೊರಟವನಿಗೆ ₹1ಕೋಟಿ ಲಾಟರಿ
ಸಂದರ್ಭ 3: ಒಂದು ವೇಳೆ ಐಟಿಆರ್ ಫೈಲ್ ಮಾಡಲು ನಿಮ್ಮ ಖಾತೆ ಅಡಿಟ್ ಆಗಬೇಕಾದ ಅಗತ್ಯವಿದ್ರೆ ಆಗ 2022-2023ನೇ ಮೌಲ್ಯಮಾಪನ ವರ್ಷಕ್ಕೆ ನಿಮ್ಮ ಐಟಿಆರ್ ಸಲ್ಲಿಕೆ ಗಡುವು ಸೆಪ್ಟೆಂಬರ್ 30. ಇದಾದ ನಂತರ 30 ದಿನಗಳ ಕಾಲ ನಿಮಗೆ ಐಟಿಆರ್ ಪರಿಶೀಲನೆಗೆ ಅವಕಾಶ ನೀಡಲಾಗುತ್ತದೆ. ಆದರೆ, ನೀವು 30 ದಿನಗಳೊಳಗೆ ಪರಿಶೀಲನೆ ಮಾಡದಿದ್ರೆ ಆಗ ನೀವು ವಿಳಂಬ ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ. ಇದಕ್ಕೆ ನಿಮಗೆ ದಂಡ ಕೂಡ ವಿಧಿಸಲಾಗುತ್ತದೆ.