
ಬೆಂಗಳೂರು (ಏ.23): ಅಮೆರಿಕವು ಸಾರಿರುವ ಸುಂಕ ಸಮರ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಗಳ ಸ್ಥಿತಿಗತಿ ಮತ್ತು ಇತ್ತೀಚಿನ ಜಾಗತಿಕ ರಾಜಕೀಯ ಬೆಳವಣಿಗೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಖನಿಜ ಭವನದಲ್ಲಿ ಮಹತ್ತ್ವದ ಸಭೆ ನಡೆಸಿ, ಚರ್ಚಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಅಮೆರಿಕವು ಭಾರತವೂ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳ ಮೇಲೆ ಭಾರೀ ಸುಂಕ ಏರಲು ತೀರ್ಮಾನಿಸಿದೆ. ಸದ್ಯಕ್ಕೆ ಅದು ಪ್ರತಿಸುಂಕ ವಿಧಿಸುವುದನ್ನು ಮೂರು ತಿಂಗಳ ಕಾಲ ಮುಂದೂಡಿದೆ. ಅಮೆರಿಕದ ಈ ಕ್ರಮ ಕರ್ನಾಟಕದ ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್, ಫಾರ್ಮಸ್ಯೂಟಿಕಲ್, ರಕ್ಷಣಾ ಉತ್ಪನ್ನ ಮತ್ತಿತರ ರಫ್ತು ವಹಿವಾಟಿನ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿವೆ ಎನ್ನುವುದನ್ನು ಸಭೆಯಲ್ಲಿ ಅಂದಾಜು ಮಾಡಲಾಯಿತು ಎಂದರು.
ಈ ಪರಿಸ್ಥಿತಿಯನ್ನು ರಾಜ್ಯವು ಸದವಕಾಶವಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಪ್ರತಿಸುಂಕದ ಹೊಡೆತಕ್ಕೆ ಹಲವು ದೇಶಗಳು, ಅನೇಕ ಉದ್ದಿಮೆಗಳು ನಲುಗಬಹುದು. ಅಂತಹ ಸಂದರ್ಭದಲ್ಲಿ ರಾಜ್ಯದ ಪಾತ್ರ ಹೇಗಿರಬೇಕು? ನಮ್ಮ ಹೂಡಿಕೆ ಒಪ್ಪಂದಗಳಿಗೆ ಯಾವ ತೊಂದರೆಯೂ ಆಗದಂತೆ ಹೇಗೆ ಮುನ್ನೆಚರಿಕೆ ವಹಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸುಂಕ ಸಮರವನ್ನು ಒಂದು ದೇಶವಾಗಿ ಹೇಗೆ ಎದುರಿಸಬೇಕೆಂದು ಕೇಂದ್ರ ಸರಕಾರವು ಕೂಡ ಯೋಚಿಸುತ್ತಿದೆ. ಒಂದು ರಾಜ್ಯವಾಗಿ ಕರ್ನಾಟಕವು ಕೂಡ ಇದಕ್ಕೆ ಸಿದ್ಧವಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವಿಧಾನಸೌಧ 'ಗೈಡೆಡ್ ಟೂರ್' ಆರಂಭ; ಪ್ರತಿ ವ್ಯಕ್ತಿಗೆ ₹150 ಶುಲ್ಕ!
ಸಭೆಯಲ್ಲಿ ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪಿನ ಅಂತರರಾಷ್ಟ್ರೀಯ ವ್ಯಾಪಾರ ತಜ್ಞ ಮೈಕೇಲ್ ಅಮೆರಿಕಾದಿಂದ ವರ್ಚುಯಲ್ ಮೂಲಕ ಭಾಗವಹಿಸಿ ಮಾಹಿತಿ ನೀಡಿದರು. ಸುಂಕ ಸಮರದ ಪರಿಣಾಮಗಳನ್ನು ವಿಶ್ಲೇಷಣೆ ಮಾಡುವ ಕೆಲಸ ನಡೆಯುತ್ತಿದ್ದು ಈ ಹಂತದಲ್ಲಿ ಹೀಗೆಯೇ ಆಗುತ್ತದೆಂದು ಹೇಳುವುದು ಕಷ್ಟ. ಸ್ವಲ್ಪ ದಿನ ಕಾದು ನೋಡಬೇಕಾಗಿದೆ. ಚೀನಾದ ಮೇಲೆ ಹೆಚ್ಚು ತೆರಿಗೆ ಹಾಕಿದ್ದು, ಅದರ ಪರಿಣಾಮಗಳ ವಿಶ್ಲೇಷಣೆ ನಡೆದಿದೆ ಎಂದು ಮೈಕೇಲ್ ಮಾಹಿತಿ ನೀಡಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.