
ನವದೆಹಲಿ: ಮೇ ತಿಂಗಳ ಮೊದಲ ದಿನದಿಂದಲೇ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ಬ್ಯಾಂಕ್ ರಜಾದಿನ, ಎಟಿಎಂನಿಂದ ಹಣ ಪಡೆಯುವ ಶುಲ್ಕ, ಕ್ರೆಡಿಟ್ ಕಾರ್ಡ್ ಬಿಲ್ ಹೀಗೆ ಹಲವು ವಿಷಯಗಳಲ್ಲಿ ಬದಲಾವಣೆಯಾಗಲಿದೆ. ಕೇಂದ್ರ ಸರ್ಕಾರ "ಒಂದು ರಾಜ್ಯ- ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್" ನೀತಿಗೆ ಹಸಿರು ನಿಶಾನೆಯನ್ನು ತೋರಿದೆ. ಈ ನೀತಿ ಅನ್ವಯ ಮೇ 1ರಿಂದ ದೇಶದಲ್ಲಿನ 15 ಗ್ರಾಮೀಣ ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ. ಮೇ 1 ರಿಂದ 43 ಆರ್‌ಆರ್‌ಬಿ ಬ್ಯಾಂಕುಗಳಲ್ಲಿ 15 ವಿಲೀನಗೊಳ್ಳಲಿವೆ. ವಿಲೀನ ಪ್ರಕ್ರಿಯೆಯಿಂದಾಗಿ ದೇಶದಲ್ಲಿನ ಆರ್‌ಆರ್‌ಬಿ ಬ್ಯಾಂಕ್‌ಗಳ ಸಂಖ್ಯೆ 43ರಿಂದ 28ಕ್ಕೆ ಇಳಿಕೆಯಾಗಲಿದೆ.
ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಓಡಿಶಾ ಮತ್ತು ರಾಜಸ್ಥಾನದ 15 ಬ್ಯಾಂಕ್‌ಗಳು ವಿಲೀನ ಆಗುತ್ತಿವೆ. ಈ ವಿಲೀನದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಗುಣಮಟ್ಟದ ಸೇವೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಏಕೀಕೃತ IFSC ಮತ್ತು MICR ಕೋಡ್ ಹೊಂದುವ ಕಾರಣ ಹಣದ ವಹಿವಾಟು ಮತ್ತು ಸಾಲದ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ವರದಿಯಾಗಿದೆ.
ಬ್ಯಾಂಕ್‌ಗಳ ವಿಲೀನದಿಂದ ಪರಿಣಾಮ ಏನು?
15 ಬ್ಯಾಂಕ್‌ಗಳ ವಿಲೀನದಿಂದಾಗಿ ಇಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಮತ್ತು ಅವರ ಹಣದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರ ಮನದಲ್ಲಿ ಬರುತ್ತದೆ. ಈ 15 ಬ್ಯಾಂಕ್‌ಗಳ ವಿಲೀನದಿಂದಾಗಿ ಗ್ರಾಹಕರ ಕೆಲವು ಬದಲಾವಣೆಗಳನ್ನು ನೋಡಬೇಕಾಗುತ್ತದೆ. ಈ ವಿಲೀನದಿಂದಾಗಿ ಕೆಲವು ದಾಖಲೆಗಳನ್ನು ಗ್ರಾಹಕರು ಸರಿ ಮಾಡಿಸಿಕೊಳ್ಳಬೇಕಾಗುತ್ತದೆ. ಗ್ರಾಹಕರ ಬ್ಯಾಂಕ್ ಹೆಸರು ಮತ್ತು IFSC Code ಬದಲಾಗುತ್ತದೆ. ಈ ವಿಲೀನದ ಬಳಿಕ ಗ್ರಾಹಕರು ಬ್ಯಾಂಕ್‌ಗಳಿಗೆ ತೆರಳಿ ಹೊಸ ಪಾಸ್‌ಬುಕ್ ಮತ್ತು ಚೆಕ್‌ಬುಕ್ ಪಡೆದುಕೊಳ್ಳಬೇಕು.
ಇದರ ಜೊತೆಯಲ್ಲಿ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆ, ಗ್ರಾಹಕರ ಗುರುತಿನ ಸಂಖ್ಯೆಯೂ ಬದಲಾಗಲಿದೆ. ವಿಶೇಷವೆಂದರೆ ಬ್ಯಾಂಕುಗಳ ವಿಲೀನವು ಅವರ ಖಾತೆಗಳಲ್ಲಿ ಜಮಾ ಮಾಡಲಾದ ಹಣ, ಬ್ಯಾಂಕ್ ಬ್ಯಾಲೆನ್ಸ್, ಎಫ್‌ಡಿ, ಆರ್‌ಡಿ ಅಥವಾ ಸಾಲದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ಗ್ರಾಹಕರು ಹಣದ ಬಗ್ಗೆ ಆತಂಕಕ್ಕೊಳಗಾಗೋದು ಬೇಡ. ಖಾತೆಗಳಲ್ಲಿರುವ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.
ಯಾಬ ಬ್ಯಾಂಕ್ ಯಾವುದರಲ್ಲಿ ವಿಲೀನ?
RBಗಳನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆ, 1976 ರ ಸೆಕ್ಷನ್ 23A(1) ರ ಅಡಿಯಲ್ಲಿ ನೀಡಲಾದ ಅಧಿಕಾರಗಳ ಅಡಿಯಲ್ಲಿ ಒಂದೇ ಘಟಕವಾಗಿ ಸಂಯೋಜಿಸಲಾಗುತ್ತದೆ. ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ವಿಲೀನಗೊಂಡು ಒಂದೇ ಆಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸಿರುವ ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್ ಮತ್ತು ಆಂಧ್ರಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್‌ಗಳನ್ನು ವಿಲೀನಗೊಳಿಲಾಗುತ್ತದೆ. ಈ ವಿಲೀನ ಬಳಿಕ ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್ ರಚನೆಯಾಗುತ್ತದೆ.
ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯಲು ಆರ್‌ಬಿಐ ಹೊಸ ನಿಯಮ,ಬದಲಾವಣೆ ಏನು?
ಬರೋಡಾ ಯು.ಪಿ. ಉತ್ತರ ಪ್ರದೇಶ ಬ್ಯಾಂಕ್, ಆರ್ಯವರ್ಟ್ ಬ್ಯಾಂಕ್ ಮತ್ತು ಪ್ರಥಮ ಯು.ಪಿ. ಗ್ರಾಮೀಣ ಬ್ಯಾಂಕ್ ವಿಲೀನಗೊಳಿಸಿ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಎಂದು ರಚನೆ ಮಾಡಲಾಗುತ್ತದೆ. ಈ ಬ್ಯಾಂಕ್‌ಗಳು ಬ್ಯಾಂಕ್ ಆಫ್ ಬರೋಡಾದ ಪ್ರಾಯೋಜಕತ್ವದ ಅಡಿಯಲ್ಲಿ ಬರಲಿದ್ದು, ಇದರ ಕೇಂದ್ರ ಕಚೇರಿ ಲಕ್ನೋದಲ್ಲಿರಲಿದೆ.
ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಂಗಿಯಾ ಗ್ರಾಮೀಣ ವಿಕಾಸ್, ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರಬಂಗ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್‌ನಲ್ಲಿ ವಿಲೀನವಾಗಲಿದೆ. ದಕ್ಷಿಣ ಬಿಹಾರ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಬಿಹಾರ ಗ್ರಾಮೀಣ ಬ್ಯಾಂಕ್ ರಚಿಸಲಾಗಿದೆ. ಗುಜರಾತ್‌ನಲ್ಲಿ ಬರೋಡಾ ಗುಜರಾತ್ ಗ್ರಾಮೀಣ ಬ್ಯಾಂಕ್ ಮತ್ತು ಸೌರಾಷ್ಟ್ರ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಗುಜರಾತ್ ಗ್ರಾಮೀಣ ಬ್ಯಾಂಕ್ ಆಗಲಿದೆ.
ಇದನ್ನೂ ಓದಿ: ಮಿನಿಮಮ್ ಬ್ಯಾಲೆನ್ಸ್ ಇರಿಸದ ಬ್ಯಾಂಕ್ ಗ್ರಾಹಕರಿಂದ 43,500 ಕೋಟಿ ಸಂಗ್ರಹ: ಮಲ್ಲಿಕಾರ್ಜುನ ಖರ್ಗೆ ಆರೋಪ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.