2023ನೇ ಸಾಲಿನ ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 70ನೇ ಸ್ಥಾನ ಪಡೆದಿರುವ ಸೋಮ ಮಂಡಲ್ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಸರ್ಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ (ಎಸ್ಎಐಎಲ್) ಮುಖ್ಯಸ್ಥೆಯಾಗಿದ್ದ ಈಕೆಯ ಸಾಧನೆ ಮಹಿಳೆರಯರಿಗೆ ಸ್ಫೂರ್ತಿ.
Business Desk: ದೇಶದ ಅನೇಕ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಯ ಸಿಇಒ ಹುದ್ದೆಗಳನ್ನು ಕೂಡ ಭಾರತೀಯ ನಾರಿಯರು ಸಮರ್ಥವಾಗಿ ನಿಭಾಯಿಸುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿದ್ದಾರೆ. ದೇಶದಲ್ಲಿ ಇಂದು ಇಂಥ ಹಲವಾರು ಮಹಿಳೆಯರಿದ್ದಾರೆ. ಅದರಲ್ಲೂ ಉದ್ಯಮ, ಆಡಳಿತ ನಿರ್ವಹಣೆಯಂಥ ಪುರುಷ ಪ್ರಧಾನ ವ್ಯವಸ್ಥೆಗಳಲ್ಲಿ ಕೂಡ ಮಹಿಳೆಯರು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ರೀತಿ ಬೃಹತ್ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಹಿಡಿದು ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಜಗತ್ತಿನ ಗಮನ ಸೆಳೆದ ಮಹಿಳೆಯರಲ್ಲಿ ಸೋಮ ಮಂಡಲ್ ಕೂಡ ಒಬ್ಬರು. 2023ನೇ ಸಾಲಿನ ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೋಮ ಮಂಡಲ್ 70ನೇ ಸ್ಥಾನ ಪಡೆದಿದ್ದಾರೆ ಕೂಡ. ಕೇಂದ್ರ ಸರ್ಕಾರದ ಒಡೆತನದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್) ಮುಖ್ಯಸ್ಥೆಯಾಗಿ ಮಂಡಲ್ ಕಾರ್ಯನಿರ್ವಹಿಸಿದ್ದರು. ಕೇಂದ್ರದ ಸಾರ್ವಜನಿಕ ವಲಯದ ಸಂಸ್ಥೆಯೊಂದರ ಉನ್ನತ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಅವರಿಗಿದೆ.
ಸೋಮ ಮಂಡಲ್ 2017 ರಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL) ನಿರ್ದೇಶಕಿಯಾಗಿ ನೇಮಕಗೊಂಡರು. ಆ ಬಳಿಕ 2021ರಲ್ಲಿ ಮುಖ್ಯಸ್ಥೆ ಹುದ್ದೆಗೆ ಬಡ್ತಿ ಪಡೆದರು. 2023ರ ಏಪ್ರಿಲ್ 30ರಂದು ಅವರು ಈ ಹುದ್ದೆಯಿಂದ ನಿವೃತ್ತರಾಗಿದ್ದರು. 2023ರ ಡಿಸೆಂಬರ್ 6ಕ್ಕೆ ಅನ್ವಯವಾಗುವಂತೆ SAIL ಮಾರುಕಟ್ಟೆ ಬಂಡವಾಳ 41,075 ಕೋಟಿ ರೂ. ಇದೆ. ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಮುನ್ನಡೆಸೋದು ನಿಜಕ್ಕೂ ಸುಲಭದ ಕೆಲಸವಲ್ಲ. ಆದರೆ, ಸೋಮ ಮಂಡಲ್ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.
ತೆಂಗಿನ ಚಿಪ್ಪಿಂದಲೇ ತಿಂಗಳಿಗೆ ಲಕ್ಷಾಂತರ ಸಂಪಾದಿಸ್ತಾರೆ ಕೇರಳದ ಈ ಹುಡುಗಿ!
ಸೋಮ ಮಂಡಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL) ಮುಖ್ಯಸ್ಥೆಯಾಗಿರುವ ಸಮಯದಲ್ಲಿ ಸಂಸ್ಥೆ ಆರ್ಥಿಕ ಬೆಳವಣಿಗೆ ದಾಖಲೆ ಮಟ್ಟದಲ್ಲಿತ್ತು. ಅವರು ಸಂಸ್ಥೆ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಂಪನಿಯ ಲಾಭದಲ್ಲಿ ಮೂರು ಪಟ್ಟು ಹೆಚ್ಚಳವಾಗಿತ್ತು. ಅವರು ಮುಖ್ಯಸ್ಥೆಯಾದ ಮೊದಲ ವರ್ಷವೇ 120 ಬಿಲಿಯನ್ ರೂ. ಲಾಭವಾಗಿತ್ತು.
ಸೋಮ ಮಂಡಲ್ ಲೋಹದ ಕೈಗಾರಿಕೆಯಲ್ಲಿ ಮೂರು ದಶಕಕ್ಕಿಂತಲೂ ಹೆಚ್ಚಿನ ಅನುಭವ ಹೊಂದಿದ್ದಾರೆ. ರೂರ್ಕೆಲಾ ಎನ್ ಐಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಅವರು ಪದವಿ ಪಡೆದಿದ್ದಾರೆ. ಪದವಿ ಬಳಿಕ ಸರ್ಕಾರಿ ಸ್ವಾಮ್ಯದ ಎನ್ಎಎಲ್ ಸಿಒ (NALCO) ಸೇರಿದ್ದರು. 2017ರಲ್ಲಿ SAIL ಸೇರುವ ಮುನ್ನ ಅವರು ಆ ಸಂಸ್ಥೆಯಲ್ಲಿ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ್ದರು.SAIL ಮುಖ್ಯಸ್ಥೆ ಹುದ್ದೆಯಲ್ಲಿ ಇವರು 91.7ಲಕ್ಷ ರೂ. ವೇತನ ಪಡೆಯುತ್ತಿದ್ದರು.
ಭುವನೇಶ್ವರದ ಬೆಂಗಾಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಸೋಮ ಮಂಡಲ್ ಅವರ ತಂದೆ ಕೃಷಿ ಅರ್ಥಶಾಸ್ತ್ರಜ್ಞರಾಗಿದ್ದರು. ಓದಿನಲ್ಲಿ ಚುರುಕಾಗಿದ್ದ ಸೋಮ ಮಂಡಲ್ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಮಂಡಲ್ ಅವರು ಇಂಜಿನಿಯರಿಂಗ್ ಮಾಡುವ ಸಂದರ್ಭದಲ್ಲಿ ಕೆಲವೇ ಕೆಲವು ಯುವತಿಯರು ಮಾತ್ರ ಆ ಕಾಲೇಜಿನಲ್ಲಿದ್ದರು.ಆ ಸಮಯದಲ್ಲಿ ಮಹಿಳೆಯರು ಈಗಿನಂತೆ ಉನ್ನತ ಶಿಕ್ಷಣ ಪಡೆಯೋದು ತುಂಬಾ ಕಡಿಮೆಯಿತ್ತು.
ಅತೀ ಕಿರಿಯ ವಯಸ್ಸಲ್ಲಿ ಬರೋಬ್ಬರಿ 2602 ಕೋಟಿ ಸಂಸ್ಥೆಯ ಒಡತಿ ಅವನಿ ದಾವ್ಡಾ; ಟಾಟಾ ಜೊತೆ ಇರೋ ಸಂಬಂಧವೇನು?
ಇನ್ನು ಕಾಲೇಜು ಶಿಕ್ಷಣದ ಬಳಿಕ ಉದ್ಯೋಗಕ್ಕೆ ಸೇರಿದ ಸಂದರ್ಭದಲ್ಲಿ ಕೂಡ ಮಂಡಲ್ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಸ್ಟೀಲ್ ಉತ್ಪಾದನಾ ಕ್ಷೇತ್ರಗಳಲ್ಲಿ ಕೂಡ ಅನೇಕ ಸವಾಲುಗಳಿದ್ದ ಕಾರಣ ಮಹಿಳೆಯಾಗಿ ಅವೆಲ್ಲವನ್ನೂ ಎದುರಿಸಿ ವೃತ್ತಿಯಲ್ಲಿ ಉನ್ನತ ಸ್ಥಾನ ಅಲಂಕರಿಸುವಲ್ಲಿ ಅವರು ಸಫಲರಾಗಿದ್ದರು.
2021ರ ಮಾರ್ಚ್ ನಲ್ಲಿ ಸೋಮ ಮಂಡಲ್ ಅವರನ್ನು ಸ್ಟ್ಯಾಂಡಿಂಗ್ ಕಾನ್ಫರೆನ್ಸ್ ಆಫ್ ಪಬ್ಲಿಕ್ ಎಂಟರ್ ಪ್ರೈಸರ್ಸ್ (SCOPE) ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿತ್ತು.