ಕೃಷಿಯಿಂದ ವಿಮುಖರಾಗುತ್ತಿರೋರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲಮಾನದಲ್ಲಿ ಉತ್ತರಾಖಂಡ್ ನ ಇಬ್ಬರು ಸಹೋದರಿಯರು ನೆಲ್ಲಿಕಾಯಿ, ತರಕಾರಿ ಬೆಳೆದು ವರ್ಷಕ್ಕೆ 11 ಲಕ್ಷ ರೂ. ಗಳಿಸುತ್ತಿದ್ದಾರೆ.
ಹಳ್ಳಿಯಲ್ಲಿನ ಗದ್ದೆ, ತೋಟ ಬಿಟ್ಟು ನಗರದತ್ತ ಮುಖ ಮಾಡುತ್ತಿರೋರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ, ಕೋವಿಡ್ -19 ಸಾಂಕ್ರಾಮಿಕದ ಬಳಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾಗಿದೆ ಎಂದೇ ಹೇಳಬಹುದು. ಕೋವಿಡ್ ಜನರನ್ನು ನಗರ ಬಿಟ್ಟು ಹಳ್ಳಿಯತ್ತ ಮುಖ ಮಾಡುವಂತೆ ಮಾಡಿತ್ತು. ಹೀಗೆ ಹಳ್ಳಿಗೆ ತೆರಳಿದವರಲ್ಲಿ ಹಲವರು ನಗರಕ್ಕೆ ಮರಳಿ ಬಾರದೆ ಅಲ್ಲೇ ಕೃಷಿಯನ್ನು ನೆಚ್ಚಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕೋವಿಡ್ ಸಮಯದಲ್ಲಿ ಹಳ್ಳಿಗೆ ಭೇಟಿ ನೀಡಿದ ಉತ್ತರಾಖಂಡ್ ಡೆಹ್ರಾಡೂನ್ ನ ಇಬ್ಬರು ಸಹೋದರಿಯರಾದ ನಮಿತಾ ರಾವತ್ ನೇಗಿ ಮತ್ತು ಮನಿಶಾ ಗೋಸೈನ್ ಅವರಿಗೆ ತಾವೇಕೆ ಕೃಷಿ ಮಾಡಬಾರದು ಎಂಬ ಯೋಚನೆ ಹುಟ್ಟಿಕೊಂಡಿತು. ಪಾಳುಬಿದ್ದ ಭೂಮಿಯಲ್ಲಿ ನೆಲ್ಲಿಕಾಯಿ ಹಾಗೂ ತರಕಾರಿಗಳನ್ನು ಬೆಳೆಯುವ ಮೂಲಕ ಇವರಿಬ್ಬರು ಕಳೆದ ಹಣಕಾಸು ಸಾಲಿನಲ್ಲಿ 11 ಲಕ್ಷ ರೂ. ಆದಾಯ ಗಳಿಸಿದ್ದಾರ. ಈ ಮೂಲಕ ಕೃಷಿಯೆಂದ್ರೆ ಮೂಗು ಮುರಿಯುತ್ತಿದ್ದವರಿಗೆ ಅಕ್ಕ-ತಂಗಿ ತಕ್ಕ ಉತ್ತರ ನೀಡಿದ್ದಾರೆ. ಭೂಮಿ ತಾಯಿ ನಂಬಿದವರ ಕೈಬಿಡೋದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬರಡು ಭೂಮಿಯಲ್ಲಿ ಹಸಿರು ಅರಳಿತು
ಡೆಹ್ರಾಡೂನ್ ಮೂಲದ ಸಹೋದರಿಯರಾದ ನಮಿತಾ ರಾವತ್ ನೇಗಿ ಮತ್ತು ಮನಿಶಾ ಗೋಸೈನ್ ಇಬ್ಬರು 40ನೇ ವಯಸ್ಸಿನ ಆಸುಪಾಸಿನಲ್ಲಿದ್ದರು. ಹೀಗಾಗಿ ಅವರು ಕೃಷಿ ಮಾಡುತ್ತೇವೆ ಎಂದು ಹೇಳಿದಾಗ ಬಹುತೇಕರು ಅವರನ್ನು ಉತ್ತೇಜಿಸುವ ಬದಲಿಗೆ ಆತ್ಮವಿಶ್ವಾಸ ಕುಗ್ಗಿಸುವಂತಹ ಮಾತುಗಳನ್ನು ಆಡಿದ್ದರು. ಆದರೆ, ನಮಿತಾ ಹಾಗೂ ಮನೀಶಾ ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಬರಡು ಭೂಮಿಯಲ್ಲಿ ಹಸಿರು ಅರಳಿಸಲು ಮುಂದಾದರು. ತಮ್ಮ ಕೃಷಿ ಭೂಮಿಯನ್ನು ನೆಲ್ಲಿಕಾಯಿ ಫಾರ್ಮ್ ಆಗಿ ಪರಿವರ್ತಿಸಿದರು. ಅಲ್ಲಿ ಅವರು ಟೊಮ್ಯಾಟೋ, ಬದನೆಕಾಯಿ, ಕುಂಬಳಕಾಯಿ ಹಾಗೂ ಪಾಲಕ್ ಸೊಪ್ಪು ಮುಂತಾದ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು. ಪಾಳು ಬಿದ್ದ ಭೂಮಿಯಿಂದ ಉತ್ತಮ ಆದಾಯ ಪಡೆಯಲು ಪ್ರಾರಂಭಿಸಿದರು.
ಉದ್ಯಮ ಪ್ರಾರಂಭಿಸೋರಿಗೆ ಸ್ಫೂರ್ತಿ ಈಕೆ ;ಬರೀ 3 ಲಕ್ಷ ಹೂಡಿಕೆಯಿಂದ 300 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಗಟ್ಟಿಗಿತ್ತಿ
ಡೂನ್ ಗೂಸ್ಬೆರಿ ಫಾರ್ಮ್ ಸ್ಥಾಪನೆ
ನಮಿತಾ ಹಾಗೂ ಮನಿಶಾ ಅವರ ಕನಸಿಗೆ ಅವರ ಪತಿಯರ ಬೆಂಬಲ ಕೂಡ ಸಿಕ್ಕಿತು. ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಂದ ಸಣ್ಣ ಮೊತ್ತದ ಸಾಲವನ್ನು ಪಡೆದು ಅಕ್ಕ-ತಂಗಿ ಡೂನ್ ಗೂಸ್ಬೆರಿ ಫಾರ್ಮ್ ಪ್ರಾರಂಭಿಸಿದರು. ಈ ಪ್ರಯತ್ನದಲ್ಲಿ ಅವರಿಬ್ಬರು ಯಶಸ್ವಿ ಕೂಡ ಆಗಿದ್ದಾರೆ. ಕೃಷಿಯ ಕುರಿತು ಇಬ್ಬರಿಗೂ ಯಾವುದೇ ಅನುಭವ ಇರಲಿಲ್ಲ. ಆದರೂ ಇಬ್ಬರು ಸವಾಲುಗಳನ್ನು ಎದುರಿಸಿ ಮುನ್ನಡೆದರು. ಪ್ರಾರಂಭದಲ್ಲಿ ಕೃಷಿ ಭೂಮಿ ಹುಲ್ಲುಗಳಿಂದ ತುಂಬಿತ್ತು. ಆದರೆ, ಅಲ್ಲಿ ಸಾಕಷ್ಟು ನೆಲ್ಲಿಕಾಯಿ ಮರಗಳಿದ್ದವು. ಅಲ್ಲದೆ, ಅವುಗಳಲ್ಲಿ ಸಾಕಷ್ಟು ನೆಲ್ಲಿಕಾಯಿಗಳು ಕೂಡ ಇದ್ದವು. ಹೀಗಾಗಿ ಅವರಿಬ್ಬರು ನೆಲ್ಲಿಕಾಯಿ ಜೊತೆಗೆ ತರಕಾರಿಗಳನ್ನು ಬೆಳೆಯಲು ನಿರ್ಧರಿಸಿದ್ದರು. ಅಲ್ಲದೆ, ಫಾರ್ಮ್ ನಲ್ಲಿ ಬೆಳೆದ ನೆಲ್ಲಿಕಾಯಿಗಳು, ಮಾವಿನಕಾಯಿ, ಅರಿಶಿಣ, ಬೆಳ್ಳುಳ್ಳಿ ಹಾಗೂ ಲಿಂಬೆಹಣ್ಣು ಬಳಸಿಕೊಂಡು ಚಟ್ನಿ, ಉಪ್ಪಿನಕಾಯಿ, ಜಾಮ್ ಮುಂತಾದ ಉತ್ಪನ್ನಗಳನ್ನು ಕೂಡ ಸಿದ್ಧಪಡಿಸುತ್ತಿದ್ದಾರೆ.
ರಾಸಾಯನಿಕಮುಕ್ತ ಕೃಷಿ
ನಮಿತಾ ಹಾಗೂ ಮನಿಶಾ ಕೃಷಿಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕ ವಿಧಾನ ಅನುಸರಿಸಿದ್ದರು. ರಾಸಾಯನಿಕ ಸ್ಪ್ರೆಗಳು ಹಾಗೂ ಕೀಟನಾಶಕಗಳ ಬದಲಿಗೆ ಮೊಟ್ಟೆ ಸಿಪ್ಪೆಗಳು, ತರಕಾರಿ ಸಿಪ್ಪೆಗಳು ಹಾಗೂ ಹಸುವಿನ ಗೊಬ್ಬರ ಬಳಸಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
'ಪ್ರೇರಣಾ'ದಾಯಕ ಕತೆ; ಅಂದು ಸ್ಕೂಲ್ ಟೀಚರ್; ಇಂದು 330 ಕೋಟಿ ಕಂಪನಿಯ ಒಡತಿ
11 ಲಕ್ಷ ಆದಾಯ
ನಮಿತಾ ಹಾಗೂ ಮನಿಶಾ ಅವರ ಡೂನ್ ಗೂಸ್ಬೆರಿ ಫಾರ್ಮ್ ಕಳೆದ ಹಣಕಾಸು ಸಾಲಿನಲ್ಲಿ ಒಟ್ಟು 11 ಲಕ್ಷ ರೂ. ಆದಾಯ ಗಳಿಸಿದೆ. ಅದರಲ್ಲಿ ಐದು ಲಕ್ಷ ರೂ. ನೇರ ಲಾಭ ಗಳಿಸಿದೆ.