ಮುಂಬೈ ಟ್ರಾಫಿಕ್ ನಿಂದ ಪಾರಾಗಲು ರೈಲಿನಲ್ಲಿ ಪ್ರಯಾಣಿಸಿದ ಬಿಲಿಯನೇರ್;ಉದ್ಯಮಿ ಸರಳತೆಗೆ ನೆಟ್ಟಿಗರ ಶಬ್ಬಾಸ್ ಗಿರಿ

By Suvarna News  |  First Published Dec 31, 2023, 12:43 PM IST

ಬಿಲಿಯನೇರ್ ಉದ್ಯಮಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸೋದನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ.ಹೀಗಿರುವಾಗ ಬಿಲಿಯನೇರ್ ಉದ್ಯಮಿ ನಿರಂಜನ್ ಹೀರಾನಂದಾನಿ ಮುಂಬೈ ಟ್ರಾಫಿಕ್ ನಿಂದ ಪಾರಾಗಲು ರೈಲಿನಲ್ಲಿ ಸಂಚರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 


ಮುಂಬೈ (ಡಿ.31): ಸಾಮಾನ್ಯವಾಗಿ ಶ್ರೀಮಂತ ಉದ್ಯಮಿಗಳು ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಬಳಸೋದೇ ಇಲ್ಲ ಅಥವಾ ತೀರಾ ವಿರಳ ಎಂದೇ ಹೇಳಬಹುದು. ಹೀಗಿರುವಾಗ ಹೀರಾನಂದಾನಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಹಸಂಸ್ಥಾಪಕ 73 ವರ್ಷದ ನಿರಂಜನ್ ಹೀರಾನಂದಾನಿ ಮುಂಬೈ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋವನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಿಲಿಯನೇರ್ ಉದ್ಯಮಿ ಹೀರಾನಂದಾನಿ ಪ್ಲಾಟ್ ಫಾರ್ಮ್ ನಲ್ಲಿ ರೈಲಿಗಾಗಿ ಕಾಯುತ್ತಿರೋದು, ಎಸಿ ಕೋಚ್ ಹತ್ತಿರೋದು ಹಾಗೂ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ ನಗರಕ್ಕೆ ಪ್ರಯಾಣಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇನ್ನು ವಿಡಿಯೋಕ್ಕೆ ನೀಡಿರುವ ಶೀರ್ಷಿಕೆಯಲ್ಲಿ ಹೀರಾನಂದಾನಿ, ಮುಂಬೈನ ಭಯಂಕರ ಟ್ರಾಫಿಕ್ ನಿಂದ ಪಾರಾಗಲು ಹಾಗೂ ಸಮಯ ಉಳಿಸಲು ರೈಲು ಪ್ರಯಾಣ ಆರಿಸಿಕೊಂಡಿರೋದಾಗಿ ತಿಳಿಸಿದ್ದಾರೆ. ಹಾಗೆಯೇ ಈ ಪ್ರಯಾಣವನ್ನು 'ಒಳಗಣ್ಣು ತೆರೆಸುವ ಅನುಭವ' ಎಂದು ವಿವರಿಸಿದ್ದಾರೆ. ರೈಲು ಪ್ರಯಾಣದ ಸಮಯದಲ್ಲಿ ಹೀರಾನಂದನಿ ಸಹಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದ್ದರು ಕೂಡ. 

ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗಿರುವ ಈ ವಿಡಿಯೋ ಅನ್ನು 22 ದಶಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆಯನ್ನು ಆರಿಸಿಕೊಂಡಿರುವ ಹೀರಾನಂದಾನಿ ಅವರನ್ನು ಹೊಗಳಿದ್ದಾರೆ. ಈ ವಿಡಿಯೋಗೆ ಮಾಡಿರುವ ಕೆಲವು ಕಾಮೆಂಟ್ ಗಳಲ್ಲಿ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಲಾಗಿದೆ. ಇನ್ನೂ ಕೆಲವರು ಅವರನ್ನು ಭೇಟೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೆಲವರು ಹೀರಾನಂದನಿ ಹತ್ತಿರುವ ಕೋಚ್ ವಿಶೇಷ ಚೇತನರಿಗೆ ಮೀಸಲಿಟ್ಟ ಕೋಚ್ ಎಂಬುದನ್ನು ಗುರುತಿಸಿದ್ದಾರೆ. ಇದನ್ನು ದೈಹಿಕ ನ್ಯೂನ್ಯತೆ ಹೊಂದಿರೋರಿಗೆ, ಗರ್ಭಿಣಿಯರಿಗೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Niranjan Hiranandani (@n_hiranandani)

 

ಈ ಎಲ್ಲ ಟೀಕೆಗಳ ಹೊರತಾಗಿಯೂ ಹೀರಾನಂದನಿ ಅವರ ರೈಲು ಪ್ರಯಾಣದ ಬಗ್ಗೆ ಒಟ್ಟಾರೆಯಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕ ಸಾರಿಗೆಯನ್ನು ಆಯ್ದುಕೊಳ್ಳುವುದಿಂದ ಮಾಲಿನ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ವಿಚಾರಗಳ ಮೇಲೆ ಸಕಾರಾತ್ಮಕ ಪರಿಣಾಮಗಳುಂಟಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಇನ್ನು ಮುಂಬೈ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವ ನಿರ್ಧಾರವನ್ನು ಹೀರಾನಂದನಿ ಲೆಕ್ಕಾಚಾರ ಹಾಕಿ ಮೊದಲೇ ಮಾಡಿದ್ದರು. ಉಲ್ಲಾಸ್ ನಗರದ ಸಿಎಚ್ ಎಂ ಕಾಲೇಜಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಸ್ತೆ ಮೂಲಕ ಪ್ರಯಾಣಿಸಿದರೆ ಟ್ರಾಫಿಕ್ ಕಾರಣದಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಅವರು ಸ್ಥಳೀಯ ರೈಲು ಪ್ರಯಾಣ ಆಯ್ದುಕೊಂಡಿದ್ದರು. ಇದಕ್ಕಾಗಿ ಘಟ್ಕೋಪರ್ ಕೇಂದ್ರೀಯ ರೈಲ್ವೆ ನಿಲ್ದಾಣದಿಂದ ಉಲ್ಲಾಸ್ ನಗರಕ್ಕೆ ಪ್ರಯಾಣಿಸುವ ಯೋಜನೆ ರೂಪಿಸಿದ್ದರು. 30 ನಿಮಿಷಗಳ ಈ ಪ್ರಯಾಣದ ಅವಧಿಯಲ್ಲಿ ಹೀರಾನಂದಾನಿ ಸಹಪ್ರಯಾಣಿಕರ ಜೊತೆಗೆ ಮಾತುಕತೆ ನಡೆಸಿದ್ದರು. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಕೂಡ. 

ಹೊಸ ವರ್ಷದಲ್ಲಿ ಮುಕೇಶ್ ಅಂಬಾನಿ ಬಿಗ್‌ ಬಿಸಿನೆಸ್ ಪ್ಲಾನ್‌ , AI ಬಳಸಿ ಕೋಟಿ ಕೋಟಿ ಗಳಿಸುತ್ತಾ ಅಂಬಾನಿ ಗ್ರೂಪ್‌!

ನಿರಂಜನ್ ಹೀರಾನಂದಾನಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 79ನೇ ಸ್ಥಾನದಲ್ಲಿದ್ದಾರೆ. ಇವರು ತಮ್ಮ ಸಹೋದರ ಸುರೇಂದ್ರ ಅವರ ಜೊತೆಗೂಡಿ ಹೀರಾನಂದನಿ ಗ್ರೂಪ್ ಅನ್ನು ಸ್ಥಾಪಿಸಿದ್ದರು. ಹೀರಾನಂದನಿ ಗ್ರೂಪ್ ಜನಪ್ರಿಯ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದೆ. ಇನ್ನು ಹೀರಾನಂದನಿ ಫೌಂಡೇಷನ್ ಸ್ಕೂಲ್ ಗಳು ಕೂಡ ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದ ನಿರಂಜನ್ ಹೀರಾನಂದಾನಿ ವಿವಿಧ ಉದ್ಯಮಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡರು. ಆದರೆ, ರಿಯಲ್ ಎಸ್ಟೇಟ್ ಉದ್ಯಮ ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು. ಕಮಲಾ ಹೀರಾನಂದನಿ ಅವರನ್ನು ವಿವಾಹವಾಗಿರುವ ನಿರಂಜನ್ ಹೀರಾನಂದನಿ ಅವರಿಗೆ ಪ್ರಿಯಾ ಹಾಗೂ ದರ್ಶನ್ ಎಂಬ ಇಬ್ಬರು ಮಕ್ಕಳಿದ್ದಾರೆ.  ಅವರ ಪುತ್ರ ದರ್ಶನ್ ಹೀರಾನಂದನಿ ಕೂಡ ಈಗ ತಂದೆ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 
 

click me!