ಒಂದಲ್ಲ,ಎರಡಲ್ಲ17 ಉದ್ಯಮ ಪ್ರಾರಂಭಿಸಿದ್ರೂ ಸಿಗದ ಗೆಲುವು;ಆದ್ರೂ ಛಲ ಬಿಡದ ಈತ ಈಗ ಶತಕೋಟಿ ಕಂಪನಿ ಒಡೆಯ

By Suvarna NewsFirst Published Jan 18, 2024, 2:09 PM IST
Highlights

ಕೆಲವರಿಗೆ ಒಂದು ಸೋಲನ್ನೇ ಅರಗಿಸಿಕೊಳ್ಳಲು ಸಾಧ್ಯವಾಗೋದಿಲ್ಲ.ಹೀಗಿರುವಾಗ ಉದ್ಯಮ ರಂಗದಲ್ಲಿ ಒಬ್ಬ ವ್ಯಕ್ತಿ 17 ಬಾರಿ ಸೋಲು ಕಂಡರೆ ಆತನ ಪರಿಸ್ಥಿತಿ ಏನಾಗಬೇಡ? ಆದರೆ, ಈತ ಎಲ್ಲರಂತಲ್ಲ,17ಬಾರಿ ಸೋತರೂ ಯಶಸ್ಸು ಸಿಗುತ್ತೆ ಎಂಬ ಆಶಾವಾದಿ. ಹೀಗಾಗಿಯೇ 18ನೇ ಪ್ರಯತ್ನದಲ್ಲಿ ದೊಡ್ಡ ಯಶಸ್ಸು ಕಾಣುತ್ತಾನೆ. 

Business Desk: ಭಾರತದಲ್ಲಿ ಪ್ರತಿಭಾವಂತರೆಲ್ಲ ಐಐಟಿಯಲ್ಲಿ ಸೀಟು ಪಡೆಯಬೇಕೆಂಬ ಹಂಬಲ ಹೊಂದಿರುತ್ತಾರೆ. ಇದಕ್ಕೆ ಕಾರಣನೂ ಇದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖ ಹುದ್ದೆಗಳನ್ನು ಐಐಟಿಯಲ್ಲಿ ಓದಿರೋರು ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅನೇಕರು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸುವ ಮೂಲಕ ಯಶಸ್ಸು ಕೂಡ ಕಂಡಿದ್ದಾರೆ. ಇನ್ನೂ ಕೆಲವರು ತಮ್ಮ ಉದ್ಯಮಗಳಲ್ಲಿ ಸಾಕಷ್ಟು ಬಾರಿ ವೈಫಲ್ಯ ಅನುಭವಿಸಿದ್ದರೂ ನಿಧಾನವಾಗಿ ಯಶಸ್ಸು ಕಂಡಿದ್ದಾರೆ. ಅಂಥವರಲ್ಲಿ ಶೇರ್ ಚಾಟ್ ಸಹ ಸಂಸ್ಥಾಪಕ ಅಂಕುಶ್ ಸಚ್ ದೇವ್ ಕೂಡ ಒಬ್ಬರು. ಶೇರ್ ಚಾಟ್ ಸ್ಟಾರ್ಟ್ ಅಪ್ ಪ್ರಾರಂಭಿಸುವ ಮುನ್ನ ಸಚ್ ದೇವ್ ಒಂದಲ್ಲ ಎರಡಲ್ಲ, ಒಟ್ಟು 17 ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಿದ್ದರೂ ಯಾವುದರಲ್ಲೂ ಯಶಸ್ಸು ಕಂಡಿರಲಿಲ್ಲ. ಆದರೂ ಛಲ ಬಿಡದೆ ಪ್ರಯತ್ನಿಸಿದ ಪರಿಣಾಮ ಅವರ 18ನೇ ಸ್ಟಾರ್ಟ್ ಅಪ್ ಯಶಸ್ಸು ಕಂಡಿತು. ಒಂದು ಬಾರಿ ವೈಫಲ್ಯ ಅನುಭವಿಸಿದರೆ ಎಲ್ಲವೂ ಮುಗಿಯಿತು ಅಂದ್ಕೊಳ್ಳುವವರ ನಡುವೆ ಸಚ್ ದೇವ್ ಭಿನ್ನವಾಗಿ ಕಾಣಿಸುತ್ತಾರೆ. ಅಲ್ಲದೆ, ಸೋಲಿನಿಂದ ಕಂಗೆಡದೆ ಮತ್ತೆ ಪ್ರಯತ್ನಿಸಬೇಕು ಎಂಬುದಕ್ಕೆ ಒಳ್ಳೆಯ ನಿದರ್ಶನವಾಗಿದ್ದಾರೆ.

18ನೇ ಪ್ರಯತ್ನದಲ್ಲಿ ಸಿಕ್ಕ ಯಶಸ್ಸು
ಅಂಕುಶ್ ಸಚ್ ದೇವ್ 17 ಬಾರಿ ಉದ್ಯಮಗಳನ್ನು ಪ್ರಾರಂಭಿಸಿದರೂ ಅದೃಷ್ಟ ಅವರ ಕೈ ಹಿಡಿಯಲಿಲ್ಲ. ಅವರ ಜಾಗದಲ್ಲಿ ಬೇರೆ ಯಾರೇ ಇದಿದ್ದರೂ ಸ್ವಂತ ಕಂಪನಿ ಸ್ಥಾಪಿಸುವ ಕನಸನ್ನು ಕೈ ಬಿಟ್ಟು ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದರು. ಆದರೆ, ಸಚ್ ದೇವ್ ಹಾಗೇ ಮಾಡಲಿಲ್ಲ. ಛಲ ಬಿಡದೆ ಪ್ರಯತ್ನಿಸಿದರೂ ಪರಿಣಾಮ 18ನೇ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಕ್ಕಿತು. ಸಹನೆ, ಕಠಿಣ ಪರಿಶ್ರಮ ಹಾಗೂ ಛಲ ಒಂದಲ್ಲ ಒಂದು ದಿನ ಯಶಸ್ಸನ್ನು ತಂದುಕೊಡುತ್ತದೆ ಎಂಬುದಕ್ಕೆ ಅಂಕುಶ್ ಸಚ್ ದೇವ್ ಅವರಿಗಿಂತ ಉತ್ತಮ ನಿದರ್ಶನ ಬೇರೆ ಸಿಗಲಿಕ್ಕಿಲ್ಲ.

ಭಾರತೀಯ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕನಸಿಗೆ ವೇದಿಕೆ ಕಲ್ಪಿಸಿದ ಈತ ಈಗ ಬಿಲಿಯನೇರ್ ಉದ್ಯಮಿ

ಶೇರ್ ಚಾಟ್ ಪ್ರಾರಂಭವಾಗಿದ್ದು ಹೀಗೆ
17 ಬಾರಿ ಉದ್ಯಮದಲ್ಲಿ ಅದೃಷ್ಟ ಪರೀಕ್ಷೆಗಿಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ತನ್ನ ಇಬ್ಬರು ಐಐಟಿ ಸ್ನೇಹಿತರಾದ ಫರಿದ್ ಅಶಾನ್ ಹಾಗೂ ಭಾನು ಸಿಂಗ್ ಜೊತೆಗೆ ಸೇರಿ ಸಚ್ ದೇವ್ ಶೇರ್ ಚಾಟ್ ಅಪ್ಲಿಕೇಷನ್ ಪ್ರಾರಂಭಿಸಿದರು. ಈ ಮೂವರು ಸಹಸಂಸ್ಥಾಪಕರು ಫೇಸ್ ಬುಕ್ ಹಾಗೂ ವಾಟ್ಸಾಪ್ ನಲ್ಲಿ ಹೊಸ ವೀಕ್ಷಕರನ್ನು ಕಂಡರು. ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾದ ಅವರು, 2015ರ ಜನವರಿಯಲ್ಲಿ ಮೊಹಲ್ಲ ಟೆಕ್ ಪ್ರೈವೇಟ್ ಲಿಮಿಟೆಡ್ ಪ್ರಾರಂಭಿಸಿದರು. ಇದು ಶೇರ್ ಚಾಟ್ ಮಾತೃಸಂಸ್ಥೆಯಾಗಿದೆ. 2015ರ ಅಕ್ಟೋಬರ್ ನಲ್ಲಿ ಅವರು ಶೇರ್ ಚಾಟ್ ಪ್ರಾರಂಭಿಸಿದರು. ಆರಂಭದಲ್ಲಿ ಇದನ್ನು ಹಿಂದಿ, ತೆಲುಗು, ಮಲಯಾಳಂ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಾರಂಭಿಸಿದರು. 

ಶೇರ್ ಚಾಟ್ ಸಿಇಒ
ಪ್ರಸ್ತುತ ಅಂಕುಶ್ ಸಚ್ ದೇವ್ ಶೇರ್ ಚಾಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಐಟಿ ಕಾನ್ಪುರದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಸಚ್ ದೇವ್, ಸ್ವಲ್ಪ ಸಮಯ ಮೈಕ್ರೋಸಾಫ್ಟ್ ನಲ್ಲಿ ಇಂಟರ್ನಿ ಆಗಿ ಕೂಡ ಕಾರ್ಯನಿರ್ವಹಿಸಿದ್ದರು. 

ಕೇವಲ1.6ಲಕ್ಷ ರೂ. ಹೂಡಿಕೆಯೊಂದಿಗೆ ಅಮೆರಿಕದಲ್ಲಿ ಉದ್ಯಮ ಪ್ರಾರಂಭಿಸಿದ ಭಾರತೀಯ ಮಹಿಳೆ ಈಗ ಬಿಲಿಯನೇರ್

ಶೇರ್ ಚಾಟ್ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಭಾರತ, ಅಮೆರಿಕ ಹಾಗೂ ಯುರೋಪಿನಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ಕಂಪನಿಗೆ ಗೂಗಲ್ ಬೆಂಬಲ ಕೂಡ ಇದೆ. ಇನ್ನು ಈ ಕಂಪನಿಯ ಮೌಲ್ಯ 40,000 ಕೋಟಿ ರೂ.ಗಿಂತಲೂ ಹೆಚ್ಚಿದೆ. 
 

click me!