
ಬೆಂಗಳೂರು(ಏ.15): ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಅಕಾಲಿಕ ಮಳೆಯಾಗಿದ್ದರಿಂದ ಪ್ರಸಕ್ತ ವರ್ಷದಲ್ಲಿ ಮಾವಿನ ಫಸಲು ಶೇಕಡ 60ರಷ್ಟುಕುಸಿತವಾಗಿದೆ. ಋುತುಮಾನದ ಏರುಪೇರು ಹಾಗೂ ಮಾವಿನ ಹೂವಿಗೆ ತೆನೆ ಕೊರಕದ ಬಾಧೆ ಹೆಚ್ಚಾಗಿದೆ. ಮಳೆಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದರಿಂದ ಮಾವು ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ಮರಗಳಲ್ಲಿ ಹೂವಿನ ಪ್ರಮಾಣವೂ ಶೇ.50ಕ್ಕಿಂತ ಕಡಿಮೆ ಇದ್ದು, ಈ ಬಾರಿ ಉತ್ಪಾದನೆ ಕುಸಿಯಲಿದೆ.
ಪ್ರಸಕ್ತ ವರ್ಷ ಮಾವು ಬೆಳೆ ಏರು ಹಂಗಾಮು (ಆನ್ ಇಯರ್) ಆಗಬೇಕಿತ್ತು. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಾವಿನ ಮರಗಳಲ್ಲಿ ಪೂರ್ಣ ಪ್ರಮಾಣದ ಹೂವು ಬಿಡಬೇಕಿತ್ತು. ನವೆಂಬರ್ ತಿಂಗಳಲ್ಲಿ ಮಳೆಯಾದ್ದರಿಂದ ಹೂವು ಬಿಡುವ ಸಂದರ್ಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿತ್ತು. ಪರಿಣಾಮ ಹೂವು ಬಿಡುವುದು ತಡವಾಗಿತ್ತು. ಆದ್ದರಿಂದ ಈ ವರ್ಷ ಡಿಸೆಂಬರ್ ಮೊದಲ ವಾರದ ವರೆಗೂ ಕೇವಲ ಶೇ.40-50ರವರೆಗೆ ಮಾತ್ರ ಹೂವು ಬಿಟ್ಟಿತ್ತು. ಹೀಗಾಗಿ ಈ ಬಾರಿ ಮಾವು ಇಳಿ ಹಂಗಾಮು (ಆಫ್ ಇಯರ್) ಆಗಲಿದೆ ಎಂದು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆಮಂಡಳಿ ತಿಳಿಸಿದೆ.
ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು ಸಾಮಾನ್ಯವಾಗಿ 14-15 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತದೆ. ಈ ಬಾರಿ ಶೇ.40ರಷ್ಟುಮಾತ್ರ ಫಸಲು ಸಿಗಲಿದೆ ಕೇವಲ 8 ಲಕ್ಷ ಮೆಟ್ರಿಕ್ ಟನ್ ನಿರೀಕ್ಷಿಸಲಾಗಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜ್ ತಿಳಿಸಿದರು.
ಆಗಸ್ಟ್‌ವರೆಗೂ ಮಾವು:
ರಾಮನಗರ ಜಿಲ್ಲೆಯಲ್ಲಿ ಮಾವು ಮಾಚ್‌ರ್ ಎರಡನೇ ವಾರದಲ್ಲಿ ನಗರದ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಏಪ್ರಿಲ್ ಮೂರನೇ ವಾರದಿಂದ ಮಾರುಕಟ್ಟೆಗಳಿಗೆ ಆಗಮಿಸಲಿದೆ. ಪ್ರತಿ ವರ್ಷ ಜುಲೈ ಅಂತ್ಯಕ್ಕೆ ಮಾವಿನ ಋುತು ಅಂತ್ಯವಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಆಗಸ್ಟ್ ಅಂತ್ಯದವರೆಗೂ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ ಎಂದು ಅವರು ವಿವರಿಸಿದರು.
ನಿಗಮದಿಂದ ಹೂವಿನ ರಕ್ಷಣೆಗಾಗಿ ತರಬೇತಿ
ತಡವಾಗಿ ಬಿಟ್ಟಹೂವಿಗೆ ಕಾಲಕಾಲಕ್ಕೆ ಅಗತ್ಯ ಔಷಧಿಗಳನ್ನು ಸಿಂಪಡಿಸಿ, ಹೂವು ಉದುರುವುದನ್ನು ತಡೆಯಬೇಕು. ಇಲ್ಲದಿದ್ದರೆ ಬಿಟ್ಟಹೂವಿಗೆ ತೆನೆ ಕೊರಕ, ಬೂದಿರೋಗ, ಜಿಗಿಹುಳದ ಬಾಧೆಯಿಂದ ಮತ್ತಷ್ಟುನಷ್ಟಹೊಂದಬೇಕಾಗುತ್ತದೆ. ಹೀಗಾಗಿ ಮಾವು ಹೂವಿನಿಂದ ಹಣ್ಣಿನವರೆಗೆ, ನಂತರ ಗ್ರಾಹಕರ ಕೈಸೇರುವವರೆಗೆ ಬೆಳೆಯನ್ನು ಹೇಗೆ ಆರೈಕೆ ಮಾಡಬೇಕು, ಗುಣಮಟ್ಟದ ಹಣ್ಣನ್ನು ಉತ್ಪಾದಿಸುವುದು ಹೇಗೆ, ಮಾರುಕಟ್ಟೆಹೇಗೆ ಎಂಬುದರ ಬಗ್ಗೆ ಮಾವು ಅಭಿವೃದ್ಧಿ ಮಂಡಳಿಯು ಬೆಳೆಗಾರರಿಗೆ ಕಾಲ ಕಾಲಕ್ಕೆ ತರಬೇತಿಗಳನ್ನು ನೀಡುತ್ತಿದೆ. ಫೋನ್ ಇನ್ ಕಾರ್ಯಕ್ರಮ ಕರಪತ್ರಗಳನ್ನು ಹಂಚಿ ತರಬೇತಿಗೆ ಹಾಜರಾಗುವಂತೆ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ಅವರು ಹೇಳಿದರು.
ರೈತರಿಗೆ ಉತ್ತಮ ದರ
ಮಳೆಯಿಂದಾಗಿ ಮಾವಿನ ಫಸಲು ಕಡಿಮೆಯಾಗಲಿದೆ. ಮಾರುಕಟ್ಟೆಗಳಲ್ಲಿ ಬೇಡಿಕೆಯೂ ಹೆಚ್ಚಾಗಲಿದೆ. ಇದರಿಂದ ಮಾವಿನ ಹಣ್ಣುಗಳಿಗೆ ತುಸು ಬೆಲೆ ಹೆಚ್ಚಾಗಲಿದ್ದು, ಮಾವು ಬೆಳೆಯುವ ರೈತರು ಉತ್ತಮ ಬೆಲೆ ನಿರೀಕ್ಷಿಸಬಹುದಾಗಿದೆ.
-ಸಿ.ಜಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.