
ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊಸದೊಂದು ಪ್ರವೃತ್ತಿ ಬೆಳೆಯುತ್ತಿರುವ ಬಗ್ಗೆ ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಟೆಕ್ಕಿಯೊಬ್ಬರು ಹಂಚಿಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದ್ದಲ್ಲದೆ, ಯಶಸ್ವಿ ವೃತ್ತಿಜೀವನ ರೂಪಿಸಿಕೊಳ್ಳಲು ಯುವ ಎಂಜಿನಿಯರ್‌ಗಳಿಗೆ ಸಾಂಪ್ರದಾಯಿಕ ಉದ್ಯೋಗಗಳೇ ಅಗತ್ಯವೇ ಎಂಬ ಬಗ್ಗೆ ಚರ್ಚೆಗೆ ಹುಟ್ಟುಹಾಕಿದೆ.
ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನೆಲೆಸಿರುವ ಭಾರತೀಯ ಟೆಕ್ಕಿ ಅಭಿಷೇಕ್ ಯಾದವ್(Abhishek Yadav an NRI techie) ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರಿನಲ್ಲಿ ಹೊಸದೊಂದು ಪ್ರವೃತ್ತಿ ಬೆಳೆಯುತ್ತಿರುವ ಬಗ್ಗೆ ಪೋಸ್ಟ್‌ನಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅನೇಕ ಎಂಜಿನಿಯರ್‌ಗಳು ಕಂಪನಿ ಉದ್ಯೋಗ ಬಿಟ್ಟು ಸ್ವತಂತ್ರ ಸಂಶೋಧನೆ, ವೈಯಕ್ತಿಕ ಪ್ರಾಜೆಕ್ಟ್‌ಗಳತ್ತ ಮುಖ ಮಾಡುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ. ಮತ್ತೊಂದು ಕಂಪನಿಗೆ ಸೇರುವುದು ಅಥವಾ ಸ್ಟಾರ್ಟ್‌ಅಪ್ ಆರಂಭಿಸಲು ಹಣ ಸಂಗ್ರಹಿಸುವ ಬದಲು, ತಮಗೆ ಆಸಕ್ತಿಯಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೆಲವರು ಮುಂದಾಗುತ್ತಿದ್ದಾರೆ. ಇದಕ್ಕಾಗಿ ಅವರು ಮ್ಯಾನೇಜರ್, ನಿಗದಿತ ಕೆಲಸದ ಯೋಜನೆ ಅಥವಾ ಉದ್ಯೋಗದಾತರ ನಿಯಂತ್ರಣವಿಲ್ಲದೆ ಕೆಲಸದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಅಭಿಷೇಕ್ ಯಾದವ್ ಅವರು ಈ ವಿಧಾನವನ್ನು ‘Luck maxxing’ ಎಂದು ಕರೆದಿದ್ದಾರೆ. ಸಾಂಪ್ರದಾಯಿಕ ಉದ್ಯೋಗಗಳಿಗೆ ಸೀಮಿತವಾಗದೆ ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಅನಿರೀಕ್ಷಿತ ಅವಕಾಶಗಳು ಮತ್ತು ಹೊಸ ಆವಿಷ್ಕಾರಗಳಿಗೆ ಕಾರಣವಾಗಬಹುದು ಎಂಬುದು ಅವರ ಅಭಿಪ್ರಾಯ. ಒಂದು ಕಂಪನಿಯಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳಿಗೆ ಅವಕಾಶಗಳು ಕಡಿಮೆ. ಅಲ್ಲದೆ ಆ ಸಂಸ್ಥೆಯ ಆದ್ಯತೆ, ಪ್ರಾಜೆಕ್ಟ್‌ಗಳಿಗೆ ಮಾತ್ರ ಸೀಮಿತವಾಗಿರುತ್ತೆ. ಅದೇ ಸ್ವತಂತ್ರ್ಯವಾಗಿ ತಮಗೆ ಆಸಕ್ತಿಯಿರುವ ಸಮಸ್ಯೆಗಳನ್ನು ಬಗೆಹರಿಸುವ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದರಿಂದ ಹೊಸ ಪ್ರಯೋಗಗಳನ್ನು ಮಾಡಲು, ತಮ್ಮ ಆಲೋಚನೆಗಳನ್ನು ತಿಳಿಸಲು ಅಥವಾ ಹೊಸ ಮಾದರಿ ಉತ್ಪನ್ನವೊಂದನ್ನು ರೂಪಿಸಲು ಸಾಧ್ಯವಾಗುತ್ತದೆ.
ಕಡಿಮೆ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಕೆಲಸ ಮಾಡುವ ಸಾಮರ್ಥ್ಯ, ಅದರಲ್ಲೂ ಎಐ ಉಪಕರಣಗಳ ನೆರವು, ಉದ್ಯೋಗದ ಭದ್ರತೆ, ವೃತ್ತಿಪರ ಸ್ವಾತಂತ್ರ್ಯ ನಡುವಿನ ಸಾಂಪ್ರಾದಾಯಿಕ ಲೆಕ್ಕಾಚಾರವನ್ನೇ ಬದಲಾಯಿಸುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಈ ಹಿಂದೆ ಅಂದರೆ ಕೆಲವು ವರ್ಷಗಳ ಹಿಂದೆ ಒಂದು ಕೆಲಸವನ್ನು ಇಡೀ ತಂಡ ಸೇರಿಕೊಂಡು ಮಾಡಬೇಕಾಗಿದ್ದ ಕೆಲಸವನ್ನು ಇಂದು ಒಬ್ಬ ವ್ಯಕ್ತಿಯೇ ಮಾಡಲು ಸಾಧ್ಯವಾದರೆ ಕೆಲವು ನುರಿತ ಎಂಜಿನಿಯರ್‌ಗಳಿಗೆ ಕಂಪನಿಯ ವ್ಯವಸ್ಥೆಯೊಳಗೆ ಕೆಲಸ ಮುಂದುವರಿಸುವ ಆಸಕ್ತಿ ಕಡಿಮೆಯಾಗಬಹುದು ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಎಂಜಿನಿಯರ್‌ಗಳು ಸಾಂಪ್ರದಾಯಿಕ ವೃತ್ತಿಜೀವನಕ್ಕೆ ಗುಡ್‌ಬೈ ಹೇಳಿ ಸ್ವತಂತ್ರವಾಗಿ ಕೆಲಸ ಮಾಡಲು ನಿರ್ಧರಿಸಿದರೆ ತಂತ್ರಜ್ಞಾನ ಉದ್ಯಮದ ಭವಿಷ್ಯ ಹೇಗಿರಬಹುದು ಎಂಬ ಪ್ರಶ್ನೆಯನ್ನೂ ಯಾದವ್ ಎತ್ತಿದ್ದಾರೆ.
ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಸ್ವತಂತ್ರವಾಗಿ ಕೆಲಸ ಮಾಡುವುದರಲ್ಲಿರುವ ಸ್ವಾತಂತ್ರ್ಯವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಸ್ಥಾಪಿತ ಕಂಪನಿಗಳನ್ನು ತೊರೆಯುವುದರಿಂದ ಎದುರಾಗಬಹುದಾದ ಪ್ರಾಕ್ಟಿಕಲ್ ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ. ಕಂಪನಿಯಲ್ಲಿನ ನಿಗದಿತ ಕೆಲಸವನ್ನು ಬಿಡುವುದರಿಂದ ಟೆಕ್ಕಿಗಳಿಗೆ ತಮ್ಮ ಆಸಕ್ತಿಗೆ ತಕ್ಕಂತೆ ಕೆಲಸ ಮಾಡಲು ಹೆಚ್ಚಿನ ಸ್ವಾತಂತ್ರ್ಯ ಸಿಗಬಹುದು ಎಂದು ಒಬ್ಬ ಬಳಕೆದಾರ ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲೂ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಉತ್ಪನ್ನಗಳ ಅಭಿವೃದ್ಧಿ ಮತ್ತು ಕೆಲಸದ ವೇಗದ ಮೇಲೆ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
Something is changing in software engineering both in SF & BLR, and I don't think we've named it properly yet.
More and more young engineers are leaving good jobs - not for another job, not to raise a round, but to do independent research. No manager, no roadmap, no employer. Just a problem they can't stop thinking about and the willingness to bet their own time on it.
People call this risky. I think it's the opposite. It's luck maxxing.
A job concentrates your surface area for luck into one company's roadmap. Independent work spreads it across everything: the writing, the prototypes, the people you meet because you finally have time to think. You can't schedule a lucky break, but you can maximize the number of places one can find you.
The old trade was safety for surface area. When one person with AI tools can do what used to take a team, that trade stops making sense for the best engineers.
The interesting question isn't why they're leaving. It's what happens when enough of them do.
— Abhishek Yadav (@abhisheekkyadav) October 12, 2026
ಮತ್ತೊಬ್ಬ ಬಳಕೆದಾರರ ಪ್ರಕಾರ, ಈ ಬದಲಾವಣೆ ಎಂದರೆ ಎಂಜಿನಿಯರ್‌ಗಳು ಕಂಪನಿಗಳಿಂದ ಸಂಪೂರ್ಣವಾಗಿ ದೂರವಾಗುತ್ತಿದ್ದಾರೆ ಎಂದರ್ಥವಲ್ಲ. ಬದಲಿಗೆ, ಸಾಂಪ್ರದಾಯಿಕ ಉದ್ಯೋಗದ ಸಂಬಂಧಗಳು ಬದಲಾಗಬಹುದು. ಸ್ವತಂತ್ರ ಎಂಜಿನಿಯರ್‌ಗಳು ಸಲಹೆಗಾರರಾಗಿ, ಏಜೆನ್ಸಿಗಳ ಮೂಲಕ ಅಥವಾ ಇತರ ಒಪ್ಪಂದಗಳ ಆಧಾರದಲ್ಲಿ ಕಂಪನಿಗಳೊಂದಿಗೆ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.