ಆಗ ಡಬ್ಲ್ಯುಟಿಒ-ಗ್ಯಾಟ್‌ ಒಪ್ಪಂದ, ಈಗ ಆರ್‌ಸಿಇಪಿ ಒಪ್ಪಂದ: ಏನಿದು ಮುಕ್ತ ವ್ಯಾಪಾರದ ಗುಮ್ಮ?

By Kannadaprabha News  |  First Published Oct 26, 2019, 5:21 PM IST

ಆರ್‌ಸಿಇಪಿ ಎಂದರೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ. ದಕ್ಷಿಣ ಪೂರ್ವ ಏಷ್ಯಾದ 10 ರಾಷ್ಟ್ರಗಳು (ಆಸಿಯಾನ್‌) ಅಂದರೆ ಚೀನಾ, ಭಾರತ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 16 ರಾಷ್ಟ್ರಗಳ ನಡುವೆ ನಡೆಯುವ ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ.


ಮುಂಬೈ (ಅ. 26): ಸರಿಯಾಗಿ 25 ವರ್ಷಗಳ ಹಿಂದೆ ಡಬ್ಲ್ಯುಟಿಒ ಒಪ್ಪಂದಕ್ಕೆ ಭಾರತ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಳ್ಳುವ ಪ್ರಸ್ತಾಪ ದೇಶಾದ್ಯಂತ ದೊಡ್ಡ ವಿವಾದ ಎಬ್ಬಿಸಿತ್ತು. ಈಗ ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ (ಆರ್‌ಸಿಇಪಿ) ಹೆಸರಿನಲ್ಲಿ 16 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ನಡೆಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ಅದಕ್ಕೆ ಸಹಿ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಒಪ್ಪಂದದಿಂದ ಭಾರತದ ಕೃಷಿ, ಆಟೋಮೊಬೈಲ್‌ ಮತ್ತಿತರ ಉತ್ಪಾದನಾ ಕ್ಷೇತ್ರಗಳು ನಷ್ಟಅನುಭವಿಸಬೇಕಾಗುತ್ತದೆ ಎಂದು ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಇಪಿ ಎಂದರೆ ಏನು, ಇದರಿಂದ ಭಾರತಕ್ಕೆ ಇರುವ ಅಪಾಯ ಮತ್ತು ಲಾಭವೇನು ಎಂಬುದರ ಚಿತ್ರಣ ಇಲ್ಲಿದೆ.

Tap to resize

Latest Videos

ದೀಪಾವಳಿಗೆ ಚಿನ್ನ ಖರೀದಿ: ಟ್ಯಾಕ್ಟ್ ರೂಲ್ಸ್ ಗೊತ್ತಿರದಿದ್ದರೆ ಮನೆಗೆ ಬರಲು ಐಟಿ ರೆಡಿ!

ನಾಳೆ ರೈತರಿಂದ ರಾಜ್ಯವ್ಯಾಪಿ ಹೋರಾಟ (ಸೀಲ್‌)

ಆರ್‌ಸಿಇಪಿ ಎಂದರೆ ಏನು?

ಆರ್‌ಸಿಇಪಿ ಎಂದರೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ. ದಕ್ಷಿಣ ಪೂರ್ವ ಏಷ್ಯಾದ 10 ರಾಷ್ಟ್ರಗಳು (ಆಸಿಯಾನ್‌) ಅಂದರೆ ಚೀನಾ, ಭಾರತ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 16 ರಾಷ್ಟ್ರಗಳ ನಡುವೆ ನಡೆಯುವ ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ. ಈ ಒಪ್ಪಂದದ ಬಗ್ಗೆ ಮಾತುಕತೆ ಆರಂಭವಾಗಿದ್ದು 2012ರಲ್ಲಿ ಕಾಂಬೋಡಿಯಾದಲ್ಲಿ ನಡೆದ ಆಸಿಯಾನ್‌ ಶೃಂಗಸಭೆಯಲ್ಲಿ.

ಹಲವು ಸುತ್ತಿನ ಮಾತುಕತೆಗಳ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ನವೆಂಬರ್‌ 4ಕ್ಕೆ ಭಾರತ ಈ ಕುರಿತ ಮಹತ್ವದ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದರೆ 80-95% ಸರಕುಗಳನ್ನು ಸದಸ್ಯ ರಾಷ್ಟ್ರಗಳು ಯಾವುದೇ ಆಮದು ಸುಂಕವಿಲ್ಲದೆ ಆಮದು ಮಾಡಿಕೊಳ್ಳಬಹುದು.

ಒಪ್ಪಂದ ಮಾಡಿಕೊಳ್ಳುವ 16 ರಾಷ್ಟ್ರಗಳು

ಭಾರತ, ಚೀನಾ, ಆಸ್ಪ್ರೇಲಿಯಾ, ಕಾಂಬೋಡಿಯಾ, ಬ್ರುನೈ, ಇಂಡೋನೇಷ್ಯಾ, ಜಪಾನ್‌, ಲಾವೋಸ್‌, ಮಲೇಷ್ಯಾ, ಮ್ಯಾನ್ಮಾರ್‌, ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌, ವಿಯೆಟ್ನಾಂ, ದಕ್ಷಿಣ ಕೊರಿಯಾ.

ಈ ಒಪ್ಪಂದದ ಉದ್ದೇಶ ಏನು?

ಆಮದು ಸುಂಕದ ಸಮಸ್ಯೆಯನ್ನು ಪರಿಹರಿಸಿಕೊಂಡು ಮುಕ್ತ ವ್ಯಾಪಾರ ವಹಿವಾಟು ನಡೆಸುವ ಉದ್ದೇಶದಿಂದ 16 ರಾಷ್ಟ್ರಗಳು ಈ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿವೆ. ಈ ಒಪ್ಪಂದಕ್ಕೆ ಒಳಪಟ್ಟರಾಷ್ಟ್ರಗಳು ಮುಕ್ತವಾಗಿ ತಮ್ಮ ಸರಕುಗಳನ್ನು ರಫ್ತು ಮಾಡಬಹುದು. ಬಹುತೇಕ ಸರಕುಗಳ ಮೇಲೆ ಆಮದು ಸುಂಕ ಇರುವುದಿಲ್ಲ. ಈ ಮೂಲಕ ಪರಸ್ಪರ ಲಾಭ ಪಡೆದು, ಪ್ರಬಲ ಮಾರುಕಟ್ಟೆಯನ್ನು ಸೃಷ್ಟಿಸಿ, ರಫ್ತಿಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಅವಲಂಬನೆಯನ್ನು ತಗ್ಗಿಸುವುದು ಈ ಒಪ್ಪಂದ ಪ್ರಮುಖ ಉದ್ದೇಶ.

ರಾತ್ರೋ ರಾತ್ರಿ ಟ್ರಂಪ್ ಗಿಂತ ಶ್ರೀಮಂತನಾದ 24 ವರ್ಷದದ ಈ ಯುವಕ!

ಭಾರತದ ಮೇಲೆ ಏನು ದುಷ್ಪರಿಣಾಮ?

ಉತ್ಪಾದನಾ ವಲಯಕ್ಕೆ ನಷ್ಟ

ಆರ್‌ಸಿಇಪಿ ಪ್ರಕಾರ ಒಪ್ಪಂದದ ವ್ಯಾಪ್ತಿಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಬಹುತೇಕ ಸರಕುಗಳ ಮೇಲೆ ಆಮದು ಸುಂಕ ವಿಧಿಸುವುದಿಲ್ಲ. ಹೀಗಾಗಿ ಭಾರತ 92% ಸರಕುಗಳನ್ನು ಮುಂದಿನ 15 ವರ್ಷಗಳ ಕಾಲ ಯಾವುದೇ ಸುಂಕವಿಲ್ಲದೆ ಆಮದು ಮಾಡಿಕೊಳ್ಳಬೇಕು. ಇದರಿಂದ ಭಾರತದ ಉದ್ಯಮಗಳು ಅಪಾರ ನಷ್ಟಎದುರಿಸಬೇಕಾಗುತ್ತದೆ.

ಚೀನಾದ ಅಗ್ಗದ ಉತ್ಪನ್ನಗಳಲ್ಲದೆ, 15 ರಾಷ್ಟ್ರಗಳ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವುದರಿಂದ ಭಾರತದ ಉತ್ಪಾದನಾ ವಲಯಕ್ಕೆ ತೀವ್ರ ಹೊಡೆತ ಬೀಳುತ್ತದೆ. ಇಲ್ಲಿನ ಸಣ್ಣ, ಮಧ್ಯಮ ಉದ್ದಿಮೆಗಳು ನಷ್ಟಅನುಭವಿಸುತ್ತವೆ. ಇದರಿಂದ ಕ್ರಮೇಣ ಸರ್ಕಾರಕ್ಕೆ ಜಿಎಸ್‌ಟಿ ಸಂಗ್ರಹ ಕೂಡ ಕಡಿಮೆಯಾಗುತ್ತದೆ.

ಸ್ಥಳೀಯ ಹೈನುಗಾರಿಕೆಗೆ ಹಿನ್ನಡೆ

ಹೈನುಗಾರಿಕೆ ಭಾರತದ ಪ್ರಮುಖ ಕಸುಬುಗಳಲ್ಲಿ ಒಂದು. ಆದರೆ ಈ ಒಪ್ಪಂದದ ಸದಸ್ಯ ರಾಷ್ಟ್ರವಾಗಿರುವ ನ್ಯೂಜಿಲೆಂಡ್‌ ಕೂಡ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದು. ಹೈನು ಉತ್ಪನ್ನಗಳ ಬಳಕೆಯಲ್ಲಿ ಭಾರತ ದೊಡ್ಡ ಮಾರುಕಟ್ಟೆಯಾಗಿರುವುದರಿಂದ ನ್ಯೂಜಿಲೆಂಡ್‌ ಕಣ್ಣು ಭಾರತದ ಮೇಲಿದೆ. ಒಪ್ಪಂದಕ್ಕೆ ಸಹಿ ಹಾಕಿದರೆ ನ್ಯೂಜಿಲೆಂಡ್‌ನ ಹಾಲಿನ ಉತ್ಪನ್ನಗಳು ಅಗ್ಗದ ದರದಲ್ಲಿ ಭಾರತಕ್ಕೆ ಬರುತ್ತವೆ. ಸಹಜವಾಗಿಯೇ ಜನರು ಕಡಿಮೆ ಬೆಲೆಗೆ ಸಿಗುವ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಾರೆ. ಆಗ ಭಾರತದ ರೈತರಿಗೆ ನಷ್ಟವಾಗುತ್ತದೆ.

ಜವಳಿ ಉದ್ದಿಮೆಗೆ ಸಂಕಷ್ಟ

ಆರ್‌ಸಿಇಪಿಯಿಂದ ಚೀನಾ, ವಿಯೆಟ್ನಾಂ, ಬಾಂಗ್ಲಾ ಮತ್ತಿತರ ದೇಶಗಳಿಂದ ಸುಂಕರಹಿತವಾಗಿ ಪಾಲಿಸ್ಟರ್‌ ಫ್ಯಾಬ್ರಿಕ್‌ ಜವಳಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಇಲ್ಲಿನ ಗ್ರಾಹಕರಿಗೆ ಅವು ಸುಲಭ ದರದಲ್ಲಿ ಲಭ್ಯವಾಗುವುದರಿಂದ ಭಾರತದ ಜವಳಿ ಉದ್ಯಮಕ್ಕೆ ಹಿನ್ನಡೆಯಾಗುತ್ತದೆ.

ಕೃಷಿ ಉತ್ಪನ್ನಗಳ ದರ ಕುಸಿತ

ಭಾರತದ ಟೀ, ಕಾಫಿ, ರಬ್ಬರ್‌, ಕಾಳುಮೆಣಸು, ಅಡಕೆ ಬೆಳೆಗಳು ಈ ಒಪ್ಪಂದದಿಂದ ತತ್ತರಿಸುವ ಸಾಧ್ಯತೆಯೇ ಹೆಚ್ಚು. ಸದ್ಯ ಈ ಸರಕುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸುತ್ತಿವೆ. ಆರ್‌ಸಿಇಪಿಯಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕ ಶೂನ್ಯಕ್ಕೆ ಇಳಿಯುತ್ತದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನೋಡುತ್ತಿವೆ. ಇದರಿಂದ ಲಕ್ಷಾಂತರ ತೋಟಗಾರಿಕೆ ಹಾಗೂ ಸಂಬಾರ ಪದಾರ್ಥಗಳು ಬೇರೆ ದೇಶಗಳಿಂದ ಸುಲಭ ದರದಲ್ಲಿ ಲಭ್ಯವಾಗುವುದರಿಂದ ಸ್ಥಳೀಯ ಬೆಳೆಗೆ ಬೆಲೆ ಕುಸಿಯುತ್ತದೆ.

ಇನ್ನಷ್ಟು ಉದ್ಯೋಗಕ್ಕೆ ಕುತ್ತು?

ಭಾರತ ಈಗಾಗಲೇ ಭಾರೀ ಪ್ರಮಾಣದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ಬೇರೆ ರಾಷ್ಟ್ರಗಳೊಂದಿಗಿನ ಸ್ಪರ್ಧೆಗಾಗಿ ಭಾರತ ಹೆಚ್ಚು ಹೆಚ್ಚು ತಂತ್ರಜ್ಞಾನದ ಮೊರೆ ಹೋಗುತ್ತದೆ. ಆಗ ಮಾನವ ಶ್ರಮಕ್ಕೆ ಬೆಲೆ ಕಡಿಮೆಯಾಗುತ್ತದೆ. ಮಾನವನ ಜಾಗವನ್ನು ಯಂತ್ರಗಳು ಆಕ್ರಮಿಸುತ್ತವೆ. ಈಗಿರುವ ನಿರುದ್ಯೋಗ ಪ್ರಮಾಣ ಹೆಚ್ಚಬಹುದು.

ಭಾರತಕ್ಕೆ ಆರ್‌ಸಿಇಪಿಯಿಂದ ಏನು ಲಾಭ?

ಈ ಒಪ್ಪಂದಕ್ಕೆ ಒಳಪಡುವ ಸದಸ್ಯ ರಾಷ್ಟ್ರಗಳಿಂದ ಹಾಲು, ಹಾಲಿನ ಉತ್ಪನ್ನಗಳು, ಚಹಾ, ಕಾಳುಮೆಣಸು, ಅಡಕೆ, ರಬ್ಬರ್‌, ಭತ್ತ, ಸಾಗರ ಮೂಲದ ಆಹಾರೋತ್ಪನ್ನಗಳು, ಆಟೋಮೊಬೈಲ್‌, ಇಲೆಕ್ಟ್ರಾನಿಕ್‌ ಉತ್ಪನ್ನಗಳು ಜನರಿಗೆ ಅಗ್ಗದ ದರದಲ್ಲಿ ಲಭ್ಯವಾಗುತ್ತವೆ. ಹೀಗಾಗಿ ದೇಶದಲ್ಲಿ ಹಣದುಬ್ಬರ ತಗ್ಗಬಹುದು ಎನ್ನಲಾಗುತ್ತಿದೆ.

ಭಾರತದ ಮಾರುಕಟ್ಟೆಗೆ ಚೀನಾ ವಸ್ತುಗಳ ಲಗ್ಗೆ?

ಸದ್ಯ ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲೆಯೂ ಸುಂಕ ವಿಧಿಸುತ್ತಿದೆ. ಆದಾಗ್ಯೂ ಭಾರತದಲ್ಲಿ ಚೀನಾ ವಸ್ತುಗಳು ಪ್ರಾಬಲ್ಯ ಸಾಧಿಸುತ್ತಿವೆ. ವಿದ್ಯುನ್ಮಾನ ಕ್ಷೇತ್ರದಿಂದ ಹಿಡಿದು, ಕ್ಷಿಪಣಿ ತಂತ್ರಜ್ಞಾನ, ಆಟೋಮೊಬೈಲ್‌, ಅಕ್ಕಿ, ಗೋದಿ ಮೊದಲಾದ ಉತ್ಪನ್ನಗಳ ದೊಡ್ಡ ಉತ್ಪಾದಕ ರಾಷ್ಟ್ರ ಚೀನಾ. ಒಂದು ವೇಳೆ ಈ ಒಪ್ಪಂದ ಜಾರಿಯಾದರೆ ಭಾರತದ ಮಾರುಕಟ್ಟೆಯ ಮೇಲೆ ಚೀನಾ ವಸ್ತುಗಳು ಲಗ್ಗೆಯಿಡುವ ಅಪಾಯವಿದೆ. ಇದರಿಂದ ಸ್ವದೇಶಿ ವಸ್ತುಗಳು ಮೌಲ್ಯ ಕಳೆದುಕೊಳ್ಳುತ್ತವೆ. ಮೇಕ್‌ ಇನ್‌ ಇಂಡಿಯಾ ಯೋಜನೆಗೂ ಪೆಟ್ಟು ಬೀಳುತ್ತದೆ.

ಅಮೆರಿಕ ಇಂತಹ ಒಪ್ಪಂದದಿಂದ ಕೈಸುಟ್ಟುಕೊಂಡಿತ್ತು!

2015ರಲ್ಲಿ ಅಮೆರಿಕ, ಕೆನಡಾ, ಚಿಲಿ, ಪೆರು, ಮೆಕ್ಸಿಕೊ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಬ್ರುನೈ, ಸಿಂಗಾಪುರ, ಮಲೇಷ್ಯಾ, ವಿಯೆಟ್ನಾಂ ಸೇರಿದಂತೆ ಒಟ್ಟು 12 ರಾಷ್ಟ್ರಗಳು ಟಿಟಿಪಿ (ಟ್ರಾನ್ಸ್‌ನ್ಯಾಷನಲ್‌ ಪಾಟ್ರ್ನರ್‌ಶಿಪ್‌) ಎಂಬ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದವು. ಅದರಿಂದ ಅಮೆರಿಕಕ್ಕೆ ನಷ್ಟವಾಗಿ, 2017ರಲ್ಲಿ ಈ ಒಪ್ಪಂದದಿಂದ ಹೊರಬರುವುದಾಗಿ ಘೋಷಿಸಿದೆ.

ಭಾರತದ ಷರತ್ತುಗಳೇನು?

*ಬೇಸ್‌ ವರ್ಷ ಬದಲಿಸಬೇಕು

ಆರ್‌ಸಿಇಪಿ ಮಾತುಕತೆ ಪ್ರಾರಂಭವಾಗಿದ್ದು 2013ರಲ್ಲಿ. ಹಾಗಾಗಿ ಸರಕುಗಳ ದರಗಳಿಗೆ ಬೇಸ್‌ ವರ್ಷವಾಗಿ 2013ರನ್ನು ಅಂಗೀಕರಿಸಲಾಗಿದೆ. ಆದರೆ ಆಗ ಭಾರತದ ಸರಕುಗಳ ಬೆಲೆ ತೀರಾ ಕಡಿಮೆ ಇತ್ತು. ಆ ವರ್ಷದ ದರದಲ್ಲಿ ಭಾರತ ಸರಕುಗಳನ್ನು ಮಾರಾಟ ಮಾಡಿದಲ್ಲಿ ಭಾರತಕ್ಕೆ ಅಪಾರ ನಷ್ಟವಾಗುತ್ತದೆ. 2014ರ ನಂತರ ಕಸ್ಟಮ್ಸ್‌ ಸುಂಕವನ್ನು ಭಾರತ ಏರಿಸಿದೆ. ಹೀಗಾಗಿ, 2019ನ್ನು ಬೇಸ್‌ ವರ್ಷವಾಗಿ ಪರಿಗಣಿಸಬೇಕು ಎಂದು ಭಾರತ ಕೋರಿದೆ. 2014ರಿಂದೀಚೆಗೆ ಭಾರತದ ಜವಳಿ, ವಾಹನ ಬಿಡಿಭಾಗಗಳು, ಎಲೆಕ್ಟ್ರಾನಿಕ್‌ ಸರಕುಗಳ ದರಗಳು ಸುಮಾರು ಶೇ.13ರಿಂದ ಶೇ.17ರಷ್ಟುಏರಿವೆ.

*ಸ್ವ- ನಿಯಂತ್ರಣ ವ್ಯವಸ್ಥೆ

ಎಲ್ಲ ದೇಶಗಳಲ್ಲಿ ಒಂದು ಬಗೆಯ ಸ್ವ ನಿಯಂತ್ರಣ ವ್ಯವಸ್ಥೆ ಅಥವಾ ಯಾವ ಸರಕು ತನಗೆ ಬೇಡವೆಂದು ನಿರ್ಧರಿಸುವ ವ್ಯವಸ್ಥೆ ಇರಬೇಕು ಎಂಬುದು ಭಾರತದ ಬೇಡಿಕೆ.

*ದರ ವ್ಯತ್ಯಾಸಕ್ಕೆ ಅವಕಾಶ

ಒಂದು ಬಾರಿ ಒಂದು ದೇಶ ಇನ್ನೊಂದು ದೇಶದೊಂದಿಗೆ ಯಾವುದೇ ಸರಕಿನ ಆಮದು ಅಥವಾ ರಫ್ತಿನ ಕುರಿತು ಒಪ್ಪಂದ ಮಾಡಿಕೊಂಡ ಮೇಲೆ ಅದರ ದರಗಳಲ್ಲಿ ವ್ಯತ್ಯಾಸಗಳನ್ನು ಮಾಡಿಕೊಳ್ಳುವಂತಿಲ್ಲ ಎಂಬ ನಿಯಮ ಈ ಒಪ್ಪಂದದಲ್ಲಿದೆ. ಇದರಿಂದ ವಿನಾಯಿತಿ ನೀಡಬೇಕು ಎಂದು ಭಾರತ ಕೇಳಿದೆ.

* ಡೇಟಾ ಮಾರುವಂತಿಲ್ಲ

ಆಯಾ ದೇಶದ ಗ್ರಾಹಕರ ಡೇಟಾ ಆಯಾ ದೇಶಗಳಲ್ಲೇ ಉಳಿಯಬೇಕು. ರಾಷ್ಟ್ರೀಯ ಹಿತಾಸಕ್ತಿ, ಭದ್ರತಾ ವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂದರ್ಭಗಳಲ್ಲಿ ಮಾತ್ರ ಇದನ್ನು ಹಂಚಿಕೊಳ್ಳಬಹುದು ಎಂಬುದು ಭಾರತದ ವಾದ. ಆದರೆ 16ರಲ್ಲಿ 14 ದೇಶಗಳು ಇದನ್ನು ವಿರೋಧಿಸುತ್ತಿವೆ.

ಕೇಂದ್ರ ಸರ್ಕಾರ ಸಹಿ ಹಾಕುತ್ತಾ?

ಆರ್‌ಸಿಇಪಿಗೆ ಭಾರತ ಸರ್ಕಾರ ಇನ್ನೂ ಸಹಿ ಹಾಕಿಲ್ಲ. ಆದರೆ ತೆರೆಮರೆಯಲ್ಲಿ ಇದಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ನವೆಂಬರ್‌ ಮೊದಲ ವಾರದಲ್ಲಿ ಸಂಪುಟದ ಹಿರಿಯ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಆರ್‌ಸಿಇಪಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇಡೀ ವಿಶ್ವವೇ ಜಾಗತೀಕರಣದ ಬೆನ್ನುಹತ್ತಿ ಮುನ್ನುಗ್ಗುತ್ತಿರುವಾಗ ಭಾರತವೊಂದೇ ಏಕಾಂಗಿಯಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಸರ್ಕಾರದ ನಿಲುವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.

click me!