
ಬೆಂಗಳೂರು(ಅ.15): ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಯೊಂದಿಗೆ ಒಂದು ಹೆಜ್ಜೆ ಮುಂದೆ ಹೋಗಿ ಮಾರುಕಟ್ಟೆಗೆ ನಂದಿನಿ ಬ್ಯಾಂಡ್‌ನಡಿ 'ದೋಸೆ ಹಿಟ್ಟು' ಪರಿಚಯಿಸಲು ಮುಂದಾಗಿದೆ.
ಕೆಎಂಎಫ್, ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದೆ. 'ರೆಡಿ ಟು ಕುಕ್' ಪರಿಕಲ್ಪನೆಯಡಿ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ರಾಜ್ಯದ ದೇಗುಲಗಳ ಪ್ರಸಾದಕ್ಕೆ ನಂದಿನಿ ತುಪ್ಪ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ
ಕಡಿಮೆ ಅವಧಿಯಲ್ಲಿ ಸುಲಭವಾಗಿ ದೋಸೆ ಮಾಡಲು ಪೂರಕವಾಗಿ ಕೆಎಂಎಫ್ ದೋಸೆ ಹಿಟ್ಟು ಉತ್ಪಾದಿಸಲಿದೆ. ಪ್ರಾಯೋಗಿಕವಾಗಿ ಒಂದು ಮತ್ತು ಎರಡು ಕೆ.ಜಿ. ಪ್ರಮಾಣದ ದೋಸೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ನಂದಿನಿ ಬ್ಯಾಂಡ್ ದೋಸೆ ಹಿಟ್ಟು ಸಿದ್ದಪಡಿಸಲು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಕೆಎಂಎಫ್ ಹೊಂದಿದೆ.
ಪ್ರಸ್ತುತ ನಂದಿನಿ ಬ್ಯಾಂಡ್‌ನಡಿ ಹಾಲು, ಮೊಸರು, ಮಜ್ಜಿಗೆ, ಐಸ್ಕ್ರೀಂ, ಸಿಹಿ ಉತ್ಪನ್ನಗಳು, ತುಪ್ಪ, ಬೆಣ್ಣೆ, ಹಾಲಿನ ಪುಡಿ ಹೀಗೆ ಸುಮಾರು 156ಕ್ಕೂ ಹೆಚ್ಚು ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸಲಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.