ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬಂಪರ್ : ಸಿಎಂ ಬೊಮ್ಮಾಯಿ

By Kannadaprabha NewsFirst Published Oct 9, 2021, 8:25 AM IST
Highlights
  • ರಾಜ್ಯ ಸರ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ರುಪಾಯಿ ಪರಿಹಾರ
  • ಪರಿಹಾರದ ಅನುದಾನ ಸಾಲದ ರೂಪದಲ್ಲಿ ದೊರೆಯಲಿದೆ

 ನವದೆಹಲಿ (ಅ.09):  ರಾಜ್ಯ ಸರ್ಕಾರಕ್ಕೆ (Karnataka Govt) ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ರುಪಾಯಿ ಪರಿಹಾರದ ಅನುದಾನ ಸಾಲದ ರೂಪದಲ್ಲಿ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Seetharaman) ಅವರ ಭೇಟಿಯ ಬಳಿಕ ಈ ವಿಷಯ ತಿಳಿಸಿದರು. ಕೋವಿಡ್‌ ವರ್ಷದ ಅನುದಾನ ಬಿಟ್ಟರೇ ಹಳೆ ವರ್ಷಗಳ ಅಷ್ಟೂಅನುದಾನ ಕರ್ನಾಟಕಕ್ಕೆ (Karnataka) ಬಂದಿದೆ. ಉಳಿದಂತೆ ಈ ಸಾಲಿಗೆ 18 ಸಾವಿರ ಕೋಟಿ ರುಪಾಯಿ ಸಾಲದ ಮೂಲಕ ಕೇಂದ್ರ ನೀಡಲಿದೆ ಎಂದರು.

ರಾಜ್ಯಗಳಿಗೆ 40 ಸಾವಿರ ಕೋಟಿ ವಿತರಿಸಿದ ಕೇಂದ್ರ: ಕರ್ನಾಟಕಕ್ಕೆ 4,555.84 ಕೋಟಿ ರೂ!

ಎರಡು ತಿಂಗಳಲ್ಲಿ ವರದಿ: ತೆರಿಗೆ(GST) ಸುಧಾರಣೆ ಕುರಿತಂತೆ ಗ್ರೂಪ್‌ ಆಫ್‌ ಮಿನಿಸ್ಟರ್‌ ಸಮಿತಿ ಎರಡು ತಿಂಗಳ ವರದಿ ನೀಡಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಗ್ರೂಪ್‌ ಆಫ್‌ ಮಿನಿಸ್ಟರ್‌ ಸಮಿತಿಗೆ ಮುಖ್ಯಸ್ಥ ರಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಹಣಕಾಸು ಸಚಿವರನ್ನು ಭೇಟಿ ಮಾಡಿ, ಚರ್ಚಿಸಲಾಯಿತು. ಜಿಎಸ್‌ಟಿಯ ಒಟ್ಟು ಆದಾಯ ಹೆಚ್ಚಳ ಮಾಡುವುದು, ತೆರಿಗೆಯ ವಿಧಾನಗಳ ಪುನರ್‌ ರಚನೆ ಸೇರಿದಂತೆ ಹಲವು ವಿಚಾರಗಳು ಸಮಿತಿಯ ಮುಂದೆ ಬರಲಿವೆ. ಈ ಕುರಿತು ಶೀಘ್ರದಲ್ಲೇ ಸಮಿತಿಯ ಸಭೆ ಕರೆಯಲಾಗುತ್ತದೆ ಎಂದರು.

ರಾಜ್ಯದ ನಬಾರ್ಡ್‌ (NABARD) ಯೋಜನೆಗಳಿಗೆ ಹೆಚ್ಚು ಅನುದಾನ ನೀಡುವ ಬಗ್ಗೆಯೂ ಸಚಿವರ ಜೊತೆ ಚರ್ಚೆ ನಡೆಯಿತು. ನವೆಂಬರ್‌ ಮೊದಲ ವಾರದಲ್ಲಿ ಹಣಕಾಸು ಸಚಿವರು ಕರ್ನಾಟಕಕ್ಕೆ ಬರಲಿದ್ದು, ಆಗ ನಬಾರ್ಡ್‌ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಗುತ್ತದೆ ಎಂದರು.

ಕರ್ನಾಟಕಕ್ಕೆ ಜಿಎಸ್ ಅನುದಾನ

 

 ಕೇಂದ್ರ ಸರ್ಕಾರವು(Union Govt) ರಾಜ್ಯಗಳಿಗೆ 40 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಜಿಎಸ್‌ಟಿ(GST) ಪರಿಹಾರದ ಕೊರತೆಯನ್ನು ನೀಗಿಸಲು ಈ ಮೊತ್ತವನ್ನು ಬ್ಯಾಕ್ ಟು ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ ನೀಡಲಾಗಿದೆ, ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ(Union Teritories) ಪರಿಹಾರ ನೀಡುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಮೊದಲು ಜುಲೈ 15, 2021 ರಂದು ರೂ .75,000 ಕೋಟಿ ಬಿಡುಗಡೆ ಮಾಡಲಾಗಿತ್ತು. ಈ ಬಿಡುಗಡೆಯೊಂದಿಗೆ, ಜಿಎಸ್‌ಟಿ ಪರಿಹಾರದ ವಿರುದ್ಧ ಬ್ಯಾಕ್ ಟು ಬ್ಯಾಕ್ ಸಾಲಗಳ ರೂಪದಲ್ಲಿ ಬಿಡುಗಡೆಯಾದ ಒಟ್ಟು ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ 1,15,000 ಕೋಟಿ ರೂಪಾಯಿಗಳನ್ನು ತಲುಪಿದೆ. ಈ ಬಿಡುಗಡೆಯು ಸಾಮಾನ್ಯ ಜಿಎಸ್‌ಟಿ ಪರಿಹಾರದ ಜೊತೆಗೆ ಪ್ರತಿ 2 ತಿಂಗಳಿಗೊಮ್ಮೆ ನಿಜವಾದ ಸೆಸ್ ಸಂಗ್ರಹದಿಂದ ಬಿಡುಗಡೆಯಾಗುತ್ತದೆ.

43 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ 

28.05.2021 ರಂದು ನಡೆದ 43 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ, ಕೇಂದ್ರ ಸರ್ಕಾರವು 2021-22 ರಲ್ಲಿ 1.59 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ಇದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಂದೊಂದಾಗಿ ನೀಡಲಾಗುತ್ತದೆ. ಈ ಮೊತ್ತವು 2020-21ರ ಆರ್ಥಿಕ ವರ್ಷದಲ್ಲಿ ಇದೇ ರೀತಿಯ ಸೌಲಭ್ಯಕ್ಕಾಗಿ ಅಳವಡಿಸಲಾಗಿರುವ ತತ್ವಗಳಿಗೆ ಅನುಸಾರವಾಗಿದೆ, ಅಲ್ಲಿ 1.10 ಲಕ್ಷ ಕೋಟಿ ಮೊತ್ತವನ್ನು ಇದೇ ರೀತಿಯ ವ್ಯವಸ್ಥೆ ಅಡಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

click me!