ಐಟಿಆರ್ ಸಲ್ಲಿಕೆಯಲ್ಲಿ ಹಿಂದೆ ಬಿದ್ದ ಕರ್ನಾಟಕ! ಮೂರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದ ಕರ್ನಾಟಕ! ಕರ್ನಾಟಕದಲ್ಲಿ ಒಟ್ಟು 20.64 ಲಕ್ಷ ಐಟಿಆರ್ ಸಲ್ಲಿಕೆ! ಆದಾಯ ತೆರಿಗೆ ಸಲ್ಲಿಸಲು ರಾಜ್ಯಗಳ ನಡುವೆ ಪೈಪೋಟಿ
ನವದೆಹಲಿ(ಆ.14): ಆದಾಯ ತೆರಿಗೆ ಸಲ್ಲಿಸುವ ಗಡುವು ಇನ್ನೇನು ಮುಗಿತ್ತಾ ಬಂದಿದೆ. ಐಟಿಆರ್ ಸಲ್ಲಿಕೆಗೆ ಕೇವಲ 17 ದಿನ ಮಾತ್ರ ಬಾಕಿ ಇದೆ. ಈ ಮಧ್ಯೆ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಕರ್ನಾಟಕ 7ನೇ ಸ್ಥಾನಕ್ಕೆ ಕುಸಿದಿದೆ.
ಹೌದು, ಕಳೆದ ವರ್ಷದ ಒಟ್ಟು ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೂರನೇ ಅತಿ ದೊಡ್ಡ ಪಾಲನ್ನು ನೀಡಿತ್ತು. ಆದರೆ ಈ ವರ್ಷ ಅದೇ ಮಟ್ಟದಲ್ಲಿ ಕೊಡುಗೆ ಸಲ್ಲಿಸುವ ಸಾಧ್ಯತೆ ಕ್ಷೀಣಿಸಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಕುಸಿತ ಕಂಡಿದೆ.
undefined
ರಾಜ್ಯದಲ್ಲಿ 2018ರ ಜುಲೈ ತನಕ ಒಟ್ಟು 20.64 ಲಕ್ಷ ಐಟಿಆರ್ ಸಲ್ಲಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16 ಲಕ್ಷ ಸಲ್ಲಿಕೆಯಾಗಿತ್ತು. ಹೀಗಿದ್ದರೂ ಇತರ ಪ್ರಮುಖ ರಾಜ್ಯಗಳ ಅಂಕಿ ಅಂಶಗಳನ್ನು ಹೋಲಿಸಿದರೆ, ಈ ವರ್ಷ ಕರ್ನಾಟಕದಲ್ಲಿ ಆದಾಯ ವಿವರ ಸಲ್ಲಿಕೆಯಲ್ಲಿ ಮಂದಗತಿ ಕಂಡುಬಂದಿದೆ.
ಮಹಾರಾಷ್ಟ್ರ 53 ಲಕ್ಷ ಐಟಿಆರ್ ಸಲ್ಲಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಗುಜರಾತ್ 34 ಲಕ್ಷ ಐಟಿಆರ್ ಸಲ್ಲಿಕೆಯೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಉತ್ತರಪ್ರದೇಶ 29 ಲಕ್ಷ ಐಟಿಆರ್ ಸಲ್ಲಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ತಮಿಳುನಾಡು 24 ಲಕ್ಷ ನವದೆಹಲಿ 18 ಲಕ್ಷ ಮತ್ತು ರಾಜಸ್ಥಾನದಲ್ಲಿ 21 ಲಕ್ಷ ಐಟಿಆರ್ ಸಲ್ಲಿಕೆಯಾಗಿದೆ. ನಂತರದ ಸ್ಥಾನ ಕರ್ನಾಟಕದ ಪಾಲಾಗಿದೆ.
ಕಳೆದ 2017-18ರ ಸಾಲಿನಲ್ಲಿ ಭಾರತದ ಒಟ್ಟು ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿತ್ತು. ಮಹಾರಾಷ್ಟ್ರ ಮತ್ತು ನವದೆಹಲಿಯ ನಂತರ ಅತಿ ಹೆಚ್ಚು ಆದಾಯ ತೆರಿಗೆಯನ್ನು ಸಂಗ್ರಹಿಸಿತ್ತು. ಕಳೆದ ಬಾರಿ ಕರ್ನಾಟಕ ಒಟ್ಟು 1.23 ಲಕ್ಷ ಕೋಟಿ ರೂ. ಆದಾಯ ತೆರಿಗೆ ಪಾವತಿಸಿತ್ತು. 2017ರಲ್ಲಿ ರಾಜ್ಯದಲ್ಲಿ ಒಟ್ಟು 22 ಲಕ್ಷ ತೆರಿಗೆದಾರರು ರಿಟರ್ನ್ಸ್ ಸಲ್ಲಿಸಿದ್ದರು.