ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು

By Kannadaprabha News  |  First Published Aug 7, 2023, 1:30 PM IST

ಬದುಕುವುದು ಅನಿವಾರ್ಯವಾದಾಗ ಹೊಸ ಹೊಸ ಅನ್ವೇಷಣೆಗಳು ಹುಟ್ಟಿಕೊಳ್ಳುತ್ತವೆ. ಯುವ ಕೃಷಿಕರು ಆನ್‌ಲೈನ್ ಮಾರ್ಕೆಟಿಂಗ್ ಆರಂಭಿಸಿ, ಸಾಧಿಸಿ ತೋರಿಸುತ್ತಾರೆ. 


- ಎಂ. ಅಪ್ರೋಜ್ ಖಾನ್

ರಾಮನಗರ:
ಮಹಾಮಾರಿ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ಬಳಲಿ ನಷ್ಟಕ್ಕೀಡಾದ ರೈತರೇ ಹೆಚ್ಚು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ಯುವ ರೈತರೊಬ್ಬರು ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ತಾನು ಬೆಳೆದ ಉತ್ಪನ್ನಗಳನ್ನೇ ಮಾರುವುದನ್ನು ಮುಂದುವರಿಸಿ ಮಾದರಿಯಾಗಿ ನಿಂತಿದ್ದಾರೆ.

ಹೆಸರು ನಂಜುಂಡಸ್ವಾಮಿ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿ ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ಬದುಕು ಕಟ್ಟಿಕೊಂಡ ಯುವ ಕೃಷಿಕ.
ನಂಜುಂಡಸ್ವಾಮಿ 2015ರಲ್ಲಿ ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ  6 ತಿಂಗಳ ಕಾಲ ಸುಸ್ಥಿರ ಕೃಷಿ ಅಧ್ಯಯನ ವಿಷಯದಲ್ಲಿ ತರಬೇತಿ ಪಡೆದು, ಬೆಂಗಳೂರಿನಲ್ಲಿಯೇ ಅರೆ ಕೃಷಿಕನಾಗಿ ಹಾಗೂ ಅರೆಕಾಲಿಕ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದವರು. ನಂತರ ಸಾವಯವ ಕೃಷಿ ಮಾಡುವ ಕನಸಿನೊಂದಿಗೆ ಅರಳುಕುಪ್ಪೆಯಲ್ಲಿರುವ ಸ್ವಂತ 3 ಎಕರೆಯಲ್ಲಿ ಸಿರಿಧಾನ್ಯ (Millet) ಗಳನ್ನು ಬೆಳೆದರು.

Raichuru: ಆಹಾರ ಉತ್ಪನ್ನಗಳಲ್ಲಿ 'ಸಮೃದ್ಧಿ' ಗೆಲವಿನ ಹಾದಿ ಹಿಡಿದ ಸ್ಟಾರ್ಟಪ್

Tap to resize

Latest Videos

ಆದರೆ, ಕೋವಿಡ್ (Covid) ಕಾಲದಲ್ಲಿ ಹೊಲ, ಗದ್ದೆ ಹಾಗೂ ತೋಟದ ಬೆಳೆಯನ್ನು ಖರೀದಿಸುವವರು ಇಲ್ಲದೆ, ಮಾರುಕಟ್ಟೆಗೂ ಸಾಗಿಸಲಾಗದೇ ಎಲ್ಲ ರೈತರಂತೆ ನಂಜುಂಡಸ್ವಾಮಿ ಕೂಡ ಕೈಚೆಲ್ಲಿ ಕುಳಿತು ಸಂಕಷ್ಟಕ್ಕೆ ಸಿಲುಕಿದರು. ಹೇಗಾದರೂ ಮಾಡಿ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸಲೇ ಬೇಕೆಂಬ ನಿರ್ಧಾರಕ್ಕೆ ಬಂದ ನಂಜುಂಡಸ್ವಾಮಿರವರು -ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್ ಮೊರೆ ಹೋದರು. 

ಪೈಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ನಲ್ಲಿಯೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತರಕಾರಿ, ಹಣ್ಣು ಹಾಗೂ ಸೊಪ್ಪುಗಳನ್ನು ನೇರವಾಗಿ ಮಾರುವ  ಆನ್‌ಲೈನ್ ಮಾರ್ಕೆಟಿಂಗ್ ದಾರಿ ಕಂಡುಕೊಂಡರು. ಸಿರಿಧಾನ್ಯಗಳಾದ ನವಣೆ, ಆರ್ಕ, ಸಜ್ಜೆ, ರಾಗಿ, ಮಾವು, ಸಾಮೆ, ಜರ್ಮನಿಯಲ್ಲಿ ಬೆಳೆಯುವ ಚಾವ ಎಂಬ ಮೇವು, ಬರಗು... ಹೀಗೆ ಅನೇಕ ಬೆಳೆಗಳನ್ನು ಬೆಳೆದು ಯಾವುದೇ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೆ ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ನೇರವಾಗಿ ತಾವೇ ಮಾರಿದರು. ನಂಜುಂಡಸ್ವಾಮಿಯವರು ಬೆಳೆದ ಬೆಳೆಗಳಿಗೆ ಬೆಂಗಳೂರಿನಲ್ಲಿಯೂ ಬೇಡಿಕೆ ಹೆಚ್ಚಾಯಿತು.

ಈ ಹಿನ್ನೆಲೆಯಲ್ಲಿ  ನಂಜುಂಡಸ್ವಾಮಿ ಮತ್ತು ಇತರೆ ಆರೇಳು ಯುವ ಕೃಷಿಕರು ಸೇರಿ ಮಣ್ಮಯಿ ಬಳಗ ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ. ಆ ಬಳಗ ಆನ್‌ಲೈನ್ ಮಾರ್ಕೆಟಿಂಗ್ (Online Marketing) ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ.

Raichuru: ಆಹಾರ ಉತ್ಪನ್ನಗಳಲ್ಲಿ 'ಸಮೃದ್ಧಿ' ಗೆಲವಿನ ಹಾದಿ ಹಿಡಿದ ಸ್ಟಾರ್ಟಪ್

ದೂರದ ಊರಿನ ಗ್ರಾಹಕರಿಗೆ ನೇರವಾಗಿ ಉತ್ಪನ್ನವನ್ನು (Products) ತಲುಪಿಸುವ ಅವರು, ಸ್ಥಳೀಯರಿಗೆ ಹೋಂ ಡೆಲಿವರಿ (Home Delivery) ಕೊಡುತ್ತಾರೆ. ಕ್ಯಾಶ್ ಅಂಡ್ ಕ್ಯಾರಿ (Cash And Carry) ಆಧಾರದಲ್ಲಿ ವ್ಯವಹಾರ ನಡೆಯುತ್ತದೆ. ಇಷ್ಟೇ ಅಲ್ಲದೆ, ಯುವಕರಿಗೆ ಸುಸ್ಥಿರ ಕೃಷಿ ಅಧ್ಯಯನ ಕುರಿತು ತರಬೇತಿ ಕೊಡುವುದು, ಪ್ರತಿವರ್ಷ ಒಬ್ಬೊಬ್ಬರ ತೋಟದಲ್ಲಿ ಮ್ಯಾಂಗೋ ಪಿಕ್ಕಿಂಗ್ -ಫೆಸ್ಟಿವಲ್ ಅನ್ನು ಯಶಸ್ವಿಯಾಗಿ ನಡೆಸುತ್ತಾ ಬರುತ್ತಿದ್ದಾರೆ.

ಬೆಂಗಳೂರಿನ ಅನೇಕರು ನೇರವಾಗಿ ತೋಟದಲ್ಲಿ ಮಾವಿನ ಹಣ್ಣುಗಳನ್ನು ಕಿತ್ತುಕೊಂಡು ಹಣ ನೀಡುವಂತಹ ಹೊಸ ಪ್ರಯತ್ನಗಳನ್ನು ನಡೆಸಿದ್ದಾರೆ. ಇಷ್ಟೇ ಅಲ್ಲದೆ, ರಾಮ್‌ಗೋಲ್ಡ್  ಬ್ರಾಂಡ್‌ನಲ್ಲಿ ಮಾವು ಮಾರಾಟವೂ  ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಡೆಯುತ್ತಿದೆ.
  
ಕೆಲವು ವ್ಯಾಪಾರಿಗಳು ಮಾವಿನ ಕಾಯಿಗಳಿಗೆ ರಾಸಾಯನಿಕ ಸಿಂಪಡಿಸಿ, ಕೃತಕವಾಗಿ ಹಣ್ಣು ಮಾಡುತ್ತಾರೆ. ಇಂತಹ ಹಣ್ಣುಗಳು ಆರೋಗ್ಯಕ್ಕೆ ಹಾನಿಕಾರಕ ಮತ್ತು ಸಿಹಿಯೂ ಕಡಿಮೆ. ಹಾಗಾಗಿ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳು ಸುಗಂಧಭರಿತ ಮತ್ತು ಸ್ವಾದಭರಿತವಾಗಿದ್ದು, ಮತ್ತಷ್ಟು ತಿನ್ನಬೇಕು ಎನಿಸುತ್ತದೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಎಂಬ ಕಾರಣಕ್ಕೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದೆ. ಆನ್‌ಲೈನ್ ಮಾರ್ಕೆಟಿಂಗ್‌ನಲ್ಲಿ 3 ಕೆಜಿ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಾವಿನ ಹಣ್ಣು ಇರುವ ಬಾಕ್ಸ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದೆ.  ಜೊತೆಗೆ ಬಳಗದವರೇ ಬೆಂಗಳೂರು ಕೆಲವು ಅಪಾರ್ಟ್ಮೆಂಟ್‌ಗಳಿಗೆ ತೆರಳಿ ನೇರವಾಗಿ ಮಾರುತ್ತಿದ್ದಾರೆ. 

ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?

ಕೇಂದ್ರ ಸರ್ಕಾರದ ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ (SFC), ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳಿಂದ ಯಾವುದೇ ಆರ್ಥಿಕ ನೆರವು ಪಡೆಯದ ಬಳಗದವರು ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಕೃಷಿ ಉತ್ಪನ್ನಗಳನ್ನು  ರೈತರಿಂದ ಗ್ರಾಹಕರಿಗೆ ನೇರವಾಗಿ ಮಾರುತ್ತಿದ್ದಾರೆ. 

ಪ್ರತಿ ರೈತ ತನ್ನ ಬೆಳೆಗಳಿಗೆ ತನ್ನದೇ ಆದ ಗ್ರಾಹಕರನ್ನು ಹಾಗೂ ಗ್ರಾಹಕರು ತನ್ನದೇ ಆದ ರೈತರನ್ನು ಅಥವಾ ಸಮುದಾಯ ಗುಂಪನ್ನು ಅವಲಂಬಿಸಿಕೊಂಡರೆ ರೈತರಿಗೂ ಮತ್ತು ಗ್ರಾಹಕರಿಗೂ ಯಾವುದೇ ತೊಂದರೆ ಆಗುವುದಿಲ್ಲ.
- ನಂಜುಂಡಸ್ವಾಮಿ,ಸಾವಯವ ಕೃಷಿಕ, ಅರಳುಕುಪ್ಪೆ ಗ್ರಾಮ, ಚನ್ನಪಟ್ಟಣ ತಾಲೂಕು ,ರಾಮನಗರ ಜಿಲ್ಲೆ.
 

click me!