ಕರ್ನಾಟಕದ ರಾಗಿ, ಜೋಳ ಗ್ಲೋಬಲ್ ಬ್ರಾಂಡ್!| ವಿಶ್ವದರ್ಜೆಯಲ್ಲಿ ಪ್ಯಾಕ್ ಮಾಡಿ, ಮಾರುಕಟ್ಟೆ| ಕ್ಲಸ್ಟರ್ ರೂಪಿಸಿ ಬ್ರಾಂಡ್ ರೂಪ: ಕೇಂದ್ರ
ನವದೆಹಲಿ(ಮೇ.16): ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯ ಉತ್ಪನ್ನಗಳ ಬಳಕೆ ಮಂತ್ರ ಜಪಿಸಿದ ಬೆನ್ನಲ್ಲೇ, ಕರ್ನಾಟಕದ ರಾಗಿ ಹಾಗೂ ಜೋಳ ಸೇರಿ ಕೆಲ ದೇಶೀಯ ಸಾವಯವ ಬೆಳೆ ಅಥವಾ ಉತ್ಪನ್ನಗಳನ್ನು ಗ್ಲೋಬಲ್ ಬ್ರಾಂಡ್ ಆಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಪೌಷ್ಟಿಕಾಂಶಯುಕ್ತ, ಸಾವಯವ ಬೆಳೆ ಹಾಗೂ ಇನ್ನಿತರೆ ಉತ್ಪನ್ನಗಳ ಕ್ಲಸ್ಟರ್ ರೂಪಿಸಿ, ಕೆಲವು ವಿಶಿಷ್ಟವಸ್ತುಗಳಿಗೆ ವಿಶ್ವದರ್ಜೆಯ ಬ್ರಾಂಡ್ ರೂಪ ಕೊಡಲು ಕೇಂದ್ರ ಸರ್ಕಾರ 10,000 ಕೋಟಿ ರು. ಬಂಡವಾಳ ಹೂಡುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದರು.
‘ಕ್ಲಸ್ಟರ್ ಆಧಾರಿತ ಯೋಜನೆ ಮೂಲಕ ಸ್ಥಳೀಯ ಮೌಲ್ಯವರ್ಧಿತ ಉತ್ಪನ್ನಗಳನ್ನು ವಿಶ್ವದರ್ಜೆಯಲ್ಲಿ ಪ್ಯಾಕ್ ಮಾಡಿ, ಜಾಗತಿಕ ಮಾರುಕಟ್ಟೆಗೆ ತಲುಪುವಂತೆ ಮಾಡಲಾಗುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆಯಾ ಪ್ರಾದೇಶಿಕ ಹಿನ್ನೆಲೆ ಆಧರಿಸಿ ಸುಲಭವಾಗಿ ಬೆಳೆಯುವ ಉದಾಹರಣೆಗೆ, ಕರ್ನಾಟಕದ ರಾಗಿ ಮತ್ತು ಜೋಳ, ಬಿಹಾರದ ಮುಖಾನಾ, ಕಾಶ್ಮೀರದ ಕೇಸರಿ, ತೆಲಂಗಾಣದ ಅರಿಶಿಣ, ಆಂಧ್ರದ ಮೆಣಸಿನಕಾಯಿ ಇತ್ಯಾದಿ ಉತ್ಪನ್ನಗಳಿಗೆ ಕ್ಲಸ್ಟರ್ ರೂಪಿಸಿ ಬ್ರಾಂಡ್ ರೂಪ ಕೊಡಲಾಗುತ್ತದೆ. ಇವು ಕೇವಲ ಉದಾಹರಣೆಗಳಷ್ಟೇ ಭಾರತದಲ್ಲಿ ಜಿಐ (ಭೌಗೋಳಿಕ ಸೂಚ್ಯಂಕ) ಮಾನ್ಯತೆ ಪಡೆದ 361 ಪದಾರ್ಥಗಳಿವೆ ಎಂದರು.