* ಬೇರೆ ರಾಜ್ಯಗಳಿಗಿಂತ ಕರ್ನಾಟಕ ವಿಭಿನ್ನ
* ರಾಜ್ಯದ ದ್ವಿತೀಯ, ತೃತೀಯ ಸ್ತರದ ನಗರಗಳ ಅಭಿವೃದ್ಧಿ
* ದೇಶದ ಅರ್ಧದಷ್ಟು ವಿದೇಶಿ ಕಂಪನಿಗಳು ಕರ್ನಾಟಕದಲ್ಲಿವೆ
ದಾವೋಸ್(ಮೇ.26): ‘ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಹೂಡಿಕೆದಾರರನ್ನು ಸೆಳೆಯಲು ಭಾರತದ ಎಲ್ಲಾ ರಾಜ್ಯಗಳು ಸಾಲುಗಟ್ಟಿನಿಂತಿವೆ. ಆದರೆ ಕರ್ನಾಟಕ ಇತರ ರಾಜ್ಯಗಳಿಗಿಂತ ವಿಭಿನ್ನವಾಗಿದೆ. ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕರ್ನಾಟಕ ವ್ಯಾಪಾರ ಮಾಡಲು ಸುರಕ್ಷಿತ ಸ್ಥಳ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ದಾವೋಸ್ ಶೃಂಗದ ನಿಮಿತ್ತ ಬುಧವಾರ ಸಂದರ್ಶನ ನೀಡಿದ ಅವರು, ‘ಭಾರತದಲ್ಲಿರುವ ವಿದೇಶಿ ಕಂಪನಿಗಳಲ್ಲಿ ಅರ್ಧದಷ್ಟುಕಂಪನಿಗಳು ಕರ್ನಾಟಕದಲ್ಲೇ ಇವೆ. ಇದಕ್ಕೆ ಕಾರಣವಾಗಿರುವುದು ಕರ್ನಾಟಕ ಒದಗಿಸಿರುವ ಸದೃಢ ಮೂಲಸೌಕರ್ಯ, ಪ್ರತಿಭೆ ಮತ್ತು ವ್ಯಾಪಾರ ಮಾಡಲು ಇರುವ ಸುಲಭವಾದ ಪರಿಸ್ಥಿತಿ’ ಎಂದರು.
Davos 2022: ಕರ್ನಾಟಕದಲ್ಲಿ 50,000 ಕೋಟಿ ಹೂಡಿಕೆಗೆ ಸಿಎಂ ಒಪ್ಪಂದ
‘ರಾಜ್ಯದಲ್ಲ ಬೆಂಗಳೂರಿನಲ್ಲಿ ದಟ್ಟಣೆ ಹೆಚ್ಚಾಗಿದೆ. ಹಾಗಾಗಿ ಇದನ್ನು ನಿಯಂತ್ರಿಸಲು ರಾಜ್ಯದ ದ್ವಿತೀಯ ಮತ್ತು ತೃತೀಯ ಶ್ರೇಣಿ ನಗರಗಳನ್ನು ಉದ್ದಿಮೆಗಳಿಗೆ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಈ ವರ್ಷ ಇನ್ನೂ ನಾಲ್ಕು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.
ಕರ್ನಾಟಕ ವಿಭಿನ್ನ ರಾಜ್ಯ:
‘ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿದೆ. ಅಂತಾರಾಷ್ಟ್ರೀಯ ಹೂಡಿಕೆ ಸಮುದಾಯ ಭಾರತವನ್ನು ಉದಯೋನ್ಮುಖ ಆರ್ಥಿಕ ದೈತ್ಯ ರಾಷ್ಟ್ರ ಎಂದು ಗುರುತಿಸಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕವನ್ನು ಗುರುತಿಸಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಚೀನಾದ ಆರ್ಥಿಕತೆ ಕುಸಿದಿದೆ. ಹಾಗಾಗಿ ಬಹಳಷ್ಟುದೇಶಗಳು ಭಾರತದತ್ತ ನೋಡುತ್ತಿವೆ. ಅದರಲ್ಲೂ ಅವುಗಳ ಗುರಿ ಬೆಂಗಳೂರಾಗಿದೆ. ಏಕೆಂದರೆ ಇಲ್ಲಿ ಉನ್ನತ ಗುಣಮಟ್ಟದ ತಂತ್ರಜ್ಞಾನ ಸೌಲಭ್ಯ, ಅತಿ ಹೆಚ್ಚು ಸಂಖ್ಯೆಯ ಆರ್ ಆ್ಯಂಡ್ ಡಿ ಕೇಂದ್ರಗಳನ್ನು ಹೊಂದಿದ್ದೇವೆ. ಏರೋಸ್ಪೇಸ್, ಭದ್ರತೆ, ಯಂತ್ರೋಪಕರಣ, ಮಾಹಿತಿ ತಂತ್ರಜ್ಞಾನ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ನಾವು ತಜ್ಞರನ್ನು ಹೊಂದಿದ್ದೇವೆ’ ಎಂದು ಹೇಳಿದರು.
Davos2022: ದಾವೋಸ್‌ನಲ್ಲಿ ಬೊಮ್ಮಾಯಿ, ಸದ್ಗುರು ಭೇಟಿ
ಎಫ್‌ಡಿಐನಲ್ಲೂ ಮೊದಲ ಸ್ಥಾನ:
‘ಕರ್ನಾಟಕ ಯುರೋಪ್ ಮತ್ತು ಅಮೆರಿಕದಲ್ಲಿರುವ ಹಲವು ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಶೇ.50ರಷ್ಟುವಿದೇಶಿ ಕಂಪನಿಗಳು ಕರ್ನಾಟಕದಲ್ಲಿವೆ. ಕಳೆದ ವರ್ಷ ವಿದೇಶಿ ನೇರ ಬಂಡವಾಳ ಒಳಹರಿವಿನಲ್ಲಿ ಕರ್ನಾಟಕ ಮೊದಲ ಸ್ಥಾನ ಹೊಂದಿದೆ. ದೇಶಕ್ಕೆ ಬಂದ ಎಫ್‌ಡಿಐನಲ್ಲಿ ಕರ್ನಾಟಕದ ಪಾಲು ಶೇ.42ರಷ್ಟಿದೆ. ಜಾಗತಿಕ ತಾಪಮಾನ ಕುರಿತಾಗಿಯೂ ನಾವು ಅರಿವನ್ನು ಹೊಂದಿದ್ದೇವೆ. ಹಾಗಾಗಿ ಕರ್ನಾಟಕದ ಶೇ.63ರಷ್ಟು ನವೀಕರಣ ಇಂಧನವನ್ನು ಉತ್ಪಾದಿಸುತ್ತಿದೆ’ ಎಂದು ಮುಖ್ಯಮಂತ್ರಿ ಹೇಳಿದರು.