
ಬೆಂಗಳೂರು: ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆ ವತಿಯಿಂದ 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (LEAP) ಅನ್ನು ಅನಾವರಣಗೊಳಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “LEAP ಕಾರ್ಯಕ್ರಮವು ಬೆಂಗಳೂರಿನ ಹೊರತಾಗಿ ರಾಜ್ಯಾದ್ಯಂತ ಹೊಸತನವನ್ನು ಉತ್ತೇಜಿಸುವುದು, ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ದೃಢವಾದ ನವೋದ್ಯಮ ಪರಿಸರವನ್ನು ನಿರ್ಮಿಸುವುದು ಇದರ ಮುಖ್ಯ ಗುರಿ ಎಂದು ತಿಳಿಸಿದರು.
ಸಚಿವರು ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಈಗಾಗಲೇ ವಿಶ್ವಮಟ್ಟದ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸ್ಟಾರ್ಟ್‌ಅಪ್‌ಬ್ಲಿಂಕ್ 2025ರಲ್ಲಿ ಬೆಂಗಳೂರು ವಿಶ್ವದಲ್ಲಿ 10ನೇ ಸ್ಥಾನ ಮತ್ತು ಸ್ಟಾರ್ಟ್‌ಅಪ್ ಜೀನೋಮ್ 2025ರಲ್ಲಿ 14ನೇ ಸ್ಥಾನ ಪಡೆದಿದೆ. ಈಗ ರಾಜ್ಯದ ಮುಂದಿನ ಹಂತದ ಬೆಳವಣಿಗೆ ಮೈಸೂರು, ಹುಬ್ಬಳ್ಳಿ, ಕಲಬುರಗಿ, ತುಮಕೂರು, ಧಾರವಾಡ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ನವೋದ್ಯಮವನ್ನು ಬೆಳೆಸುವುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು. ಜೊತೆಗೆ LEAP ಕಾರ್ಯಕ್ರಮವು ಈ ನಗರಗಳನ್ನು ಜಾಗತಿಕ ಮಟ್ಟದ ಹೊಸ ಹಬ್‌ಗಳಾಗಿ ರೂಪಾಂತರಗೊಳಿಸುವ ಮಹತ್ವದ ಹೆಜ್ಜೆ. ಇದರಿಂದ ರಾಜ್ಯದ ನಿಜವಾದ ಸಾಮರ್ಥ್ಯ ಹೊರಬರುತ್ತದೆ ಎಂದರು.
LEAP ಅನ್ನು 16 ಉಪ-ಕಾರ್ಯಕ್ರಮಗಳ ಮೂಲಕ ರೂಪಿಸಲಾಗಿದ್ದು, ಪ್ರತಿಯೊಂದು ಉಪಕ್ರಮವೂ ರಾಜ್ಯದ ನವೋದ್ಯಮ ಪರಿಸರವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ.
ಐಟಿ-ಬಿಟಿ ಕಾರ್ಯದರ್ಶಿ ಎಕ್ರೂಪ್ ಕೌರ್ ಅವರು LEAP ಮೂಲಕ ಶಾಲೆಗಳಲ್ಲಿ ಉದ್ಯಮಶೀಲತಾ ಮನೋಭಾವ ಬೆಳೆಸುವುದರಿಂದ ಹಿಡಿದು ಡೀಪ್-ಟೆಕ್ ಕಂಪನಿಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಸಹಾಯ ಮಾಡುವವರೆಗೆ ಎಲ್ಲ ಹಂತಗಳಿಗೂ ಬೆಂಬಲ ದೊರೆಯಲಿದೆ. ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಹಣಕಾಸಿನಲ್ಲಿ ಇದ್ದ ಕೊರತೆಗಳನ್ನು ಈ ಕಾರ್ಯಕ್ರಮ ಪೂರೈಸಲಿದೆ ಎಂದರು.
ಮುಂದುವರೆದು ಮಾತನಾಡಿ “ಹ್ಯಾಕಥಾನ್‌ಗಳು, ಬೂಟ್‌ಕ್ಯಾಂಪ್‌ಗಳು, ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮುಂತಾದ ಉಪಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸಲಾಗುತ್ತದೆ. LEAP ಯಶಸ್ಸು ಬೆಂಬಲಿತ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯಲ್ಲಷ್ಟೇ ಅಲ್ಲ, ಸಣ್ಣ ನಗರಗಳ ಉದ್ಯಮಿಗಳನ್ನು ಜಾಗತಿಕ ಸ್ಪರ್ಧೆಗೆ ಸಬಲೀಕರಣಗೊಳಿಸುವ ಸಾಮರ್ಥ್ಯದಲ್ಲಿಯೂ ಅಳೆಯಲಾಗುತ್ತದೆ ಎಂದು ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು LEAP ಕಾರ್ಯಕ್ರಮವು ಕೇವಲ ನವೋದ್ಯಮಗಳಲ್ಲಿ ಹೂಡಿಕೆ ಮಾತ್ರವಲ್ಲ, ಸಮಾನ ಮತ್ತು ಸಮತೋಲನದ ಆರ್ಥಿಕ ಭವಿಷ್ಯದ ಹೂಡಿಕೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಐದು ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ. ಕರ್ನಾಟಕವು ಬಹು ಶ್ರೇಷ್ಠತಾ ಕೇಂದ್ರಗಳನ್ನು ಹೊಂದಿದ ವೈವಿಧ್ಯಮಯ ತಂತ್ರಜ್ಞಾನ ನಾಯಕ ರಾಜ್ಯವಾಗಿ ಮಾಡುವುದು ಸರ್ಕಾರದ ದೃಷ್ಟಿ ಎಂದು ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.