
ಬೆಂಗಳೂರು (ಜು.14): ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ ಸೋಮವಾರ, ಮುಖ್ಯ ಕಾರ್ಯಾಚರಣಾ ಅಧಿಕಾರಿ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮೂರು ತಿಂಗಳ ಅವಧಿಗೆ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ. ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕೃಷ್ಣನ್ ಹರಿ ಹರ ಶರ್ಮಾ ಜೂನ್ 29 ರಂದು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದ ಬೆನ್ನಲ್ಲಿಯೇ ಬ್ಯಾಂಕ್‌ನ ಷೇರುಗಳಲ್ಲಿ ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವಾಗಿತ್ತು.
ಮೂರು ದಶಕಗಳಿಗೂ ಹೆಚ್ಚು ಕಾಲ ಬ್ಯಾಂಕಿನಲ್ಲಿದ್ದ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಜೂನ್‌ನಲ್ಲಿ ಸಿಒಒ ಆಗಿ ನೇಮಿಸಲಾಗಿತ್ತು. ಈಗ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಿದೆ. ಶ್ರೀಕೃಷ್ಣನ್ ಹರಿ ಹರ ಶರ್ಮಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ ನಂತರ ಈ ಬೆಳವಣಿಗೆ ಆಗಿದೆ. ಈ ಹಿಂದೆ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿದ್ದ ಭಟ್ ಅವರು ಮೂರು ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಶರ್ಮಾ ಅವರ ನಿರ್ಗಮನವು ಬ್ಯಾಂಕಿನ ಷೇರು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತ್ತು.
ಜುಲೈ 16 ರಿಂದ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಬ್ಯಾಂಕಿನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೆಬಿ ಅಥವಾ ಯಾವುದೇ ಇತರ ಪ್ರಾಧಿಕಾರವು ಹೊರಡಿಸಿದ ಯಾವುದೇ ಆದೇಶದಿಂದ ಭಟ್ ಅವರನ್ನು ನಿರ್ದೇಶಕರ ಹುದ್ದೆಯನ್ನು ಅಲಂಕರಿಸಲು ನಿಷೇಧಿಸಲಾಗಿಲ್ಲ ಎಂದು ಬ್ಯಾಂಕ್ ದೃಢಪಡಿಸಿದೆ. ಬ್ಯಾಂಕ್‌ನ ಇತರ ಯಾವುದೇ ನಿರ್ದೇಶಕರೊಂದಿಗೆ ಅವರು ಸಂಬಂಧ ಹೊಂದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಟ್ ಅವರು 1981 ರಲ್ಲಿ ಕರ್ಣಾಟಕ ಬ್ಯಾಂಕಿನಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದ್ದರು. ಬ್ಯಾಂಕ್‌ನೊಂದಿಗೆ 38 ವರ್ಷಗಳ ಕಾಲ ಸಂಬಂಧ ಹೊಂದಿದ್ದಾರೆ. 2019 ರಲ್ಲಿ ಅವರು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿದ್ದರು.
ಮೇ ತಿಂಗಳಲ್ಲಿ, ಬ್ಯಾಂಕಿನ ಲೆಕ್ಕಪರಿಶೋಧಕರು ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪೂರ್ಣಾವಧಿ ನಿರ್ದೇಶಕರು ಮಾಡಿದ ಕೆಲವು ಖರ್ಚುಗಳನ್ನು ಬ್ಯಾಂಕ್‌ನ ಗಮನಕ್ಕೆ ತಂದಿದ್ದರು. ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಮಂಗಳೂರಿಗೆ ಸ್ಥಳಾಂತರಗೊಳ್ಳಲು ಸಮಸ್ಯೆ ಮತ್ತು ಇತರ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಮಂಡಳಿಯು ಅಂಗೀಕರಿಸಿದೆ ಮತ್ತು ಜುಲೈ 31 ರಿಂದ ಜಾರಿಗೆ ಬರಲಿದೆ. ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಬ್ಯಾಂಕ್ ಶೋಧ ಸಮಿತಿಯನ್ನು ರಚಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.