
ನವದೆಹಲಿ (ಅ.10): ‘ಭಾರತದಲ್ಲಿ ಯಾವುದೇ ಕ್ಷೇತ್ರದಲ್ಲೂ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ. ಭದ್ರತಾ ಮಾನದಂಡಗಳನ್ನು ಪೂರೈಸಿದ ನಂತರವೇ ಉಪಗ್ರಹ ಸಂವಹನ (ಸ್ಯಾಟ್‌ಕಾಂ) ಪರವಾನಗಿದಾರರು ತಮ್ಮ ಸೇವೆ ಪ್ರಾರಂಭಿಸಬಹುದು’ ಎಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶ್ರೀಮಂತ ಉದ್ಯಮಿಗಳು ಭಾರತದಲ್ಲಿ ತಮ್ಮ ಸ್ಟಾರ್‌ಲಿಂಕ್ ಸೇವೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದ ವಿಶ್ವದ ನಂ.1 ಶ್ರೀಮಂತ, ಉದ್ಯಮಿ ಎಲಾನ್ ಮಸ್ಕ್‌ಗೆ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧಿಯಾ, ‘ತಮಗೆ ಬೇಕಾದ ಸೇವೆ ಮತ್ತು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕು ಗ್ರಾಹಕರಿಗಿದೆ. ಒಂದೇ ಕಂಪನಿಯ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದ್ದರೂ, ಒಟ್ಟು 3 ಸಂಸ್ಥೆಗಳು ಸ್ಯಾಟ್‌ಕಾಂ ಪರವಾನಗಿ ಪಡೆದುಕೊಂಡಿವೆ. ಕೇಂದ್ರ ಸರ್ಕಾರವು ಸ್ಪೆಕ್ಟ್ರಂ ದರ ಮತ್ತು ಕಂದಾಯ ಮಾದರಿಯನ್ನು ಅಂತಿಮಗೊಳಿಸಿದ ಬಳಿಕ, ಪ್ರತಿ ಸಂಸ್ಥೆಯೂ ಪ್ರತ್ಯೇಕವಾಗಿ ಭದ್ರತಾ ಷರತ್ತುಗಳನ್ನು ಪೂರೈಸಿದ ನಂತರವೇ ಕಾರ್ಯಾಚರಣೆ ಪ್ರಾರಂಭಿಸಲು ಅನುಮತಿ ನೀಡಲಾಗುತ್ತದೆ. ಭಾರತದಲ್ಲಿ ಯಾವುದೇ ಕ್ಷೇತ್ರದಲ್ಲೂ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಮಸ್ಕ್ ಆರೋಪವನ್ನು ಬೆಂಬಲಿಸಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಂಧಿಯಾ, ‘ಆರಂಭದಲ್ಲಿ ನಿರ್ದಿಷ್ಟ ವ್ಯಕ್ತಿಗೆ ಪರವಾನಗಿ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಈಗ ಅದೇ ವ್ಯಕ್ತಿಗೆ ಏಕೆ ಪರವಾನಗಿ ಸಿಕ್ಕಿಲ್ಲ ಎಂದು ಪ್ರಶ್ನಿಸುತ್ತಾ ಅವರೊಂದಿಗೆ ಕೈಜೋಡಿಸಿದೆ’ ಎಂದು ವ್ಯಂಗ್ಯವಾಡಿದರು.
ಮಸ್ಕ್ ಆರೋಪಗಳಿಗೆ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದು, ‘ಮಸ್ಕ್ ತಾಳ್ಮೆ ವಹಿಸಬೇಕು’ ಎಂದಿದ್ದಾರೆ. ‘ಸ್ಯಾಟ್‌ಕಾಂ ಸೇವೆಗಳು ದೇಶದ ಭದ್ರತೆಯ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. 26/11 ದಾಳಿಯಿಂದ ಹಿಡಿದು ಇತ್ತೀಚಿನ ಪಹಲ್ಗಾಂ ಘಟನೆಯವರೆಗೆ, ಉಗ್ರರು ಉಪಗ್ರಹ ಸಂವಹನ ಸಾಧನಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಸ್ಟಾರ್‌ಲಿಂಕ್ ಅತ್ಯುತ್ತಮ ತಂತ್ರಜ್ಞಾನವಾಗಿದ್ದರೂ ದೇಶದ ಸುರಕ್ಷತೆ ಮತ್ತು ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವುದು ಅನಿವಾರ್ಯ’ ಎಂದು ತಿಳಿಸಿದ್ದಾರೆ.
ಪಿಟಿಐ ನವದೆಹಲಿ (ಅ.10): ಶ್ರೀಮಂತ ಉದ್ಯಮಿಗಳು ಭಾರತದಲ್ಲಿ ಸ್ಟಾರ್‌ಲಿಂಕ್‌ಗೆ ತಡೆಯೊಡ್ಡುತ್ತಿದ್ದಾರೆ ಎಂಬ ಉದ್ಯಮಿ ಎಲಾನ್ ಮಸ್ಕ್ ಆರೋಪ ತೀವ್ರ ವಿವಾದ ಸೃಷ್ಟಿಸಿರುವ ನಡುವೆಯೇ, ‘ಭಾರತಕ್ಕೆ ಸಮಾನ ಅವಕಾಶವಿರುವ ಸ್ಪರ್ಧಾತ್ಮಕ ವಾತಾವರಣದ ಅಗತ್ಯವಿದೆ. ಇದರಲ್ಲಿ ಪ್ರತಿ ಸಂಸ್ಥೆಗೂ ಸ್ಪರ್ಧಿಸಲು ನ್ಯಾಯಯುತ ಅವಕಾಶವಿರಬೇಕು. ಹಾಗೆಯೇ, ಬಂಡವಾಳಶಾಹಿಯ ಸರಪಳಿಯನ್ನು ಮುರಿಯಲು ಕಾಂಗ್ರೆಸ್ ಬದ್ಧವಾಗಿದೆ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಮಸ್ಕ್ ಆರೋಪವನ್ನು ಬೆಂಬಲಿಸಿ ರಾಹುಲ್ ಗುರುವಾರ ಟ್ವೀಟ್ ಮಾಡಿದ್ದರು. ಅದಕ್ಕೆ ಮಸ್ಕ್ ಪ್ರತಿಕ್ರಿಯೆಯನ್ನೂ ನೀಡಿದ್ದರು. ಶುಕ್ರವಾರವೂ ತಮ್ಮ ನಿಲುವನ್ನು ಪುನರುಚ್ಚರಿಸಿರುವ ರಾಹುಲ್, ‘ರಾಜಕೀಯ ಆಶ್ರಯದ ಮೇಲಲ್ಲದೆ, ನಾವೀನ್ಯತೆ ಮತ್ತು ಕಠಿಣ ಪರಿಶ್ರಮದಿಂದ ಚಾಲಿತವಾದ ಆರ್ಥಿಕತೆಯನ್ನು ಕಟ್ಟಲು ಹಾಗೂ ಬಂಡವಾಳಶಾಹಿಯ ಸರಪಳಿಯನ್ನು ಮುರಿಯಲು ನಾನು ಮತ್ತು ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದೇವೆ’ ಎಂದು ತಿಳಿಸಿದರು.
ಸರೆಂಡರ್ ಗಾಂಧಿ: ಬಿಜೆಪಿ ಕಿಡಿ: ರಾಹುಲ್ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಬಿಜೆಪಿ, ‘ಭಾರತದಲ್ಲಿ ಸ್ಪೆಕ್ಟ್ರಂ ಹಂಚಿಕೆಯನ್ನು ಕಾನೂನಿಗೆ ಅನುಗುಣವಾಗಿ ಹಾಗೂ ಯಾವುದೇ ತಾರತಮ್ಯವಿಲ್ಲದೆ ಕಟ್ಟುನಿಟ್ಟಾಗಿ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದೆ. ‘ನಾವು ಅಮೆರಿಕಕ್ಕೆ ಶರಣಾಗುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದರು. ಆದರೆ ಈಗ ಅವರೇ ಶರಣಾಗುತ್ತಿರುವುದೇಕೆ? ಸರೆಂಡರ್ ಗಾಂಧಿ ಹೇಗಾದರು? ಎಲಾನ್ ಮಸ್ಕ್ ಅವರಿಗೆ ಏನಾದರೂ ತೊಂದರೆಯಾದರೆ ಇವರು ಏಕೆ ಅಷ್ಟೊಂದು ಅಸಹನೆಯನ್ನು ತೋರುತ್ತಿದ್ದಾರೆ?’ ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಪ್ರಶ್ನಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.