ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಇಂದೇ ಕಡೆಯ ದಿನ: ತಪ್ಪಿದರೆ ಜೈಲು ಶಿಕ್ಷೆ..!

By BK AshwinFirst Published Jul 31, 2022, 4:11 PM IST
Highlights

ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕವಾಗಿದ್ದು, ಈಗಾಗಲೇ 5 ಕೋಟಿಗೂ ಅಧಿಕ ಜನ ರಿಟರ್ನ್ಸ್‌ ಸಲ್ಲಿಸಿರುವುದರಿಂದ ಡೆಡ್‌ಲೈನ್‌ ವಿಸ್ತರಣೆಯಾಗಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. 

ದೇಶದ ವೇತನದಾರ ತೆರಿಗೆದಾರರೇ, ಇಲ್ನೋಡಿ.. ಐಟಿ ರಿಟರ್ನ್ಸ್‌ (IT Returns) ಸಲ್ಲಿಕೆಗೆ ಇಂದೇ ಕಡೆಯ ದಿನ. 2022-23ರ ಮೌಲ್ಯಮಾಪನ ವರ್ಷ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ 31 ಅಂದರೆ, ಇಂದು ಡೆಡ್‌ಲೈನ್‌ ಆಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಡೆಡ್‌ಲೈನ್‌ ಅನ್ನು ವಿಸ್ತರಿಸಿ ಎಂದು ಟ್ವಿಟ್ಟರ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದರೂ ಕೇಂದ್ರ ಸರ್ಕಾರ ಇದಕ್ಕೆ ಕ್ಯಾರೆ ಅಂದಿಲ್ಲ. ಐಟಿ ರಿಟರ್ನ್ಸ್‌ ಸಲ್ಲಿಸಲು ಡೆಡ್‌ಲೈನ್‌ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಈವರೆಗೆ ಒಪ್ಪಿಲ್ಲ. 

ಈಗಾಗಲೇ 5 ಕೋಟಿಗೂ ಹೆಚ್ಚು ಜನ ಐಟಿ ರಿಟರ್ನ್ಸ್ ಫೈಲ್‌ ಮಾಡಿದ್ದಾರೆ. ಈ ಹಿನ್ನೆಲೆ ಡೆಡ್‌ಲೈನ್‌ ವಿಸ್ತರಣೆ ಮಾಡುವ ಸಾಧ್ಯತೆ ತೀವ್ರ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೂ, ಕಡೆಯ ಕ್ಷಣದ ಅಚ್ಚರಿಯ ಸುದ್ದಿಗಾಗಿ ಹಲವರು ಕಾಯುತ್ತಿದ್ದಾರೆ. ನೀವೂ ಸಹ ಐಟಿ ರಿಟರ್ನ್ಸ್‌ ಅನ್ನು ಇನ್ನೂ ಫೈಲ್‌ ಮಾಡಿಲ್ವಾ, ಈ ರೀತಿಯ ಅಚ್ಚರಿಯ ಸುದ್ದಿಗಾಗಿ ಕಾಯೋದು ಬಿಟ್ಟು, ಈಗಲೇ ಫೈಲ್‌ ಮಾಡಿ. ಏಕೆಂದರೆ, ಡೆಡ್‌ಲೈನ್‌ಗೆ ಇನ್ನು ಕೆಲವು ಗಂಟೆಗಳು ಮಾತ್ರ ಬಾಕಿ ಇದೆ. 

ಐಟಿಆರ್‌ ಸಲ್ಲಿಕೆಗೆ ಎರಡೇ ದಿನ ಅವಕಾಶ: ಡೆಡ್‌ಲೈನ್‌ ವಿಸ್ತರಣೆ ಅಸಂಭವ ಎಂದ ಕೇಂದ್ರ ಸರ್ಕಾರ

ವೇತನದಾರ ಉದ್ಯೋಗಿಗಳಿಗೆ ಹಾಗೂ ಹಿಂದೂ ಅವಿಭಜಿತ ಕುಟುಂಬಗಳಿಗೆ (Hindu Undivided Families ) ಆಡಿಟ್‌ ಅಗತ್ಯವಿಲ್ಲದ ಅಕೌಂಟ್‌ಗಳಿಗೆ ಜುಲೈ 31, 2022 ಐಟಿಆರ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಒಂದು ವೇಳೆ, ಐಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ, ನಿಮಗೆ ಸಂಕಷ್ಟ ಕಾದಿದೆ. ಯಾವುದೇ ದಂಡವಿಲ್ಲದೆ ಐಟಿ ರಿಟರ್ನ್ಸ್‌ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ, ನೀವು ನಾಳೆ ಐಟಿ ರಿಟರ್ನ್ಸ್‌ ಸಲ್ಲಿಸ್ತೀವಿ ಅಂದ್ರೆ ದಂಡ ಕಟ್ಬೇಕು. ಅಲ್ಲದೆ, ಐಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ ನೀವು ಜೈಲು ಕಂಬಿಯನ್ನು ಎಣಿಸಬೇಕಾಗಬಹುದು. ಹೌದು, ಐಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ ಜೈಲು ಶಿಕ್ಷೆಯೂ ಕಾದಿದೆ.
 
ವೈಯಕ್ತಿಕ ತೆರಿಗೆದಾರರಿಗೆ ಡೆಡ್‌ಲೈನ್‌ನೊಳಗೆ ಐಟಿ ರಿಟರ್ನ್ಸ್‌ ಸಲ್ಲಿಸಿ ಎಂದು ಆದಾಯ ತೆರಿಗೆ ಇಲಾಖೆ ಮನವಿ ಮಾಡಿಕೊಳ್ಳುತ್ತಲೇ ಇದೆ. ಇಲ್ಲದಿದ್ದರೆ ನೀವು 5 ಸಾವಿರ ರೂ. ವರೆಗೆ ದಂಡ ಕಟ್ಟಬೇಕಾಗಬಹುದು. ಇದಿಷ್ಟೇ ಅಲ್ಲ, 6 ತಿಂಗಳಿಮದ 7 ವರ್ಷದವರೆಗೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು. ಇದರ ಹೊರತಾಗಿ, ಅವರು ವರ್ಷದ ಲಾಭ ಅಥವಾ ಆದಾಯಕ್ಕೆ ಸಂಬಂಧಪಟ್ಟಂತೆ ನಷ್ಟವನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ.

1 ಸಾವಿರದಿಂದ 5 ಸಾವಿರ ದಂಡ
ವೈಯಕ್ತಿಕ ತೆರಿಗೆದಾರರ ವಾರ್ಷಿಕ ಆದಾಯ 5 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಾದಲ್ಲಿ 5 ಸಾವಿರ ರೂ. ದಂಡ ವಿಧಿಸಬಹುದು. ಹಾಗೂ, ತೆರಿಗೆದಾರರ ಆದಾಯ 5 ಲಕ್ಷ ರೂ. ಗೂ ಕಡಿಮೆ ಇದ್ದಲ್ಲಿ 1 ಸಾವಿರ ರೂ. ದಂಡ ವಿಧಿಸಬಹುದು. ಅಲ್ಲದೆ, ಜುಲೈ 31, 2022 ರ ನಂತರ ಹಾಗೂ ಡಿಸೆಂಬರ್ 31, 2022 ರ ವೇಳೆಗೆ ಐಟಿ ರಿಟರ್ನ್ಸ್‌ ಸಲ್ಲಿಸಿದರೆ ನೀವು ಈ ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ಡಿಸೆಂಬರ್ 31, 2022 ಮುಗಿದರೂ ಸಹ ನೀವು ಐಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ ಶೇ. 50 ರಿಂದ ಶೇ. 200 ರವರೆಗೆ ದಂಡ ಕಟ್ಟಬೇಕಾಗುತ್ತದೆ. ಇದರ ಜತೆಗೆ ನೀವು ಐಟಿ ರಿಟರ್ನ್ಸ್‌ ಸಲ್ಲಿಸುವ ದಿನಾಂಕದವರೆಗೆ ಹೆಚ್ಚುವರಿ ತೆರಿಗೆ ಹಾಗೂ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಜತೆಗೆ ಐಟಿ ನೋಟಿಸ್‌ ಅನ್ನೂ ಕಳಿಸುತ್ತದೆ.

ಆದಾಯ ತೆರಿಗೆ ಪಾವತಿಯಲ್ಲಿ ಅಕ್ಷಯ್ ಕುಮಾರ್‌ಗೆ ಅಗ್ರಸ್ಥಾನ, ಸನ್ಮಾನ್ ಪ್ರಮಾಣಪತ್ರ ಗೌರವ ಪಡೆದ ನಟ!
ಜೈಲಿಗೂ ಹೋಗಬೇಕಾಗಬಹುದು..!
ಮೌಲ್ಯಮಾಪನ ವರ್ಷ 2022-23ರ ಐಟಿ ರಿಟರ್ನ್ಸ್‌ ಅನ್ನು ಡಿಸೆಂಬರ್ 31, 2022 ರ ವೇಳೆಗೆ ಸಲ್ಲಿಸದಿದ್ದರೆ ನಿಮಗೆ 6 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. 

click me!