ಟಾಟಾ ಗ್ರೂಪ್‌ ವಿವಾದ: ಇದೇ ಮೊದಲ ಬಾರಿಗೆ ಮೌನ ಮುರಿದ ರತನ್ ಟಾಟಾ ಕಿರಿಯ ಸಹೋದರ ಜಿಮ್ಮಿ ಟಾಟಾ, ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ!

Gowthami K   | ANI
Published : Nov 16, 2026, 12:10 PM IST
Jimmy Naval Tata

ಸಾರಾಂಶ

ದೇಶದ ಪ್ರಮುಖ ಉದ್ಯಮ ಸಮೂಹ ಟಾಟಾ ಗ್ರೂಪ್‌ನಲ್ಲಿ ಆಡಳಿತ, ಅಧಿಕಾರ ಹಂಚಿಕೆ ಮತ್ತು ಷೇರು ಮಾರುಕಟ್ಟೆ ಪ್ರವೇಶದ ವಿಚಾರವಾಗಿ ಆಂತರಿಕ ಭಿನ್ನಾಭಿಪ್ರಾಯವಿವೆ. ದಿ. ರತನ್ ಟಾಟಾ ಕಿರಿಯ ಸಹೋದರ, ಟಾಟಾ ಟ್ರಸ್ಟ್‌ಗಳ ಹಿರಿಯ ಟ್ರಸ್ಟಿಯಾಗಿರುವ ಜಿಮ್ಮಿ ಎನ್. ಟಾಟಾ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಮುಂಬೈ: ದೇಶದ ಅತಿದೊಡ್ಡ ನಂಬಿಕಸ್ಥ ಉದ್ಯಮ ಸಮೂಹವಾದ ಟಾಟಾ ಗ್ರೂಪ್ ಮತ್ತು ಟಾಟಾ ಟ್ರಸ್ಟ್‌ಗಳ ಆಂತರಿಕ ಒಳಜಗಳದ ಕುರಿತು ದಿವಂಗತ ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಎನ್. ಟಾಟಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪುಣೆಯ ಸಾಮಾನ್ಯ ಅಪಾರ್ಟ್‌ಮೆಂಟ್ ಒಂದರಲ್ಲಿ ಸರಳ ಹಾಗೂ ಏಕಾಂತ ಜೀವನ ನಡೆಸುತ್ತಿರುವ 86 ವರ್ಷದ ಜಿಮ್ಮಿ ಟಾಟಾ, ಟಾಟಾ ಟ್ರಸ್ಟ್‌ಗಳ ಹಿರಿಯ ಟ್ರಸ್ಟಿಯೂ ಆಗಿದ್ದಾರೆ. ಟಾಟಾ ಸನ್ಸ್ ಸಂಸ್ಥೆಯಲ್ಲಿ ಶೇ. 66ರಷ್ಟು ಪಾಲು ಹೊಂದಿರುವ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಿಗೆ ನೀಡಲಾಗಿರುವ "ಅಸ್ವಾಭಾವಿಕ ಮತ್ತು ಸರ್ವಾಧಿಕಾರಿ ವೀಟೋ ಅಧಿಕಾರಗಳ" ಕುರಿತು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ನಿಯಮಾವಳಿಗಳ ತಿದ್ದುಪಡಿಗೆ ವಿರೋಧ

ಹಿರಿಯ ಟ್ರಸ್ಟಿಯೊಬ್ಬರೊಂದಿಗೆ ನಡೆಸಿದ ಸಂಭಾಷಣೆಯ ಬಳಿಕ ಸಹಿ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಜಿಮ್ಮಿ ಟಾಟಾ ಅವರು ಸಮೂಹದ ಆಡಳಿತ ವೈಖರಿಯನ್ನು ವಿಶ್ಲೇಷಿಸಿದ್ದಾರೆ. ಟಾಟಾ ಟ್ರಸ್ಟ್‌ಗಳಲ್ಲಿ ಉದ್ಭವಿಸಿರುವ ಪ್ರಸ್ತುತ ಬಿಕ್ಕಟ್ಟಿಗೆ 2013-2014ರ ಅವಧಿಯಲ್ಲಿ ಸಂಸ್ಥೆಯ ನಿಯಮಾವಳಿಗಳಿಗೆ (ಆರ್ಟಿಕಲ್ಸ್ ಆಫ್ ಅಸೋಸಿಯೇಷನ್) ತರಲಾದ ತೀವ್ರ ಬದಲಾವಣೆಗಳೇ ಮೂಲ ಕಾರಣ ಎಂದು ಆರೋಪಿಸಿದ್ದಾರೆ. 1989ಕ್ಕಿಂತ ಹಿಂದಿನ ವ್ಯವಸ್ಥೆಯಲ್ಲಿ ಸಮಾಜ ಸೇವೆ ಮಾಡುವ ಟ್ರಸ್ಟ್‌ಗಳು ಮತ್ತು ಟಾಟಾ ಸನ್ಸ್‌ನ ವಾಣಿಜ್ಯ ವ್ಯವಹಾರಗಳ ನಡುವೆ ಸ್ಪಷ್ಟವಾದ ಅಂತರವಿತ್ತು. ಟ್ರಸ್ಟ್‌ಗಳಿಗೆ ಕಂಪನಿಯ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿರಲಿಲ್ಲ. ಆದರೆ ನಂತರದ ತಿದ್ದುಪಡಿಗಳು ಟ್ರಸ್ಟ್ ಅಧ್ಯಕ್ಷರಿಗೆ ನಿರ್ದೇಶಕರನ್ನು ನೇಮಿಸುವ ಹಾಗೂ ಏಕಪಕ್ಷೀಯವಾಗಿ ವೀಟೋ ಚಲಾಯಿಸುವ ಅಧಿಕಾರ ನೀಡಿ, ಮಂಡಳಿಯ ಸಾಮೂಹಿಕ ನಿರ್ಧಾರದ ಹಕ್ಕನ್ನು ದುರ್ಬಲಗೊಳಿಸಿವೆ ಎಂದು ಅವರು ಟೀಕಿಸಿದ್ದಾರೆ.

ಟಾಟಾ ಸನ್ಸ್ ಷೇರುಪೇಟೆ ನೋಂದಣಿಗೆ ಬಲವಾದ ಬೆಂಬಲ

ಟಾಟಾ ಸನ್ಸ್‌ನಲ್ಲಿ ಸುಮಾರು ಶೇ. 0.81ರಷ್ಟು ವೈಯಕ್ತಿಕ ಷೇರು ಹೊಂದಿರುವ ಜಿಮ್ಮಿ ಟಾಟಾ, ಆರ್‌ಬಿಐ ನಿರ್ದೇಶನದಂತೆ ಟಾಟಾ ಸನ್ಸ್ ಸಂಸ್ಥೆಯನ್ನು ಷೇರುಪೇಟೆಯಲ್ಲಿ ನೋಂದಾವಣೆ ಮಾಡುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಷೇರುಪೇಟೆ ಪ್ರವೇಶಿಸುವುದರಿಂದ ಸಂಸ್ಥೆಯಲ್ಲಿರುವ ಅತಿಯಾದ ಗೌಪ್ಯತೆಯ ಸಂಸ್ಕೃತಿ ಕೊನೆಗೊಳ್ಳಲಿದ್ದು, ಕಾನೂನುಬದ್ಧ ಹಕ್ಕು ಬರಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಹಿಂದೆ ರತನ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯನ್ನು ಸಾರ್ವಜನಿಕ ಷೇರುಪೇಟೆಗೆ ತಂದಾಗ ಟಾಟಾ ಸನ್ಸ್‌ಗೆ ಅಪಾರ ಲಾಭವಾಗಿತ್ತು ಎಂಬುದನ್ನು ಅವರು ಸ್ಮರಿಸಿದ್ದಾರೆ.

ಮತ್ತೊಂದೆಡೆ, ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ಹಾಗೂ ಟಾಟಾ ಸನ್ಸ್‌ನಲ್ಲಿ ಶೇ. 1ರಷ್ಟು ಪಾಲು ಹೊಂದಿರುವ ಮಲಸಹೋದರ ನೋಯೆಲ್ ಟಾಟಾ, "ಲಿಸ್ಟಿಂಗ್‌ನಿಂದ ಪರೋಪಕಾರಕ್ಕಿಂತ ಲಾಭಕ್ಕೇ ಹೆಚ್ಚಿನ ಆದ್ಯತೆ ಸಿಗುವಂತಾಗುತ್ತದೆ" ಎಂದು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಮ್ಮಿ ಟಾಟಾ ಆರ್‌ಬಿಐ ನಿಯಮಗಳಿಂದ ತಪ್ಪಿಸಿಕೊಳ್ಳಲು ಟಾಟಾ ಸನ್ಸ್ ಅನ್ನು ಸಣ್ಣ ಘಟಕಗಳಾಗಿ ವಿಭಜಿಸುವ ಇಲ್ಲವೇ ಖಾಸಗಿ ಕಂಪನಿಯಾಗಿಯೇ ಉಳಿಸಿಕೊಳ್ಳುವ ನೋಯೆಲ್ ಅವರ ಯಾವುದೇ ಪ್ರಸ್ತಾಪವು ಸಾರ್ವಜನಿಕರು ಮತ್ತು ಷೇರುದಾರರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಎಚ್ಚರಿಸಿದ್ದಾರೆ. ಈ ವಿಚಾರದಲ್ಲಿ ಆರ್‌ಬಿಐ ಯಾವುದೇ ವಿಳಂಬವಿಲ್ಲದೆ ಕಟ್ಟುನಿಟ್ಟಿನ ಕಾಲಮಿತಿ ನಿಗದಿಪಡಿಸಬೇಕು ಮತ್ತು ಟ್ರಸ್ಟ್‌ಗಳ ಮೂಲ ಉದ್ದೇಶಗಳನ್ನು ರಕ್ಷಿಸಲು ಸರ್ಕಾರ ಹಾಗೂ ಚಾರಿಟಿ ಆಯುಕ್ತರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಎನ್. ಚಂದ್ರಶೇಖರನ್ ಅವರ ಮೂರನೇ ಅವಧಿಗೆ ಬೆಂಬಲ

ಟಾಟಾ ಸನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರನ್ನು ಮೂರನೇ ಅವಧಿಗೆ ಮರುನೇಮಕ ಮಾಡುವ ವಿಚಾರದಲ್ಲಿಯೂ ಜಿಮ್ಮಿ ಟಾಟಾ ಅವರು ನೋಯೆಲ್ ಟಾಟಾ ಅವರ ನಿಲುವನ್ನು ಪ್ರಶ್ನಿಸಿದ್ದಾರೆ. 2026ರ ಸೆಪ್ಟೆಂಬರ್ 17ರಂದು ನಡೆದ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ಚಂದ್ರಶೇಖರನ್ ಅವರ ಮರುನೇಮಕದ ವಿರುದ್ಧ ನೋಯೆಲ್ ಮತ ಚಲಾಯಿಸಿದ್ದರು. ಈ ಬಗ್ಗೆ ಮಾತನಾಡಿ, ಟಾಟಾ ಸನ್ಸ್ ಮಂಡಳಿಯ ಸಂಪೂರ್ಣ ಬೆಂಬಲ ಮತ್ತು ಟಾಟಾ ಟ್ರಸ್ಟ್‌ಗಳ ಸರ್ವಾನುಮತದ ನಿರ್ಣಯವಿದ್ದರೂ, ಯಾವುದೇ ಸಮರ್ಥನೆಯಿಲ್ಲದೆ ವೀಟೋ ಅಧಿಕಾರ ಬಳಸಿ ಅವರನ್ನು ತಡೆಯಲು ಯತ್ನಿಸಲಾಗಿದೆ ಎಂದು ಜಿಮ್ಮಿ ಆರೋಪಿಸಿದ್ದಾರೆ. ಹಿಂದೆ ಜೆಆರ್‌ಡಿ ಟಾಟಾ ಅವರು ಸುಮಂತ್ ಮೂಲಗಾಂವ್ಕರ್, ದರ್ಬಾರಿ ಸೇಠ್, ಜೆರ್ಕ್ಸೆಸ್ ದೇಸಾಯಿ ಮತ್ತು ರೂಸಿ ಮೋದಿ ಅವರಂತಹ ದಕ್ಷ ಅಧಿಕಾರಿಗಳನ್ನು ಗೌರವಿಸಿ ಬೆಳೆಸಿದ್ದರು. ಅದೇ ರೀತಿ ಚಂದ್ರಶೇಖರನ್ ಅವರ ನಾಯಕತ್ವದಲ್ಲಿ ಟಾಟಾ ಕಂಪನಿಗಳು ಷೇರುದಾರರಿಗೆ ದಾಖಲೆಯ ಲಾಭಾಂಶ ನೀಡಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರಸ್ಟ್‌ಗಳಲ್ಲಿ ಕುಟುಂಬ ಸದಸ್ಯರ ನೇಮಕ ಮತ್ತು ಟ್ರಸ್ಟಿಗಳ ವಿವಾದ

ಸರ್ ರತನ್ ಟಾಟಾ ಟ್ರಸ್ಟ್‌ನ (ಎಸ್‌ಆರ್‌ಟಿಟಿ) ಟ್ರಸ್ಟಿಯಾಗಿರುವ ಜಿಮ್ಮಿ, ಇತ್ತೀಚಿನ ದಿನಗಳಲ್ಲಿ ಟ್ರಸ್ಟ್ ಮಂಡಳಿಗಳಲ್ಲಿ ಹಾಲಿ ಅಧ್ಯಕ್ಷರ ಕುಟುಂಬ ಸದಸ್ಯರನ್ನೇ ತುಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೋಯೆಲ್ ಟಾಟಾ ಅವರ ಪುತ್ರ ನೆವಿಲ್ಲೆ ಟಾಟಾ ಅವರು ಸರ್ ದೋರಾಬ್ಜಿ ಟಾಟಾ ಟ್ರಸ್ಟ್‌ನಲ್ಲಿದ್ದರೆ, ಪುತ್ರಿಯರಾದ ಲಿಯಾ ಮತ್ತು ಮಾಯಾ ಇತರ ಟ್ರಸ್ಟ್‌ಗಳಲ್ಲಿದ್ದಾರೆ. ಒಂದೇ ಕುಟುಂಬದ ಹಲವರು ಟ್ರಸ್ಟ್‌ಗಳಲ್ಲಿರುವುದು ಟಾಟಾ ಸನ್ಸ್ ಅನ್ನು ಹಿಂಬಾಗಿಲಿನಿಂದ ಸ್ವಾಧೀನಪಡಿಸಿಕೊಂಡಂತೆ ಆಗುತ್ತದೆ. ಇವು ಖಾಸಗಿ ಕುಟುಂಬ ಟ್ರಸ್ಟ್‌ಗಳಲ್ಲ, ಹಿಂದೆ ನಾನಿ ಪಾಲ್ಖಿವಾಲಾ, ಗೌತಮ್ ಸಾರಾಭಾಯ್, ಹೋಮಿ ಸೇಥ್ನಾ ಮತ್ತು ಹೋಮಿ ಭಾಭಾ ಅವರಂತಹ ಸ್ವತಂತ್ರ ದಿಗ್ಗಜರು ಇಲ್ಲಿ ಟ್ರಸ್ಟಿಗಳಾಗಿದ್ದರು ಎಂದು ಅವರು ನೆನಪಿಸಿದ್ದಾರೆ.

ಇದಲ್ಲದೆ, ಟ್ರಸ್ಟಿಗಳ ಅಧಿಕಾರಾವಧಿ ನವೀಕರಣದಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಜಿಮ್ಮಿ ದೂರಿದ್ದಾರೆ. ಎಸ್‌ಆರ್‌ಟಿಟಿ ಟ್ರಸ್ಟ್‌ನಲ್ಲಿ ನೋಯೆಲ್ ಪುತ್ರ ನೆವಿಲ್ಲೆ ಅವರ ಸೇರ್ಪಡೆಯನ್ನು ವಿರೋಧಿಸಿದ್ದಕ್ಕಾಗಿ ಹಿರಿಯ ಟ್ರಸ್ಟಿ ವೇಣು ಶ್ರೀನಿವಾಸನ್ (ಇವರ ಅವಧಿ ಡಿಸೆಂಬರ್ 2026ಕ್ಕೆ ಮುಕ್ತಾಯಗೊಳ್ಳಲಿದೆ) ಅವರನ್ನು ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಹಾರಾಷ್ಟ್ರ ಚಾರಿಟಿ ಆಯುಕ್ತರ ನಿಯಮದಂತೆ ಮಂಡಳಿಯ ಒಟ್ಟು ಬಲದ ನಾಲ್ಕನೇ ಒಂದರಷ್ಟು ಸದಸ್ಯರು ಮಾತ್ರ ಶಾಶ್ವತ ಟ್ರಸ್ಟಿಗಳಾಗಿರಲು ಸಾಧ್ಯವಿದ್ದು, ಪ್ರಸ್ತುತ ಎಸ್‌ಆರ್‌ಟಿಟಿಯಲ್ಲಿ ನೋಯೆಲ್ ಟಾಟಾ, ಜೆಹಾಂಗೀರ್ ಎಚ್‌ಸಿ ಜೆಹಾಂಗೀರ್ ಮತ್ತು ಜಿಮ್ಮಿ ಎನ್. ಟಾಟಾ ಶಾಶ್ವತ ಟ್ರಸ್ಟಿಗಳಾಗಿದ್ದಾರೆ. ಸಾರ್ವಜನಿಕ ಸಮಾರಂಭಗಳಿಂದ ಸದಾ ದೂರವಿರುವ ಜಿಮ್ಮಿ ಟಾಟಾ, ಕೊನೆಯದಾಗಿ 2024ರ ಅಕ್ಟೋಬರ್ 10ರಂದು ಮುಂಬೈನಲ್ಲಿ ನಡೆದ ತಮ್ಮ ಹಿರಿಯ ಸಹೋದರ ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Success story: ಅಂದು 15 ರೂಪಾಯಿಗಾಗಿ ದೀಪಾವಳಿ ಪಟಾಕಿ ಮಾರುತ್ತಿದ್ದ ಹುಡುಗ, ಇಂದು 21 ಸಾವಿರ ಕೋಟಿ ಒಡೆಯ!
ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: ಬಜೆಟ್‌ನಲ್ಲಿ ಎಷ್ಟು ಸಿಗಲಿದೆ ಬಂಗಾರ?