Jeff Bezos Yacht Koru: ನಿಶ್ಚಿತಾರ್ಥಕ್ಕಾಗಿಯೇ ಹೊಸ ಯಾಚ್‌ ಖರೀದಿಸಿದ್ದ ಜೆಫ್‌ ಬೆಜೋಸ್‌!

By Santosh NaikFirst Published May 23, 2023, 1:55 PM IST
Highlights

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಪತ್ನಿಗೆ 38 ಬಿಲಿಯನ್‌ ಡಾಲರ್‌ ಪರಿಹಾರ ನೀಡಿದ ಬಳಿಕ ಗರ್ಲ್‌ಫ್ರೆಂಡ್‌ ಲೌರೇನ್‌ ಸ್ಯಾಂಚೇಜ್‌ಗೆ ಬೆಜೋಸ್‌ ಉಂಗುರ ತೊಡಿಸಿದ್ದಾರೆ. ನಿಶ್ಚಿತಾರ್ಥ ಮಾಡಿಕೊಳ್ಳುವ ಸಲುವಾಗಿ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪುಣ್ಯಾತ್ಮ ಹೊಸ ಯಾಚ್‌ ಕೂಡ ಖರೀದಿ ಮಾಡಿದ್ದ.

ನವದೆಹಲಿ (ಮೇ.23): ಒಂದೆಡೆ ನಷ್ಟದ ಕಾರಣ ನೀಡಿ ಅಮೆಜಾನ್‌ನಿಂದ ಉದ್ಯೋಗಿಗಳನ್ನು ಸಾರಾಸಗಟಾಗಿ ತೆಗೆದು ಹಾಕುತ್ತಿದ್ದರೆ, ಇನ್ನೊಂದೆಡೆ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ನ ಐಷಾರಾಮಿ ಜೀವನ ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಯುತ್ತಿದೆ. ಮಾಜಿ ಪತ್ನಿ ಮೆಕೆಂಜಿ ಸ್ಕಾಟ್‌ಗೆ ಬರೋಬ್ಬರಿ 38 ಬಿಲಿಯನ್‌ ಅಮೆರಿಕನ್‌ ಡಾಲರ್‌ ಪರಿಹಾರ ಪಾವತಿ ಮಾಡಿದ ಕೆಲವೇ ದಿನಗಳಲ್ಲಿ ಬೆಜೋಸ್‌, ಗರ್ಲ್‌ಫ್ರೆಂಡ್‌ ಲೌರೇನ್‌  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಎನ್‌ಎಫ್‌ಎಲ್‌ ಆಟಗಾರ ಟೋನಿ ಗೊಂಜಾಲೆಜ್‌ ಕೂಡ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು. ಟೋನಿ ಅಲ್ಲದೆ, ಲೌರೇನ್‌ ಸ್ಯಾಂಚೇಜ್‌ರ 21 ವರ್ಷದ ಪುತ್ರ ನಿಕ್ಕೋ ಕೂಡ ಈ ವೇಳೆ ಜೊತೆಯಾಗಿದ್ದರು. ಜೆಫ್‌ ಬೆಜೋಸ್‌ ನಿಶ್ಚಿತಾರ್ಥಕ್ಕಿಂತ ಆತ ನಿಶ್ಚಿತಾರ್ಥಕ್ಕಾಗಿ ಮಾಡಿಕೊಂಡ ಸಿದ್ಧತೆಗಳೇ ಜಗತ್ತಿನ ಗಮನ ಸೆಳೆದಿದೆ. ನಿಶ್ಚಿತಾರ್ಥ ಮಾಡಿಕೊಳ್ಳುವ ಸಲುವಾಗಿಯೇ ಬೆಜೋಸ್‌ ಹೊಸ ಸೂಪರ್‌ ಯಾಚ್‌ಅನ್ನು ಖರೀದಿ ಮಾಡಿದ್ದರು. ಇದರಲ್ಲಿಯೇ ಕ್ಯಾನ್ಸ್‌ ಚಲನಚಿತ್ರೋತ್ಸವಕ್ಕೆ ತೆರಳಿದ್ದರು. ಮೂರು ಅಂತಸ್ತಿನ ಸೂಪರ್‌ ಯಾಚ್‌ನಲ್ಲಿ ಬೆಜೋಸ್ ತನ್ನ ಗೆಳತಿಯ ಜೊತೆಗೆ ಇದ್ದ ಚಿತ್ರಗಳನ್ನೂ ಮಾಧ್ಯಮಗಳು ಪ್ರಕಟಿಸಿವೆ. ಈ ಸೂಪರ್‌ ಯಾಚ್‌ಗೆ ಕೋರು ಎಂದು ಹೆಸರು ಇಡಲಾಗಿದೆ. ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಯಾದ್‌ ಆಗಿತ್ತು. ಬರೋಬ್ಬರು 229 ಅಡಿ ಎತ್ತರವಾಗಿದೆ.

ಇನ್ನು ಇಡೀ ಯಾಚ್ ವಿದ್ಯುತ್‌ ಶಕ್ತಿಯ ಮೇಲೆಯೇ ತೇಲುತ್ತದೆ. ಇದರಲ್ಲಿ ಈಜುಕೊಳ, ಬಾರ್‌, ಲಾಂಜ್‌ ಹಾಗೂ ಹಾಟ್‌ ಟಬ್‌ಗಳು ಇವೆ. ಕಳೆದ ವಾರ ವಿಹಾರ ನೌಕೆಯು ಮಲ್ಲೋರ್ಕಾದ ಸುತ್ತಲೂ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸುತ್ತಿರುವುದನ್ನು ಮಾಧ್ಯಮಗಳು ಪತ್ತೆ ಮಾಡಿದೆ. ಪ್ರತಿ ವಿಹಾರದ ಸಮಯದಲ್ಲೂ ಯಾಚ್‌ನೊಂದಿಗೆ ಒಂದು ಬೆಂಬಲ ನೌಕೆಯೂ ಇರುತ್ತದೆ. ಈ ವಿಹಾರ ನೌಕೆಯ ಜೊತೆಯಲ್ಲಿರುವ ಬೆಂಬಲ ನೌಕೆಗೆ ಅಬಿಯೋನಾ ಎಂದು ಹೆಸರಿಸಲಾಗಿದೆ. ಅಬಿಯೋನಾ ಹೆಲಿಕಾಪ್ಟರ್ ಡೆಕ್‌ನಿಂದ ಡೈವಿಂಗ್ ಡೆಕ್‌ವರೆಗೆ ಎಲ್ಲವನ್ನೂ ಹೊಂದಿದೆ.

ಇನ್ನು ಐಷಾರಾಮಿ ಯಾಚ್‌ನ ಮುಂಭಾಗದಲ್ಲಿ ಗರ್ಲ್‌ಫ್ರೆಂಡ್‌ ಲೌರೇನ್‌ ಸ್ಯಾಂಚೇಜ್‌ರ ದೇಹವನ್ನೇ ಹೋಲುವಂಥ ಡಿಸೈನ್‌ ಅನ್ನೂ ಮಾಡಲಾಗಿದೆ. 12 ಜನರು ಆರಾಮವಾಗಿ ಕುಳಿತುಕೊಂಡು ಊಟ ಮಾಡಲು ಸಾಧ್ಯವಾಗುವಂಥ ಐಷಾರಾಮಿ ಡೈನಿಂಗ್‌ ರೂಮ್‌ನ ವ್ಯವಸ್ಥೆ ಕೂಡ ಇದರಲ್ಲಿದೆ.  ಇನ್ನು ಈ ಯಾಚ್‌ಗೆ ಮೂರು ಪಟಸ್ತಂಭಗಳಿದ್ದು, 21 ನಾಟ್‌ ಮೈಲು ವೇಗದಲ್ಲಿ ಇದು ಸಾಗಬಲ್ಲುದು.

ಇನ್ನು ಬೆಂಬಲ ನೌಕೆಯಾಗಿರುವ ಅಬಿಯೋನಾದಲ್ಲಿ ಹೆಲಿಕಾಪ್ಟರ್‌ ಡೆಕ್‌ ಹಾಗೂ ಕಾರುಗಳನ್ನು ಪಾರ್ಕಿಂಗ್‌ ಮಾಡುವ ವ್ಯವಸ್ಥೆಗಳಿವೆ. ಇನ್ನು 59 ವರ್ಷದ ಜೆಸ್‌ ಬೆಜೋಸ್‌ ಹಾಗೂ 53 ವರ್ಷದ ಲೌರೇನ್ ಸ್ಯಾಂಚೇಜ್‌ ಹೆಲಿಕಾಪ್ಟರ್‌ ಮೂಲಕ ಈ ಯಾಚ್‌ಗೆ ತಲುಪಿದ್ದಾರೆ.

ಇನ್ನು ವಿಶ್ವದ ಅತ್ಯಂತ ದುಬಾರಿ ಯಾಚ್‌ಗಳ ವಿಚಾರಕ್ಕೆ ಬರುವುದಾದರೆ, ಬೆಜೋಸ್‌ರ ಯಾಚ್‌ 24ನೇ ಸ್ಥಾನದಲ್ಲಿದೆ. ಅಜಮ್‌ ಎನ್ನುವ ಯಾಚ್‌ ವಿಶ್ವದ ಅತ್ಯಂತ ದುಬಾರಿ ಯಾಚ್‌ ಅಗಿದ್ದು, ಇದರ ಉದ್ದ 592 ಫೀಟ್‌ ಆಗಿದೆ. ಇದರ ಅಂದಾಜು ವೆಚ್ಚ 5 ಸಾವಿರ ಕೋಟಿ ರೂಪಾಯಿ ಆಗಿದೆ. ಇನ್ನು ಬೆಜೋಸ್‌ರ ಯಾಚ್‌ನ ಉದ್ದ 417 ಫೀಟ್‌ ಆಗಿದೆ. ಇದರ ವೆಚ್ಚ 4 ಸಾವಿರ ಕೋಟಿ ರೂಪಾಯಿ.

ಗರ್ಲ್‌ಫ್ರೆಂಡ್‌ ಜತೆ ಎಂಗೇಜ್‌ ಆದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್; ಮಾಜಿ ಪತ್ನಿಗೆ ಕೊಟ್ಟ ಪರಿಹಾರ ಮೊತ್ತ ಇಲ್ಲಿದೆ..

ದೋಣಿ, ಹಡಗು ಮತ್ತು ವಿಹಾರ ನೌಕೆಗಳ ನಡುವಿನ ವ್ಯತ್ಯಾಸ: ತೇಲುವ ಸಾಮರ್ಥ್ಯವಿರುವ ಯಾವುದನ್ನಾದರೂ ದೋಣಿ ಎಂದು ಕರೆಯಬಹುದಾದರೂ, ಇದನ್ನು ಸಾಮಾನ್ಯವಾಗಿ ಸಣ್ಣ ಹಡಗುಗಳಿಗೆ ಬಳಸಲಾಗುತ್ತದೆ. ವಿಹಾರ ನೌಕೆಯ ಬಗ್ಗೆ ಮಾತನಾಡುವುದಾದರೆ, ಇದನ್ನು ಐಷಾರಾಮಿ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಸಾರಿಗೆಗಾಗಿ ಬಳಸಲಾಗುವುದಿಲ್ಲ. ಮತ್ತು ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ, ಹಡಗು ಜನರು ಅಥವಾ ಸರಕುಗಳ ಸಾಗಣೆಗೆ ಬಳಸುವ ದೊಡ್ಡ ದೋಣಿ ಎನ್ನಲಾಗುತ್ತದೆ.

ಕೆಲಸ ಕಳೆದುಕೊಂಡು ಕಣ್ಣೀರಾಕಿದ ಬೆಂಗಳೂರಿನ ಅಮೆಜಾನ್ ಉದ್ಯೋಗಿ

click me!