
Business Desk:ತೆರಿಗೆ ಪಾವತಿದಾರರಿಗೆ 2019-20ನೇ ಆರ್ಥಿಕ ಸಾಲಿನ (2020-21ನೇ ಮೌಲ್ಯಮಾಪನ ವರ್ಷ) ಆದಾಯ ತೆರಿಗೆ ರಿಟರ್ನ್(ITR) ದೃಢೀಕರಣ (verification) ಪೂರ್ಣಗೊಳಿಸಲು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT)ಕೊನೆಯ ಅವಕಾಶವೊಂದನ್ನು ನೀಡುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department) ತಿಳಿಸಿದೆ. ಹೌದು, 2020-21ನೇ ಮೌಲ್ಯಮಾಪನ (Assessment) ವರ್ಷದ ಆದಾಯ ತೆರಿಗೆ ರಿಟರ್ನ್ ದೃಢೀಕರಣಕ್ಕೆ ಫೆಬ್ರವರಿ 28 ಅಂತಿಮ ಗಡುವಾಗಿದೆ. ಹೀಗಾಗಿ ಇನ್ನೂ ಐಟಿಆರ್ ದೃಢೀಕರಣ ಮಾಡಿಲ್ಲದವರು ತಕ್ಷಣ ಈ ಕಾರ್ಯ ಪೂರ್ಣಗೊಳಿಸುವಂತೆ ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ಮನವಿ ಮಾಡಿದೆ.
ಆದಾಯ ತೆರಿಗೆ ಇಲಾಖೆಯ 2021ರ ಡಿಸೆಂಬರ್ 28ರ ಅಧಿಸೂಚನೆ ಪ್ರಕಾರ ಐಟಿಆರ್ -ವಿ ಸಲ್ಲಿಕೆಯಾಗದ ಅಥವಾ ಇ- ದೃಢೀಕರಣವಾಗದ (e-verification) ಕಳೆದ ಸಾಲಿನಲ್ಲಿ ಸಲ್ಲಿಕೆಯಾದ ಆದಾಯ ತೆರಿಗೆ ರಿಟರ್ನ್ ಗಳ ದೃಢೀಕರಣಕ್ಕೆ 2022ರ ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಒಮ್ಮೆ ಐಟಿಆರ್ ದೃಢೀಕರಣಗೊಂಡ್ರೆ, ತೆರಿಗೆ ಇಲಾಖೆ 2022 ಜೂನ್ 30ರೊಳಗೆ ತೆರಿಗೆ ಮರುಪಾವತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತದೆ ಎಂಬ ಮಾಹಿತಿಯನ್ನು ಕೂಡ ಈ ಅಧಿಸೂಚನೆ ಒಳಗೊಂಡಿದೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ಪಾವತಿದಾರ ಐಟಿಆರ್ ಸಲ್ಲಿಕೆ ಮಾಡಿದ 120 ದಿನಗಳೊಳಗೆ ಅದನ್ನು ದೃಢೀಕರಿಸಬೇಕು. ಒಂದು ವೇಳೆ ಐಟಿಆರ್ ಸಲ್ಲಿಕೆ ಮಾಡಿಯೂ ಅದನ್ನು ದೃಢೀಕರಿಸದಿದ್ರೆ ಆಗ ಅಂಥ ಐಟಿಆರ್ 'ಅಪೂರ್ಣ ರಿಟರ್ನ್' ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ, ಅಂಥ ಐಟಿಆರ್ ಗಳನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸದ ಪರಿಣಾಮ ನೀವು ಆ ವರ್ಷ ತೆರಿಗೆ ಪಾವತಿಸಿಲ್ಲವೆಂದೇ ದಾಖಲೆಗಳಲ್ಲಿ ನಮೂದಾಗುತ್ತದೆ. ಈ ಹಿಂದೆ ಐಟಿಆರ್ ದೃಢೀಕರಣಕ್ಕೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) 2021ರ ಡಿಸೆಂಬರ್ 31ರ ಗಡುವು ನೀಡಿತ್ತು. ಆದ್ರೆ ಐಟಿಆರ್ ಸಲ್ಲಿಕೆ ಗಡುವನ್ನು ಡಿಸೆಂಬರ್ 31ರ ತನಕ ವಿಸ್ತರಿಸಿದ ಹಿನ್ನೆಲೆಯಲ್ಲಿ ಐಟಿಆರ್ ದೃಢೀಕರಣದ ಕೊನೆಯ ದಿನಾಂಕವನ್ನು ಫೆಬ್ರವರಿ 28ಕ್ಕೆ ನಿಗದಿಪಡಿಸಿತ್ತು.
ಇ-ದೃಢೀಕರಣ ಅಗತ್ಯ
ಆದಾಯ ತೆರಿಗೆ ಕಾಯ್ದೆ(Income Tax Act) ಅನ್ವಯ ಡಿಜಿಟಲ್ ಸಹಿಯಿಲ್ಲದೆ (Digital signature) ಫೈಲ್ ಮಾಡಿರೋ ಆದಾಯ ತೆರಿಗೆ ರಿಟರ್ನ್ ಅನ್ನು ಆಧಾರ್ ಒಟಿಪಿ (Aadhaar OTP),ನೆಟ್ ಬ್ಯಾಂಕಿಂಗ್ ( net-banking),ಡಿಮ್ಯಾಟ್ ಖಾತೆ (demat account) ಮೂಲಕ ಕಳುಹಿಸೋ ಕೋಡ್, ಎಟಿಎಂ (ATM) ಹೀಗೆ ಈ ಯಾವುದಾದರೊಂದು ವಿಧಾನದ ಮೂಲಕ ಇ-ದೃಢೀಕರಣ ( e-verification) ನಡೆಸಬೇಕು. ಐಟಿಆರ್ ಸಲ್ಲಿಕೆ ಮಾಡಿದ 120 ದಿನಗೊಳಗೆ ಇ-ದೃಢೀಕರಣ ಮಾಡೋದು ಅಗತ್ಯ. ಆನ್ ಲೈನ್ (Online) ಮೂಲಕ ಐಟಿಆರ್ ಸಲ್ಲಿಕೆ ಮಾಡಿದ ಪ್ರತಿಯಲ್ಲಿ ಸಹಿ ಹಾಕಿ ಬೆಂಗಳೂರಿನ(Bengaluru) ಕೇಂದ್ರೀಯ ಪರಿಶೀಲನಾ ಕೇಂದ್ರಕ್ಕೆ (CPC) ಸ್ಪೀಡ್ ಪೋಸ್ಟ್ (Speed post) ಕಳುಹಿಸೋ ಮೂಲಕವೂ ದೃಢೀಕರಿಸಲು ಸಾಧ್ಯವಿದೆ. ಇ-ದೃಢೀಕರಣಗೊಳ್ಳದ ಐಟಿ ರಿಟರ್ನ್ ಗಳನ್ನು ಆದಾಯ ತೆರಿಗೆ ಇಲಾಖೆ (Incme Tax Department) ಪರಿಗಣಿಸೋದಿಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(CBDT)ನೀಡಿರೋ ಮಾಹಿತಿ ಪ್ರಕಾರ 2019-20ನೇ ಆರ್ಥಿಕ ಸಾಲಿನಲ್ಲಿ (2020-21ನೇ ಅಂದಾಜು ವರ್ಷ) ಆನ್ ಲೈನ್ ಮೂಲಕ ಸಲ್ಲಿಕೆಯಾಗಿರೋ ಅನೇಕ ಐಟಿಆರ್ ಗಳ ಇ-ದೃಢೀಕರಣ ( e-verification) ಇನ್ನೂ ನಡೆದಿಲ್ಲ.
Russia Ukrain Crisis: ರಷ್ಯಾ ವಿರುದ್ಧ ಪೂರ್ಣ ಆರ್ಥಿಕ ದಿಗ್ಭಂದನಕ್ಕೆ ಹೆಚ್ಚಿದ ಕೂಗು
ಆದಾಯ ತೆರಿಗೆ ಮರುಪಾವತಿ
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) 2021ರ ಏಪ್ರಿಲ್ 1ರಿಂದ 2022ರ ಫೆಬ್ರವರಿ 21ರ ತನಕ 2.07 ಕೋಟಿ ತೆರಿಗೆದಾರರಿಗೆ ಸುಮಾರು 1,82,995 ಕೋಟಿ ರೂ. ಮರುಪಾವತಿ ಮಾಡಿದೆ. 2,04,44,820 ಪ್ರಕರಣಗಳಲ್ಲಿ 65,498 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ. 2,30,112 ಪ್ರಕರಣಗಳಲ್ಲಿ 1,17,498 ಕೋಟಿ ರೂ. ಕಾರ್ಪೋರೇಟ್ ತೆರಿಗೆ ಮರುಪಾವತಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.