ಎಫ್ ಡಿ ಮೇಲಿನ ಬಡ್ಡಿಗೆ ಎಷ್ಟು ಟಿಡಿಎಸ್ ಕಡಿತವಾಗುತ್ತೆ?ಇಲ್ಲಿದೆ ಮಾಹಿತಿ

By Suvarna News  |  First Published Feb 24, 2023, 2:25 PM IST

ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ವಿವಿಧ ಸ್ಥಿರ ಠೇವಣಿ (ಎಫ್ ಡಿ) ಯೋಜನೆಗಳಿವೆ. ಈ ಎಫ್ ಡಿ ಮೇಲಿನ ಬಡ್ಡಿದರಕ್ಕೂ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಹಾಗಾದ್ರೆ ವಾರ್ಷಿಕ ಬಡ್ಡಿ ಮೊತ್ತ ಎಷ್ಟಿದ್ರೆ ಟಿಡಿಎಸ್ ಕಡಿತವಾಗುತ್ತದೆ? ಎಷ್ಟು ಮೊತ್ತದ ಟಿಡಿಎಸ್ ಕಡಿತಗೊಳಿಸಲಾಗುತ್ತದೆ? ಇಲ್ಲಿದೆ ಮಾಹಿತಿ. 
 


Business Desk:ಭಾರತದ ತೆರಿಗೆ ವ್ಯವಸ್ಥೆ ಸಮಯ ಹಾಗೂ ದೇಶದ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಇದೇ ಕಾರಣಕ್ಕೆ ಭಾರತದ ತೆರಿಗೆ ವ್ಯವಸ್ಥೆ ತುಂಬಾ ಕ್ಲಿಷ್ಟಕರವಾಗಿದೆ ಎಂಬ ಅಭಿಪ್ರಾಯವೂ ಇದೆ. ಅದೇನೇ ಇರಲಿ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರದ ವಿವಿಧ ಯೋಜನೆಗಳು ನಿಂತಿರೋದೇ ತೆರಿಗೆ ಮೇಲೆ. ಮೂಲಸೌಕರ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರ ಬಳಸೋದು ತೆರಿಗೆ ಹಣವನ್ನೇ. ಹೀಗಾಗಿ ಭಾರತದಲ್ಲಿ ತೆರಿಗೆ ಅನ್ನೋದು ಸರ್ಕಾರದ ಪಾಲಿಗೆ ಬಹುಮುಖ್ಯ ಆದಾಯದ ಮೂಲ. ಆದಾಯ ತೆರಿಗೆ, ಮಾರಾಟ ತೆರಿಗೆ, ಆಸ್ತಿ ತೆರಿಗೆ ಇತ್ಯಾದಿ ಸೇರಿದಂತೆ ಸರ್ಕಾರ ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸುತ್ತದೆ. ಹೀಗಾಗಿ ನಾವು ಉಳಿತಾಯ ಅಥವಾ ಹೂಡಿಕೆ ಮಾಡುವಾಗ ತೆರಿಗೆ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸ್ಥಿರ ಠೇವಣಿ ಮೇಲಿನ ಬಡ್ಡಿ ಹಣಕ್ಕೂ ತೆರಿಗೆ ಇದೆ ಎಂಬುದು ನಿಮಗೆ ಗೊತ್ತಾ? ನೀವು ಹಿರಿಯ ನಾಗರಿಕರು ಅಲ್ಲದಿದ್ರೆ ಹಾಗೂ ನಿಮ್ಮ ಎಫ್ ಡಿ ಮೇಲಿನ ಬಡ್ಡಿದರ 40,000 ರೂ. ಮೀರಿದ್ರೆ ಆಗ ನೀವು ತೆರಿಗೆ ಕಟ್ಟೋದು ಅಗತ್ಯ.

ಆದಾಯ ತೆರಿಗೆ ಕಾಯ್ದೆ 1961 ಅನ್ವಯ ನಿರ್ದಿಷ್ಟ ಸೇವೆಗಳಿಗೆ ಮಾಡಿದ ಪಾವತಿಗಳ ಮೇಲೆ ಕೆಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಟಿಡಿಎಸ್ (TDS)ಕಡಿತಗೊಳಿಸಿ ಇಟ್ಟುಕೊಂಡಿರಬೇಕು. ಉದಾಹರಣೆಗೆ ಬಾಡಿಗೆ, ವೃತ್ತಿ ವೆಚ್ಚಗಳು, ಕಾಂಟ್ರ್ಯಾಕ್ಟ್ ಪಾವತಿಗಳು, ಕಮೀಷನ್ ಗಳು ಹಾಗೂ ರಾಯಲ್ಟಿ ಪಾವತಿಗಳ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಹಾಗೆಯೇ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿನ ಕೆಲವೊಂದು ಹೂಡಿಕೆಗಳಿಗೆ ಉದಾಹರಣೆಗೆ ಸ್ಥಿರ ಠೇವಣಿಗಳು (FDs) ಹಾಗೂ ಇತರ ಕೆಲವು ಠೇವಣಿಗಳು ಕೂಡ ಟಿಡಿಎಸ್ ಗೊಳಪಡುತ್ತವೆ. 

Tap to resize

Latest Videos

ವಕೀಲರು, ಬ್ಯೂಟಿಷಿಯನ್‌ಗಳು ತೆರಿಗೆ ವಂಚಿಸಿದ್ರೆ 1.5 ಪಟ್ಟು ದಂಡ

ಬ್ಯಾಂಕ್ ಗಳು ನೀವು ಹಿರಿಯ ನಾಗರಿಕರಲ್ಲದಿದ್ರೆ ನಿಮ್ಮ ಎಫ್ ಡಿ ಹಾಗೂ ಇತರ ಠೇವಣಿಗಳ ಬಡ್ಡಿ ಮೊತ್ತ  40,000ರೂ. ಮೀರಿದ್ರೆ ಟಿಡಿಎಸ್ (TDS)ಕಡಿತಗೊಳಿಸುತ್ತವೆ. ಹಿರಿಯ ನಾಗರಿಕರಿಗೆ ಎಫ್ ಡಿ ಮೇಲಿನ ಬಡ್ಡಿದರ 50 ಸಾವಿರ ರೂ. ದಾಟಿದ್ರೆ ಆಗ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಇನ್ನು ಟಿಡಿಎಸ್ ಅನ್ನು ನಿಮ್ಮ ಎಫ್ ಡಿ ಮೆಚ್ಯೂರ್ ಆದಾಗ ಕಡಿತಗೊಳಿಸೋದಿಲ್ಲ. ಬದಲಿಗೆ ನಿಮ್ಮ ಎಫ್ ಡಿಗೆ ಆದಾಯ ಕ್ರೆಡಿಟ್ ಆದ ತಕ್ಷಣ ಕಡಿತಗೊಳಿಸಲಾಗುತ್ತದೆ. ಹೀಗಾಗಿ ನೀವು 3 ಅಥವಾ 5 ವರ್ಷಗಳ ಅವಧಿಯ ಎಫ್ ಡಿ ಹೊಂದಿದ್ದರೂ ಪ್ರತಿ ವರ್ಷ ಬ್ಯಾಂಕ್ ಬಡ್ಡಿ ಹಣವನ್ನು ನಿಮ್ಮ ಖಾತೆಗೆ ಕ್ರೆಡಿಟ್ ಮಾಡುವಾಗ ಟಿಡಿಎಸ್ ಕಡಿತಗೊಳಿಸುತ್ತದೆ. 

ಒಂದು ವೇಳೆ ನಿಮ್ಮ ಆದಾಯ ವಾರ್ಷಿಕ 3ಲಕ್ಷ ರೂ.ಗಿಂತ ಕಡಿಮೆಯಿದ್ರೆ ಆಗ ನಿಮ್ಮ ಆದಾಯದಿಂದ ಟಿಡಿಎಸ್ (TDS)ಕಡಿತ ಮಾಡುವುದಿಲ್ಲ. ಆದರೆ, ನೀವು ಅರ್ಜಿ ನಮೂನೆ 15G ಅಥವಾ 15H ಭರ್ತಿ ಮಾಡಬೇಕು. ಹಾಗೆಯೇ ಎಫ್ ಡಿ ಮೇಲಿನ ಬಡ್ಡಿ ಗಳಿಕೆ ವಾರ್ಷಿಕ 40,000ರೂ.ಗಿಂತ ಕಡಿಮೆಯಿದ್ದರೂ ಕೂಡ ಟಿಡಿಎಸ್ ಕಡಿತಗೊಳಿಸೋದಿಲ್ಲ. ಒಂದು ವೇಳೆ 40,000ರೂ.ಗಿಂತ ಹೆಚ್ಚಿದ್ರೆ ಶೇ.10ರಷ್ಟು ಟಿಡಿಎಸ್ ಕಡಿತಗೊಳಿಸುತ್ತದೆ. ಇನ್ನು ಒಂದು ವೇಳೆ ನೀವು ಬ್ಯಾಂಕಿಗೆ ಪ್ಯಾನ್ ಕಾರ್ಡ್ ಅಥವಾ ಕೆವೈಸಿ ಸಲ್ಲಿಕೆ ಮಾಡದಿದ್ರೆ ಆಗ ಶೇ.20 ಟಿಡಿಎಸ್ ಕಡಿತಗೊಳಿಸಲಾಗುತ್ತದೆ. 

FD ಬಡ್ಡಿದರ ಹೆಚ್ಚಿಸಿದ ಎಚ್ ಡಿಎಫ್ ಸಿ ಬ್ಯಾಂಕ್; ಹಿರಿಯ ನಾಗರಿಕರ ಠೇವಣಿಗಳಿಗೆ ಶೇ.7.75 ಬಡ್ಡಿ

ಟಿಡಿಎಸ್ ಅಂದ್ರೇನು?
ಟಿಡಿಎಸ್ (TDS) ಅಂದ್ರೆ 'ಮೂಲದಲ್ಲಿ ತೆರಿಗೆ ಕಡಿತ'. ಒಬ್ಬ ವ್ಯಕ್ತಿಗೆ ಆದಾಯ ಉತ್ಪಾದನೆಯಾಗುವ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಟಿಡಿಎಸ್ ಪರಿಚಯಿಸಲಾಯಿತು. ತೆರಿಗೆ ವಂಚನೆಯನ್ನು ಕಡಿಮೆಗೊಳಿಸಲು ಆದಾಯದ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಸರ್ಕಾರ ಟಿಡಿಎಸ್ ಅನ್ನು ಬಳಸಿಕೊಳ್ಳುತ್ತಿದೆ. ವೇತನ, ಬಡ್ಡಿ, ಕಮೀಷನ್ ಗಳು, ಡಿವಿಡೆಂಡ್ಸ್ ಸೇರಿದತೆ ವಿವಿಧ ಆದಾಯಗಳ ಮೇಲೆ ಸರ್ಕಾರ ಟಿಡಿಎಸ್ ವಿಧಿಸುತ್ತದೆ. 
 

click me!