
ಟೆಹರನ್(ಡಿ.08): ಇತರ ದೇಶಗಳ ಮೇಲೆ ಅಮೆರಿಕ ಹೇರುತ್ತಿರುವ ಆರ್ಥಿಕ ದಿಗ್ಬಂಧನಗಳನ್ನು 'ಆರ್ಥಿಕ ಭಯೋತ್ಪಾದನೆ' ಎಂದು ಇರಾನ್ ಅಧ್ಯಕ್ಷ ಹಸನ್ ರೋಹಾನಿ ಬಣ್ಣಿಸಿದ್ದಾರೆ.
ಅಮೆರಿಕದ ಈ ಆರ್ಥಿಕ ಭಯೋತ್ಪಾದನೆಯ ವಿರುದ್ಧ ಪ್ರಾದೇಶಿಕ ಶಕ್ತಿಗಳು ಒಗ್ಗೂಡಿ ಹೋರಾಡಬೇಕು ಎಂದು ಇದೇ ವೇಳೆ ರೋಹಾನಿ ಕರೆ ನೀಡಿದ್ದಾರೆ.
ಅಫ್ಘಾನಿಸ್ತಾನ, ಚೀನಾ, ಪಾಕಿಸ್ತಾನ, ರಷ್ಯಾ ಮತ್ತು ಟರ್ಕಿಯ ಸಂಸದರು ಪಾಲ್ಗೊಂಡ 'ಭಯೋತ್ಪಾದನೆ ಮತ್ತು ಪ್ರಾದೇಶಿಕ ಸಹಕಾರ' ಕುರಿತ ಸಮ್ಮೇಳನ ಉದ್ದೇಶಿಸಿ ಇರಾನ್ ಅಧ್ಯಕ್ಷರು ಮಾತನಾಡಿದರು.
ಇರಾನ್ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನ ಅನ್ಯಾಯ ಮತ್ತು ಅಕ್ರಮ ಎಂದು ರೋಹಾನಿ ಜರೆದಿದ್ದು, ಇದು ನಮ್ಮ ದೇಶದ ಮೇಲೆ ನಡೆಸುತ್ತಿರುವ ಭಯೋತ್ಪಾದನೆಗೆ ಸ್ಪಷ್ಟ ನಿದರ್ಶನ ಎಂದು ಹರಿಹಾಯ್ದಿದ್ದಾರೆ.
ಇರಾನ್ ಮೇಲೆ ದಿಗ್ಬಂಧನ ಹೇರುವ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ, ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಲಾಭಗಳನ್ನು ನಮಗೆ ನಿರಾಕರಿಸಲಾಗುತ್ತಿದೆ. ವಾಸ್ತವದಲ್ಲಿ ಅಮೆರಿಕ ಎಲ್ಲರ ಮೇಲೂ ದಿಗ್ಬಂಧನ ಹೇರುತ್ತಿದೆ ಎಂದು ರೋಹಾನಿ ಆರೋಪಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.