Global Investors Meet 2022: ಅಭಿವೃದ್ಧಿಗೆ ‘ಇನ್ವೆಸ್ಟ್‌’ ಭದ್ರ ಬುನಾದಿ: ನಿರಾಣಿ

By Kannadaprabha News  |  First Published Nov 5, 2022, 9:00 AM IST

ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ, ಹೂಡಿಕೆ ಸಮಾವೇಶ ಯಶಸ್ಸಿಗೆ ಸಂತಸ, ಬೆಂಗಳೂರಿನ ಆಚೆ ಹೋಗಲಿವೆ ಉದ್ದಿಮೆ, ಇನ್ನು 5 ವರ್ಷದಲ್ಲಿ ಭಾರೀ ಪ್ರಗತಿ


ಬೆಂಗಳೂರು(ನ.05):  ಜಾಗತಿಕ ಹೂಡಿಕೆದಾರರ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ‘ಇನ್ವೆಸ್ಟ್‌ ಕರ್ನಾಟಕ’ ಸಮಾವೇಶವು ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ಸದೃಢ ಬುನಾದಿ ಹಾಕಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಹೇಳಿದ್ದಾರೆ.

‘ಇನ್ವೆಸ್ಟ್‌ ಕರ್ನಾಟಕ’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಿಧ ವಲಯಗಳಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ. 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹರಿದುಬಂದಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಬೆಂಗಳೂರಿನ ಆಚೆಗೆ ಕೈಗಾರಿಕೆಗಳನ್ನು ವಿಸ್ತರಿಸಬೇಕು ಎಂಬ ಸರ್ಕಾರದ ಚಿಂತನೆಗೆ ಪೂರಕವಾಗಿ ಶೇ.70 ರಷ್ಟುಹೂಡಿಕೆ ಬೆಂಗಳೂರೇತರ ಪ್ರದೇಶಗಳಿಗೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

Tap to resize

Latest Videos

GLOBAL INVESTORS MEET 2022: ಕುಲಕರ್ಣಿ, ಗೌಡ, ಪಾಟೀಲರು ಉದ್ಯಮಿ ಆಗ್ಬೇಕು: ಸಿಎಂ ಬೊಮ್ಮಾಯಿ

‘ಪ್ರಸ್ತುತ ಮಾಡಿಕೊಂಡಿರುವ ಹೂಡಿಕೆ ಒಡಂಬಡಿಕೆಗಳನ್ನು ಏಕ ಗವಾಕ್ಷಿ ವ್ಯವಸ್ಥೆ ಹಾಗೂ ಉನ್ನತ ಮಟ್ಟದ ಸಮಿತಿಗಳ ಮೂಲಕ ಅನುಮೋದಿಸಿದ್ದೇವೆ. ಹೀಗಾಗಿ ಹೂಡಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಈ ಸಮಾವೇಶ ಯಶಸ್ವಿಯ ಉತ್ಸಾಹದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2025ರ ಹೂಡಿಕೆದಾರರ ಸಮಾವೇಶವನ್ನೂ ಘೋಷಿಸಿದ್ದಾರೆ. 2025ರ ಜನವರಿಯಲ್ಲಿ ಮುಂದಿನ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ದಿನಾಂಕವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುತ್ತೇವೆ’ ಎಂದರು.

ಹಸಿರು ಇಂಧನ ಉತ್ಪಾದನೆ ಹೆಚ್ಚಳ:

ಇಂಧನ ಸಚಿವ ವಿ. ಸುನೀಲ್‌ಕುಮಾರ್‌ ಮಾತನಾಡಿ, ಹಸಿರು ಇಂಧನ ಉತ್ಪಾದನೆಯಲ್ಲಿ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯ ಮುಂದೆ ಇದೆ. 2030ರ ವೇಳೆಗೆ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ.50 ರಷ್ಟುಹಸಿರು ಇಂಧನ ಆಗಿರಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯದಲ್ಲಿರುವ 30 ಸಾವಿರ ಮೆ.ವ್ಯಾಟ್‌ ಉತ್ಪಾದನೆ ಸಾಮರ್ಥ್ಯದಲ್ಲಿ 15,800 ಮೆ.ವ್ಯಾಟ್‌ ಹಸಿರು ಇಂಧನ. ಇದನ್ನು ಮತ್ತಷ್ಟುಹೆಚ್ಚಳ ಮಾಡಲು ಹೈಬ್ರಿಡ್‌ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಪ್ರಸ್ತುತ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 2 ಲಕ್ಷ ಕೋಟಿ ರು. ಹಸಿರು ಇಂಧನ ವಲಯದಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಪೂರಕವಾಗಿ ಗ್ರಿಡ್‌ ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಆದರೂ, ಸಮರ್ಥವಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದರು.

Invest Karnataka; ರಾಜ್ಯದಲ್ಲಿ 10 ಲಕ್ಷ ಕೋಟಿಗೂ ಅಧಿಕ ಹೂಡಿಕೆಗೆ ಮುಂದಾದ ವಿಶ್ವ ಉದ್ಯಮಿಗಳು

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮಾತನಾಡಿ, ಪ್ರತಿಯೊಂದು ಒಡಂಬಡಿಕೆಯನ್ನೂ ಸಹ ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ. ಉದ್ಯಮಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ಜತೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಆಡಳಿತ ಸಿದ್ಧವಿದೆ ಎಂದು ಹೇಳಿದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಡಾ.ಇ.ವಿ. ರಮಣರೆಡ್ಡಿ, ಜಿ. ಕುಮಾರನಾಯಕ್‌, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರಾದ ಗುಂಜನ್‌ ಕೃಷ್ಣ, ಉದ್ಯಮಿಗಳಾದ ವಿನಿತ್‌ ಮಿತ್ತಲ್‌, ನರಸಿಂಹಮೂರ್ತಿ, ಉಲ್ಲಾಸ್‌ ಕಾಮತ್‌ ಸೇರಿ ಹಲವರು ಹಾಜರಿದ್ದರು.
 

click me!