ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕದ ಸಾಧನೆಯನ್ನು ಬಹುವಾಗಿ ಮೆಚ್ಚಿಕೊಂಡರು. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ರಾಜ್ಯವೇ ಮುಂದಿದೆ ಎಂದು ಈ ವೇಳೆ ಹೇಳಿದರು.
ಬೆಂಗಳೂರು (ನ.2): ಜಾಗತಿಕ ಹೂಡಿಕೆದಾರರ ಸಮಾವೇಶದ ಮೊದಲ ದಿನ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯೋಗಸೃಷ್ಟಿಯಲ್ಲಿ ಕರ್ನಾಟಕದ ಪಾತ್ರವನ್ನು ಹೊಗಳಿದರು. ಇಂದು ದೇಶದಲಲ್ಲಿಯೇ ಗರಿಷ್ಠ ಉದ್ಯೋಗ ಸೃಷ್ಟಿಯನ್ನು ಯಾವುದಾದರೂ ರಾಜ್ಯ ಮಾಡುತ್ತಿದೆ ಎಂದಿದ್ದರೆ, ಅದು ಕರ್ನಾಟಕ ಮಾತ್ರ. ಉದ್ಯೋಗಸೃಷ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನಲ್ಲಿದೆ. ಕರ್ನಾಟಕದ ಯುವ ಪ್ರತಿಭೆಗಳು ಸಾಕಷ್ಟು ಸಾಮರ್ಥ್ಯ ಹೊಂದಿದ್ದಾರೆ. ದೇಶದ 10% ಉದ್ಯೋಗ ಕರ್ನಾಟಕದಲ್ಲಿ ಸೃಷ್ಟಿಯಾಗುತ್ತಿದೆ. ಅಮೃತಕಾಲದ ಸಮಯದಲ್ಲಿ ಕರ್ನಾಟಕ ಭಾರತದ ಅತಿದೊಡ್ಡ ಅಡಿಪಾಯವಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ವರ್ಚುವಲ್ ಆಗಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ನೀಡುತ್ತಿರುವ ಕೊಡುಗೆಗಳ ಬಗ್ಗೆ ಶ್ಲಾಘನೆ ಮಾಡಿದರು.
ಕೋವಿಡ್, ಉಕ್ರೇನ್ ಯುದ್ದದ ಸಮಯದಲ್ಲಿ ಪ್ರಧಾನಿ ಮೋದಿ ದೇಶದ ಅರ್ಥಿಕತೆಯನ್ನು ಸೂಕ್ಷ್ಮವಾಗಿ ಮುನ್ನಡೆಸಿದ್ದಾರೆ. ಎಂಎಸ್‌ಎಂಇ, ಎಸ್‌ಇಜಡ್ ವಲಯಗಳಲ್ಲಿ ಪೂರಕವಾಗುವಂತೆ ಕ್ರಮ ತೆಗೆದುಕೊಂಡಿದ್ದಾರೆ. ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೆ, ಭಾರತದ ಬಗ್ಗೆ ವಿದೇಶದಲ್ಲಿ ಉತ್ತಮ ಅಭಿಪ್ರಾಯವಿದೆ. ಭಾರತದ ಆರ್ಥಿಕ ಸಾಮರ್ಥ್ಯ ಸಫಲತೆಯನ್ನು ಕಂಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಕೂಡ ಭಾರತದ ನೀತಿ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಸಾಧಿಸಿದೆ. ಈ ಸಮಾವೇಶದಲ್ಲೇ 50% ಕ್ಕಿಂತ ಹೆಚ್ಚುMOU ಕ್ಲಿಯರೆನ್ಸ್ ಪಡೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Invest Karnataka 2022: ಕೋವಿಡ್ ಕಾಲದಲ್ಲಿ ಕರ್ನಾಟಕದ ಕೆಲಸಕ್ಕೆ ರಾಜೀವ್ ಚಂದ್ರಶೇಖರ್ ಮೆಚ್ಚುಗೆ
ಗ್ರೀನ್ ಅಮೋನಿಯಾ, ಇಂಡಸ್ಟ್ರಿಯಲ್ ಕಾರಿಡರ್, ಬಂದರು ನಿರ್ಮಾಣ ಕ್ಷೇತ್ರಗಳಲ್ಲಿ ಕರ್ನಾಟಕ ವೇಗವಾಗಿ ಕೆಲಸ ಮಾಡುತ್ತಿದೆ. ಹಳೆಯ ಪದ್ದತಿಗಳ ಜೊತೆಗೆ ಹೊಸ ನಿಯಮಗಳ ಮೂಲಕ ಕರ್ನಾಟಕ ಯಶಸ್ಸು ಗಳಿಸುತ್ತಿದೆ. ಕರ್ನಾಟಕದ ಐಟಿ ಪಾಲಿಸಿ 2025 ಉತ್ತಮ ನಿಯಮಾವಳಿ. ಮಂಗಳೂರು, ಮೈಸೂರು, ತುಮಕೂರು, ಕಲಬುರಗಿ, ಉಡುಪಿ ಜಿಲ್ಲೆಗಳಲ್ಲಿ ಐಟಿ ಕ್ಲಸ್ಟರ್ ನಿರ್ಮಾಣ ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದ ಅವರು, ಬಿಯಾಂಡ್ ಬೆಂಗಳೂರು ಅಡಿ 2ನೇ ಹಂತದ ನಗರಗಳ ಅಭಿವೃದ್ಧಿ ಆಗುತ್ತಿದೆ ಎಂದರು. ಇಂದು ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕವೇ ಲೀಡರ್ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಐಟಿ ರಫ್ತು, ಎಲೆಕ್ಟ್ರಾನಿಕ್ ಡಿಸೈನ್ಸ್, ಆರ್ ಆಂಡ್ ಡಿ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.
Global Investors Meet: ಕರ್ನಾಟಕದ ನೆಲ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತಮ: ಪ್ರಧಾನಿ ಮೋದಿ
7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ: ಕೋವಿಡ್ ನಂತರ ಯಾವುದಾದರೂ ರಾಜ್ಯ ಈ ರೀತಿ ಇನ್ವೆಸ್ಟ್ ಸಮಾವೇಶ ಮಾಡಿದೆ ಅಂದ್ರೆ ಅದು ಕರ್ನಾಟಕ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ. ನಾವು ಇನ್ನೊಬ್ಬರ ಮೇಲೆ ವಿಶ್ವಾಸ ಇಡೋದಕ್ಕಿಂತ ನಮ್ಮ ಮೇಲೆ ನಾವು ವಿಶ್ವಾಸವಿಡಬೇಕು. ಇದು ನಮ್ಮ ಶಕ್ತಿ ಇದು ನಮ್ಮ ವಿಷನ್. ಕೋವಿಡ್ ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಬೆಳವಣಿಗೆಯಾಗಿದೆ. 13 ಸಾವಿರ ಕೋಟಿ ನಾವು ತೆರಿಗೆ ಸಂಗ್ರಹ ಮಾಡಿದ್ದೇವೆ. ಕೋವಿಡ್ ಮಧ್ಯೆಯೂ ಇಷ್ಟು ಪ್ರಮಾಣದ ತೆರಿಗೆ ಸಂಗ್ರಹ ಮಾಡಿದ್ದೇವೆ. ಜಿಎಸ್ ಟಿ ಕಲೆಕ್ಟ್ ಕಲೆಕ್ಷನ್‌ನಲ್ಲೂ ನಾವು ಮುಂದಿದ್ದೇವೆ. ದೇಶದಲ್ಲಿಯೇ ಗರಿಷ್ಠ ಜಿಎಸ್‌ಟಿ ಕಲೆಕ್ಷನ್ ಆಗುವ ಪೈಕಿ 2ನೇ ರಾಜ್ಯ ನಮ್ಮದು. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಖುಷಿ ಪಟ್ಟಿದ್ದಾರೆ. ಆರ್‌ಎನ್‌ಡಿ ಪಾಲಿಸಿಯಲ್ಲೂ ನಾವು ಮುಂದಿದ್ದೇವೆ ಎಂದು ಹೇಳಿದರು.