
ಬೆಂಗಳೂರು (ಮೇ 30): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ-ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ-ಎಂಆರ್‌ಓ (Maintenance, Repair, and Overhaul- MRO) ಸೌಲಭ್ಯ ಆರಂಭಿಸಲು ₹1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ.
ಇಂಡಿಗೊ-ದ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, 'ಅತ್ಯಾಧುನಿಕ ಎಂಆರ್‌ಒ ಸೌಲಭ್ಯಕ್ಕೆ ಇಂಡಿಗೊ ಮಾಡಲಿರುವ ಬಂಡವಾಳ ಹೂಡಿಕೆಯು, ಕರ್ನಾಟಕವನ್ನು ಏಷ್ಯಾದ 'ಎಂಆರ್‌ಒ' ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಬಲಪಡಿಸಲಿದೆ. ಈ ಉಪಕ್ರಮವು ರಾಜ್ಯದಲ್ಲಿ ಉನ್ನತ ಗುಣಮಟ್ಟದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿರುವ ಜೊತೆಗೆ ಬೆಂಗಳೂರಿನಲ್ಲಿ ಜಾಗತಿಕ ಸ್ಪರ್ಧಾತ್ಮಕ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ' ಎಂದು ಹೇಳಿದ್ದಾರೆ.
ಈ ಎಂಆರ್‌ಒ ಘಟಕ ನಿರ್ಮಾಣದಿಂದ 'ಬೆಂಗಳೂರು ಏಷ್ಯಾದ ಎಂಆರ್‌ಒ ಕೇಂದ್ರ'ವಾಗಿ ಬೆಳೆಯಲಿದೆ. ಕರ್ನಾಟಕವು ಈಗ ವಿಮಾನಯಾನ ಮೂಲಸೌಲಭ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ನಾಯಕ ಎಂಬ ಪಾತ್ರಕ್ಕೆ ಭಾಜನವಾಗಲಿದೆ. ಕೈಗಾರಿಕಾ ಬೆಳವಣಿಗೆ ಮತ್ತು ಗರಿಷ್ಠ ಪರಿಣತಿಯ ಉದ್ಯೋಗ ಸೃಷ್ಟಿಗೆ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಲಿದೆ. ವೈಮಾಂತರಿಕ್ಷ ವಲಯದ ಅಭಿವೃದ್ಧಿ ಮತ್ತು ವಿಮಾನಯಾನ ಕ್ಷೇತ್ರದ ತಯಾರಿಕೆಗೆ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಬದ್ಧವಾಗಿದೆʼ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ 31 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಇಂಡಿಗೊದ 'ಎಂಆರ್‌ಒ' ಸೌಲಭ್ಯವು ಮೂಲಸೌಲಭ್ಯ, ಯಂತ್ರೋಪಕರಣ, ಘಟಕ ನಿರ್ಮಾಣ ಮತ್ತಿತರ ಉದ್ದೇಶಗಳಿಗೆ ₹ 1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದರು.
ಎಂಆರ್‌ಒ ಸೌಲಭ್ಯದಲ್ಲಿ ಲಭ್ಯ ಇರಲಿರುವ ಅನುಕೂಲತೆಗಳು:
ಈ ಎಂಆರ್‌ಒ ಸೌಲಭ್ಯವು ಜಾಗತಿಕ ವಿಮಾನಯಾನ ಕೇಂದ್ರವಾಗಿ ಬೆಂಗಳೂರಿನ ಸ್ಥಾನಮಾನ ಹೆಚ್ಚಿಸಲಿದ್ದು, ದೇಶದ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಬಲಪಡಿಸಲಿದೆ. ಈ ಯೋಜನೆಯು ಎಂಜಿನಿಯರಿಂಗ್, ಸರಕು ಸಾಗಣೆ, ಉಗ್ರಾಣ ಮತ್ತು ಪೂರಕ ಸೇವಾಕ್ಷೇತ್ರಗಳಲ್ಲಿ 750 ನೇರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. 2031ರ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು 1,300 ಕ್ಕೆ ಹೆಚ್ಚಿಸಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಈ ಸೌಲಭ್ಯವು ಜಾಗತಿಕ ಪ್ರಮುಖ ಮೂಲ ಸಲಕರಣೆ ತಯಾರಿಕಾ (ಒಇಎಂ) ಕಂಪನಿಗಳು, ಪೂರೈಕೆದಾರರನ್ನು ಆಕರ್ಷಿಸಲಿದ್ದು, ಪೂರಕ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ.
ಏರ್ ಇಂಡಿಯಾ, ಟಿಎಎಸ್‌ಎಲ್, ಎಚ್‌ಎಎಲ್ - ಎಂಆರ್‌ಒ ಸೌಲಭ್ಯಗಳ ಸಾಲಿಗೆ ಈಗ ಇಂಡಿಗೊ ಸೇರ್ಪಡೆಯು ವಿಮಾನಯಾನ ಕ್ಷೇತ್ರದಲ್ಲಿನ ನಾವೀನ್ಯತೆ, ತಯಾರಿಕೆ ಮತ್ತು ನಿರ್ವಹಣೆ ವಲಯಗಳಲ್ಲಿ ಕರ್ನಾಟಕವನ್ನು ಏಷ್ಯಾದಲ್ಲಿಯೇ ಆದ್ಯತಾ ತಾಣವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.