ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಹಣ 20,700 ಕೋಟಿಗೆ ಏರಿಕೆ

By Kannadaprabha NewsFirst Published Jun 18, 2021, 9:59 AM IST
Highlights
  • ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಮೊತ್ತ 20700 ಕೋಟಿ ರು.ಗೆ ಏರಿಕೆ
  • ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿರುವ ವಾರ್ಷಿಕ ವರದಿ
  • ಸೆಕ್ಯುರಿಟೀಸ್‌ ಮತ್ತು ಅದೇ ರೀತಿಯ ಇತರೆ ಮಾದರಿಯ ಹೂಡಿಕೆ

ನವದೆಹಲಿ/ಜ್ಯೂರಿಚ್‌ (ಜೂ.18): ಭಾರತೀಯರು ವೈಯಕ್ತಿಕವಾಗಿ ಮತ್ತು ಸಂಸ್ಥೆಗಳ ಮೂಲಕ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಮೊತ್ತ 20700 ಕೋಟಿ ರು.ಗೆ ಏರಿಕೆಯಾಗಿದೆ. ಇದರಲ್ಲಿ ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ ಖಾತೆಗಳಲ್ಲಿ ಇಟ್ಟಿರುವ ಹಣವೂ ಸೇರಿದೆ ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಸೆಕ್ಯುರಿಟೀಸ್‌ ಮತ್ತು ಅದೇ ರೀತಿಯ ಇತರೆ ಮಾದರಿಯ ಹೂಡಿಕೆಗಳಲ್ಲಿನ ಏರಿಕೆಯಿಂದಾಗಿ ಒಟ್ಟಾರೆ ಮೊತ್ತದಲ್ಲಿ ಏರಿಕೆಯಾಗಿದೆ. ಒಟ್ಟಾರೆಯಾಗಿ ನೋಡಿದರೆ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಈ ಹಣದ ಮೊತ್ತ ಕಳೆದ 13 ವರ್ಷಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಆದರೆ ವೈಯಕ್ತಿಕವಾಗಿ ಇಟ್ಟಿರುವ ಮೊತ್ತದಲ್ಲಿ ಇಳಿಕೆಯಾಗಿದೆ.

ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ WazirXಗೆ ಇಡಿ ಶೋಕಾಸ್ ನೋಟಿಸ್ ...

ಆದರೆ ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು, ಬೇರೆ ದೇಶಗಳ ಸಂಸ್ಥೆಗಳ ಹೆಸರಲ್ಲಿ ಇಟ್ಟಿರುವ ಹಣ ಸೇರಿಲ್ಲ.

13 ವರ್ಷಗಳ ಗರಿಷ್ಠ:  2006ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತದ ಗರಿಷ್ಠ ಹಣ ಪತ್ತೆಯಾಗಿತ್ತು. ಆಗ 23000 ಕೋಟಿ ರು. ಹಣ ಪತ್ತೆಯಾಗಿತ್ತು. ಆದರೆ ನಂತರದ ಬಹುತೇಕ ವರ್ಷಗಳಲ್ಲೇ (201, 2013, 2017 ಹೊರತುಪಡಿಸಿ) ಅದು ಇಳಿಕೆಯ ಹಾದಿಯಲ್ಲೇ ಸಾಗಿತ್ತು. 2019ರಲ್ಲಿ ಹೀಗೆ ಇಡಲಾಗಿದ್ದ ಹಣದ ಮೊತ್ತ 6625 ಕೋಟಿ ರು. ಆಗಿತ್ತು. ಆದರೆ ಇದೀಗ ಬಿಡುಗಡೆ ಮಾಡಿರುವ 2020ರ ಅಂಕಿ ಅಂಶಗಳ ಅನ್ವಯ ಹೀಗೆ ಇಟ್ಟಿರುವ ಹಣ 20700 ಕೋಟಿ ರು.ಗೆ ತಲುಪಿದೆ.

ಯಾರಿಂದ ಎಷ್ಟುಹಣ?

ಬಾಂಡ್‌, ಸೆಕ್ಯುರಿಟೀಸ್‌ 13500 ಕೋಟಿ ರು.

ವೈಯಕ್ತಿಕ ಹಣ 4000 ಕೋಟಿ ರು.

ಇತರೆ ಬ್ಯಾಂಕ್‌ ಠೇವಣಿ 3100 ಕೋಟಿ ರು.

ಟ್ರಸ್ಟ್‌ಗಳ ಹೆಸರಲ್ಲಿ 16.5 ಕೋಟಿ ರು.

ವೈಯಕ್ತಿಕ ಹಣ ಇಳಿಕೆ

2019ರಲ್ಲಿ ಭಾರತೀಯರು ವೈಯಕ್ತಿಕವಾಗಿ ಇಟ್ಟಿದ್ದ ಹಣದ ಮೊತ್ತದ ಅಂದಾಜು 4500 ಕೋಟಿ ರು.ಗಳಿತ್ತು. ಅದೀಗ 4000 ಕೋಟಿ ರು. ಆಸುಪಾಸಿಗೆ ಬಂದಿದೆ.

ಸ್ವಿಸ್‌ ಬ್ಯಾಂಕಲ್ಲಿ ಇಟ್ಟಿದ್ದೆಲ್ಲಾ ಕಪ್ಪುಹಣವಲ್ಲ

ಸ್ವಿಸ್‌ ಬ್ಯಾಂಕುಗಳು ಈ ಮೊದಲ ರಹಸ್ಯಕ್ಕೆ ಖ್ಯಾತಿ ಹೊಂದಿದ್ದವು. ಹಾಗಾಗಿ ಮಂಚೆ ಅಲ್ಲಿ ಇಟ್ಟಹಣವನ್ನೆಲ್ಲಾ ಬಹುತೇಕ ಕಪ್ಪುಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸ್ವಿಸ್‌ ಬ್ಯಾಂಕ್‌ಗಳು ತಮ್ಮ ಬ್ಯಾಂಕ್‌ಗಳಲ್ಲಿ ವಿದೇಶಿಯರು ಇಟ್ಟಹಣದ ಮಾಹಿತಿ ಬಹಿರಂಗಪಡಿಸುತ್ತವೆ. ಹೀಗೆ ಕಪ್ಪುಹಣ ಇಡುವವರು ಇದೀಗ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಹಣ ಇಡುತ್ತಿಲ್ಲ.

click me!