ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ತಗ್ಗಿಸಿದ ಭಾರತೀಯರು; ಹಾಗಾದ್ರೆ ಹಣವನ್ನು ಏನ್ ಮಾಡಿದ್ರು?

By Suvarna News  |  First Published Jan 2, 2024, 7:24 PM IST

ಭಾರತೀಯ ಸಮಾಜದಲ್ಲಿ ಖರ್ಚು ಕಡಿಮೆ ಮಾಡಿ ಉಳಿತಾಯ ಹೆಚ್ಚು ಮಾಡಬೇಕು ಎಂಬ ನಂಬಿಕೆ ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತೀಯರ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯದ ಹಣ ತಗ್ಗುತ್ತಿದೆ ಎಂದು ಆರ್ ಬಿಐ ವರದಿ ಹೇಳಿದೆ. ಹಾಗಾದ್ರೆ ಇದಕ್ಕೇನು ಕಾರಣ? 


ನವದೆಹಲಿ (ಜ.2): ಭಾರತೀಯರು ಈಗ ಬ್ಯಾಂಕ್ ಖಾತೆಗಳಲ್ಲಿ ಹಣ ಉಳಿತಾಯ ಮಾಡೋದ್ರಿಂದ ದೂರ ಉಳಿದಿದ್ದಾರೆ. ಈ ಮೂಲಕ ಈ ಹಿಂದಿನಿಂದಲೂ ಭಾರತೀಯ ಸಮಾಜದಲ್ಲಿ ಜನಪ್ರಿಯತೆ ಗಳಿಸಿದ 'ಹೆಚ್ಚು ಉಳಿತಾಯ, ಕಡಿಮೆ ವೆಚ್ಚ' ಎಂಬ ಮಂತ್ರವನ್ನು ಪಾಲಿಸುತ್ತಿಲ್ಲ. ಇದು ಬಹಿರಂಗವಾಗಿರೋದು 2023ನೇ ಸಾಲಿನ ಸೆಪ್ಟೆಂಬರ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಿಡುಗಡೆಗೊಳಿಸಿರುವ ಬುಲೆಟಿನ್ ನಲ್ಲಿ. 2023ನೇ ಹಣಕಾಸು ಸಾಲಿನಲ್ಲಿ ಬ್ಯಾಂಕ್ ಉಳಿತಾಯ ಹಾಗೂ ಹೂಡಿಕೆ ಸೇರಿದಂತೆ ಭಾರತದ ನಿವ್ವಳ ಗೃಹ ಹಣಕಾಸು ಉಳಿತಾಯ ಒಟ್ಟು ದೇಶೀಯ ಉತ್ಪನ್ನದ  (ಜಿಡಿಪಿ) ಶೇ.5.1ಕ್ಕೆ ಇಳಿಕೆಯಾಗಿದೆ. ಇದು 2020-21ನೇ ಹಣಕಾಸು ಸಾಲಿನಲ್ಲಿ ಶೇ.7.1ರಷ್ಟಿದೆ. ಈ ಬದಲಾವಣೆ ಭಾರತೀಯರ ಉಳಿತಾಯದ ವಿಧಾನದಲ್ಲಿ ಬದಲಾವಣೆಯಾಗಿದೆ ಎನ್ನೋದರ ಸೂಚನೆಯಾಗಿದೆ. ಹಾಗಾದ್ರೆ ಭಾರತೀಯರು ಹಣವನ್ನು ಬ್ಯಾಂಕಿನಲ್ಲಿ ಉಳಿತಾಯ ಮಾಡದೆ ಮತ್ತೆಲ್ಲಿ ಇಡುತ್ತಿದ್ದಾರೆ? ಆ ಹಣ ಹಾಗಾದ್ರೆ ಎಲ್ಲಿ ಹೋಯ್ತು?

ಹಣಕಾಸಿನ ಉಳಿತಾಯದಿಂದ ಆಸ್ತಿ ಖರೀದಿ  ತನಕ
ಆರ್ ಬಿಐ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ಹಣಕಾಸಿನ ಉಳಿತಾಯದಲ್ಲಿ ಇಳಿಕೆಯಾಗಿದ್ದು, ಸಾಲದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದು ನಿಜಕ್ಕೂ ಆತಂಕದ ವಿಷಯವೇ ಆಗಿದೆ. ಆದರೆ, ಈ ವಾದಕ್ಕೆ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು, ಭೌತಿಕ ಆಸ್ತಿಗಳ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದೆ. ಮನೆಗಳು ಹಾಗೂ ವಾಹನಗಳ ಖರೀದಿಗೆ ಜನರು ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದಕ್ಕಾಗಿ ಕೋವಿಡ್ ಸಮಯದಲ್ಲಿ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದ್ದ ಸಾಲದ ಪ್ರಯೋಜನ ಪಡೆದಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 

Tap to resize

Latest Videos

Financial Planning: ಅವಿವಾಹಿತರ ಉಳಿತಾಯದ ಪ್ಲಾನ್ ಹೀಗಿರಲಿ

ಎಸ್ ಬಿಐ ಸಂಶೋಧನಾ ವರದಿಯಲ್ಲಿ ಏನಿದೆ?
ಇನ್ನು ಎಸ್ ಬಿಐ ಸಂಶೋಧನಾ ವರದಿಯಲ್ಲಿ ಕೂಡ ಭೌತಿಕ ಆಸ್ತಿಗಳ ಮೇಲೆ ಜನರು ಹೆಚ್ಚು ವ್ಯಯಿಸುತ್ತಿರುವ ಕಾರಣ ಸಾಲದ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಹೇಳಿದೆ. ಇನ್ನು ಎಸ್ ಬಿಐ ಸಂಶೋಧನಾ ವರದಿಯು ಗೃಹ ಉಳಿತಾಯವನ್ನು ಭೌತಿಕ ಹಾಗೂ ಹಣಕಾಸಿನ ಉಳಿತಾಯ ಎರಡನ್ನೂ ಒಟ್ಟುಗೂಡಿಸಿ ಪರಿಗಣಿಸಬೇಕು ಎಂದು ಹೇಳಿದೆ. ಹೀಗಾಗಿ ಸಾಲದ ಹೆಚ್ಚಳ ಆಸ್ತಿ ಹಾಗೂ ವಾಹನಗಳ ಖರೀದಿಯ ಕಾರಣದಿಂದ ಆಗಿದೆ ಎಂದು ಹೇಳಿದೆ. ಇನ್ನು ಎಸ್ ಬಿಐ ವರದಿ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಶೇ.50ರಷ್ಟು ರಿಟೇಲ್ ಸಾಲಗಳು ಮನೆ, ಶಿಕ್ಷಣ ಹಾಗೂ ವಾಹನ ಖರೀದಿಗೆ ವ್ಯಯಿಸಲಾಗಿದೆ. 

ಉಳಿತಾಯದಲ್ಲಿ ಇಳಿಕೆ
ಭಾರತೀಯರ ಉಳಿತಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರೋದು ನಿಜ. ಆದರೆ, ಈ ಹೆಚ್ಚಿನ ವೆಚ್ಚವನ್ನು ಮಾತ್ರ ಭೌತಿಕ ಆಸ್ತಿಗಳ ಮೇಲೆ ಮಾಡಲಾಗಿದೆ. ಒಂದರ್ಥದಲ್ಲಿ ಈ ಖರ್ಚನ್ನು ಕೂಡ ಹೂಡಿಕೆ ಎಂದು ಪರಿಗಣಿಸಬಹುದು. ಅದರಲ್ಲೂ ನಿವೇಶನ ಅಥವಾ ಮನೆ ಖರೀದಿ ಹೂಡಿಕೆ ಎಂದೇ ಹೇಳಬಹುದು. ಇದಕ್ಕೆ ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಚೇತರಿಕೆ ಹಾಗೂ ಆಸ್ತಿ ಬೆಲೆಗಳಲ್ಲಿನ ಏರಿಕೆಯೇ ಸಾಕ್ಷಿ. 

ಈ ವರ್ಷ ಯುಪಿಐ ಪಾವತಿ ನಿಯಮಗಳಲ್ಲಿ 6 ಮಹತ್ವದ ಬದಲಾವಣೆ; ಈ ಹೊಸ ಸೌಲಭ್ಯಗಳ ಬಗ್ಗೆ ತಪ್ಪದೇ ತಿಳಿಯಿರಿ

ಭಾರತೀಯರು ಸಾಂಪ್ರದಾಯಿಕ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಮಾಡದೆ ಆಸ್ತಿ ಸೃಷ್ಟಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಹೀಗಾಗಿ ಭಾರತೀಯರು ಕಡಿಮೆ ಉಳಿತಾಯ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಬದಲಾಗಿ ಅವರು ಉಳಿತಾಯದ ವಿಧಾನ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಭಾರತೀಯರು ಉಳಿತಾಯ ಅಥವಾ ಹೂಡಿಕೆ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಕೂಡ ಸಿದ್ಧರಿದ್ದಾರೆ. ಹೀಗಾಗಿ ಇದು ಕೂಡ ಅವರ ಉಳಿತಾಯದ ವಿಧಾನದಲ್ಲಿ ಬದಲಾವಣೆಯಾಗಲು ಕಾರಣವಾಗಿದೆ ಎಂದು ಹೇಳಬಹುದು. 


 

click me!