
ಭಾರತದ ದೊಡ್ಡ ಐಟಿ ಕಂಪನಿಗಳು 2027ನೇ ಹಣಕಾಸು ವರ್ಷವನ್ನು (FY27) ಡಲ್ ಆಗಿ ಆರಂಭಿಸಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದಾಗಿ ಪ್ರಾಜೆಕ್ಟ್‌ಗಳ ಬೆಲೆಯಲ್ಲಿ ಒತ್ತಡ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟು ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿನ ಸಂಘರ್ಷ, ಕಂಪನಿಗಳ ಆದಾಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಸವಾಲುಗಳ ನಡುವೆಯೂ ಕಂಪನಿಗಳು ತಮ್ಮ ವ್ಯಾಪಾರವನ್ನು ಬಲಪಡಿಸಲು ಬೇರೆ ಕಂಪನಿಗಳನ್ನು ಖರೀದಿಸುವ (ಸ್ವಾಧೀನ) ಹಾದಿ ಹಿಡಿದಿವೆ ಎಂದು ಆನಂದ್ ರಾಠಿ ಸಂಸ್ಥೆಯ ವರದಿ ಹೇಳಿದೆ.
ಜೂನ್ ತ್ರೈಮಾಸಿಕದಲ್ಲಿ ಆದಾಯ ಬೆಳವಣಿಗೆಯು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಕರೆನ್ಸಿ ಲೆಕ್ಕಾಚಾರದಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕ(Quarter to quarter)ಕ್ಕೆ ಕೇವಲ 0.35% ಬೆಳವಣಿಗೆ ಕಂಡಿದೆ. ರೂಪಾಯಿ ಮೌಲ್ಯ ಸುಮಾರು 3.3% ಕುಸಿದರೂ, ಕಂಪನಿಗಳ ಸರಾಸರಿ ಲಾಭಾಂಶ (EBIT margin) 16.3% ರಷ್ಟಿತ್ತು. ವೇತನ ಹೆಚ್ಚಳ, ಎಐನಿಂದಾಗಿ ಉಂಟಾದ ಬೆಲೆ ಇಳಿಕೆ ಮತ್ತು ಮಾರುಕಟ್ಟೆಯಲ್ಲಿನ ತೀವ್ರ ಪೈಪೋಟಿ ಲಾಭಾಂಶದ ಮೇಲೆ ಒತ್ತಡ ಹೇರಿದೆ ಎಂದು ವರದಿ ವಿವರಿಸಿದೆ.
ಸದ್ಯಕ್ಕೆ ಐಟಿ ವಲಯಕ್ಕೆ ಎಐನಿಂದಾಗಿ ಸ್ವಲ್ಪ ಹಿನ್ನಡೆಯಾಗಿದ್ದರೂ, ಕಂಪನಿಗಳು ಎಐ ತಂತ್ರಜ್ಞಾನದಿಂದ ಆದಾಯ ಗಳಿಸಲು ಆರಂಭಿಸಿವೆ. ಆದರೆ, ಸದ್ಯಕ್ಕೆ ಬರುತ್ತಿರುವ ಹೆಚ್ಚಿನ ಪ್ರಾಜೆಕ್ಟ್‌ಗಳು ಕಡಿಮೆ ಅವಧಿಯದ್ದಾಗಿವೆ. 'ಭಾರತದ ಐಟಿ ಕಂಪನಿಗಳಿಗೆ FY27ರ ಮೊದಲ ತ್ರೈಮಾಸಿಕ ದುರ್ಬಲವಾಗಿದ್ದರೂ ಎಐ ಮೂಲಕ ಹಣ ಗಳಿಕೆ ಈಗ ಶುರುವಾಗಿದೆ. ಎಐನಿಂದ ಉಂಟಾದ ಬೆಲೆ ಇಳಿಕೆ ಮತ್ತು ಜಾಗತಿಕ ರಾಜಕೀಯ ಪರಿಣಾಮಗಳಿಂದ ಈ ವಲಯವು ದೌರ್ಬಲ್ಯದ ಅವಧಿಯನ್ನು ಎದುರಿಸುತ್ತಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಂಪನಿಗಳ ಖರೀದಿ ಮತ್ತು ಭವಿಷ್ಯದ ಯೋಜನೆಗಳು
ವಿವಿಧ ವಲಯಗಳು ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಬೇಡಿಕೆ ಚೇತರಿಕೆ ಏಕರೂಪವಾಗಿಲ್ಲ. ಆದರೂ, ದೀರ್ಘಾವಧಿಯಲ್ಲಿ ಐಟಿ ವಲಯದ ಬೆಳವಣಿಗೆಗೆ ಬೇಕಾದ ಅವಕಾಶಗಳು ಹಾಗೆಯೇ ಇವೆ. ಕಂಪನಿಗಳು ಎಐ ಅಳವಡಿಕೆ, ಹಳೆಯ ತಂತ್ರಜ್ಞಾನಗಳ ಆಧುನೀಕರಣ, ಡೇಟಾ ಆಪ್ಟಿಮೈಸೇಶನ್ ಮತ್ತು ಸಾವರಿನ್ ಎಐ ಯೋಜನೆಗಳಲ್ಲಿ ಹೂಡಿಕೆ ಮುಂದುವರಿಸಿವೆ. ಇದೇ ಸಮಯದಲ್ಲಿ, ಬಹುತೇಕ ಎಲ್ಲಾ ಪ್ರಮುಖ ಐಟಿ ಕಂಪನಿಗಳು ದುರ್ಬಲವಾಗಿರುವ ಸ್ವಂತ ಬೆಳವಣಿಗೆಯನ್ನು ಸರಿದೂಗಿಸಲು ಬೇರೆ ಕಂಪನಿಗಳನ್ನು ಖರೀದಿಸುವ ಅಥವಾ ಕಾರ್ಯತಂತ್ರದ ಹೂಡಿಕೆ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುತ್ತಿವೆ.
ಪ್ರಮುಖ ಒಪ್ಪಂದಗಳು ಮತ್ತು ಹೂಡಿಕೆಗಳು
ಈ ತ್ರೈಮಾಸಿಕದಲ್ಲಿ ನಡೆದ ಕೆಲವು ಪ್ರಮುಖ ಒಪ್ಪಂದಗಳೆಂದರೆ, LTIMindtree ಕಂಪನಿಯು Randstad Technology Consulting Services ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. Wipro ಕಂಪನಿಯು Mindsprint ಮತ್ತು Alpha Net ಡೀಲ್‌ಗಳ ಮೂಲಕ ವಿಸ್ತರಿಸಿದೆ. Tech Mahindra, ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ವಲಯದಲ್ಲಿ (BFSI) ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು Avant Techno Solutions ಅನ್ನು ಖರೀದಿಸಿದೆ. HCLTech ಕಂಪನಿಯು ಎಐ ಮೂಲಸೌಕರ್ಯಕ್ಕಾಗಿ ದೊಡ್ಡ ಮೊತ್ತದ ಹೂಡಿಕೆ ಮಾಡಿದೆ. ಆದರೆ, Tata Consultancy Services (TCS) ಮಾತ್ರ ಬೇರೆ ಕಂಪನಿಗಳನ್ನು ಖರೀದಿಸುವ ಬದಲು, ಪಾಲುದಾರಿಕೆಗಳ ಮೂಲಕ ಸಹಜವಾಗಿ ಬೆಳೆಯಲು ಗಮನಹರಿಸಿದೆ.
ವರದಿಯು ಮಧ್ಯಮಾವಧಿಯಲ್ಲಿ ಐಟಿ ವಲಯದ ಬಗ್ಗೆ ಆಶಾದಾಯಕವಾಗಿದೆ. FY27ರಲ್ಲಿ ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಮೂಲಕ ಆದಾಯ ಗಳಿಕೆ ವೇಗ ಪಡೆಯುವ ನಿರೀಕ್ಷೆಯಿದೆ. ನಂತರ, FY28ರ ವೇಳೆಗೆ ಎಐ ಅಳವಡಿಕೆ ಹೆಚ್ಚಾಗುವುದರಿಂದ ಐಟಿ ಸೇವೆಗಳ ಬೇಡಿಕೆಯೂ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.