ಲಾಭದ ಹಾದಿ ಹಿಡಿದ BSNL; 197 ಅನ್‌ಲಿಮಿಟೆಡ್ ಪ್ಲಾನ್ ವ್ಯಾಲಿಡಿಟಿ ಕಡಿತ! ಇನ್ನೂ ಹಲವು ಬದಲಾವಣೆ!

Published : Jul 23, 2025, 01:04 PM IST
BSNL cheap data plan

ಸಾರಾಂಶ

ಬಿಎಸ್ಎನ್ಎಲ್ ತನ್ನ 197 ರೂ. ಪ್ರಿಪೇಯ್ಡ್ ಪ್ಲಾನ್‌ನ ವ್ಯಾಲಿಡಿಟಿ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಿದೆ. 70 ದಿನಗಳ ವ್ಯಾಲಿಡಿಟಿಯನ್ನು 54 ದಿನಗಳಿಗೆ ಇಳಿಸಲಾಗಿದೆ ಮತ್ತು ಅನ್‌ಲಿಮಿಟೆಡ್ ಕರೆಗಳನ್ನು ಸೀಮಿತಗೊಳಿಸಲಾಗಿದೆ. ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯಗಳಲ್ಲೂ ಬದಲಾವಣೆಗಳಾಗಿವೆ.

ದೆಹಲಿ (ಜು.23): ಭಾರತದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರರಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಇದೀಗ ದೇಶದಲ್ಲಿ ತನ್ನ ಟೆಲಿಕಾಂ ಸೇವೆಯನ್ನು ಮತ್ತೆ ಬಲಪಡಿಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಹೆಚ್ಚಿನ ಜನರಿಂದ ಹೆಚ್ಚಿನ ಹಣ ಪಡೆದು ಗುಣಮಟ್ಟದ ಸೇವೆ ನೀಡಲು ಮುಂದಾಗಿದೆ. ಲಾಭದ ಹಾದಿಯಲ್ಲಿ ಸಾಗುತ್ತಾ ಗುಣಮಟಗಟದ ಸೇವೆ ನೀಡುವ ಉದ್ದೇಶದಿಂದ ಈವರೆಗೆ ಗ್ರಾಹಕರಿಗೆ ನೀಡುತ್ತಿದ್ದ ತನ್ನ 197 ರೂ. ಪ್ರಿಪೇಯ್ಡ್ ಪ್ಲಾನ್‌ನ ವ್ಯಾಲಿಡಿಟಿ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಿದೆ.

ಭಾರತದಲ್ಲಿ ಎಲ್ಲ ಟೆಲಿಕಾಂ ಸೇವೆ ಹಾಗೂ ಖಾಸಗಿ ಮೊಬೈಲ್ ನೆಟ್‌ವರ್ಕ್ ಸೇವೆಗಳು ಭಾರೀ ದುಬಾರಿಯಾಗಿವೆ. ಏರ್‌ಟೆಲ್ ಮತ್ತು ಜಿಯೋ ಜನರು ಪಾವತಿ ಮಾಡುವುದಕ್ಕೂ ಸಾಧ್ಯವಾಗದಷ್ಟು ದರಗಳನ್ನು ನಿಗದಿ ಮಾಡಿ, ಬಡಜನರ ದುಡಿಮೆಯ ಬೆವರಿನ ಕೊನೆಯ ಹನಿಯನ್ನೂ ಬಿಡದೇ ಹರಿಸುತ್ತಿವೆ. ಸರ್ಕಾರದ ಎಲ್ಲ ಯೋಜನೆಗಳಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿದ್ದು, ಈ ಎರಡು ಖಾಸಗಿ ಕಂಪನಿಗಳ ಮೊಬೈಲ್ ಸಂಖ್ಯೆ ಇಟ್ಟುಕೊಂಡರೆ ಅದಕ್ಕೆ ಪ್ರತಿ ತಿಂಗಳು ಬಳಕೆ ಮಾಡಿದರೂ, ಬಳಕೆ ಮಾಡದಿದ್ದರೂ ಹಣವನ್ನು ಪಾವತಿ ಮಾಡುತ್ತಲೇ ಹೋಗಬೇಕಿದೆ. ಇಂತಹ ನಿಯಮಗಳಿಗೆ ಸರ್ಕಾರವೂ ಕಡಿವಾಣ ಹಾಕಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸೇವೆಯನ್ನು ಬಲಪಡಿಸುತ್ತಾ, ಕಡಿಮೆ ಹಣಕ್ಕೆ ಜನರಿಗೆ ಸೇವೆ ನೀಡುತ್ತಾ ಬಂದಿತ್ತು.

ಆದರೆ, ಗುಣಮಟ್ಟದ ಸೇವೆ ನೀಡಲು ಕಡಿಮೆ ಹಣಕ್ಕೆ ಹೆಚ್ಚು ವಾಯಿದೆ ನೀಡುತ್ತಿದ್ದ ಬಿಎಸ್‌ಎನ್‌ಎಲ್ ಇದೀಗ ಲಾಭದ ಹಾದಿಯತ್ತ ಮರಳುತ್ತಿದೆ. ಬಿಎಸ್‌ಎನ್‌ಎಲ್ ಸಂಸ್ಥೆಗೆ ದೇಶದ ಪ್ರತಿಷ್ಠಿತ ಟಾಟಾ ಸಂಸ್ಥೆಯೂ ನೆರವಾಗುತ್ತು. ಈವರೆಗೆ 197 ರೂ.ಗೆ ಅನಿಯಮಿತ ಕರೆ, ಎಸ್‌ಎಂಎಸ್ ಹಾಗೂ 2ಜಿಬಿ ಡೇಟಾ ಸೌಲಭ್ಯದ 70 ದಿನಗಳ ಪ್ಲಾನ್ ವ್ಯಾಲಿಡಿಟಿಯನ್ನು ಇದೀಗ 54 ದಿನಗಳಿಗೆ ಇಳಿಸಲಾಗಿದೆ ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕರೆಗಳನ್ನು ಸೀಮಿತಗೊಳಿಸಲಾಗಿದೆ. ಎಸ್‌ಎಂಎಸ್ ಮತ್ತು ಡೇಟಾ ಬಳಕೆಯಲ್ಲೂ ಬಿಎಸ್ಎನ್ಎಲ್ ಬದಲಾವಣೆಗಳನ್ನು ಮಾಡಿದೆ. ಬಿಎಸ್ಎನ್ಎಲ್ 197 ಪ್ಲಾನ್‌ನ ಹಳೆಯ ಮತ್ತು ಹೊಸ ಸೌಲಭ್ಯಗಳನ್ನು ವಿವರವಾಗಿ ತಿಳಿಯೋಣ.

ಬಿಎಸ್ಎನ್ಎಲ್ 197 ರೂ. ರೀಚಾರ್ಜ್ - ಹಳೆಯ ಸೌಲಭ್ಯಗಳು

ಬಿಎಸ್ಎನ್ಎಲ್‌ನ 197 ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಹೈಸ್ಪೀಡ್ ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಒದಗಿಸಲಾಗುತ್ತಿತ್ತು. ಈ ಪ್ರಮುಖ ಸೌಲಭ್ಯಗಳು 15 ದಿನಗಳವರೆಗೆ ಲಭ್ಯವಿತ್ತು. 15 ದಿನಗಳ ನಂತರವೂ, 70 ದಿನಗಳವರೆಗೆ ಸಿಮ್ ಕಾರ್ಡ್ ಸಕ್ರಿಯವಾಗಿರುತ್ತಿತ್ತು. ಇದು ಕಡಿಮೆ ವೆಚ್ಚದಲ್ಲಿ ಸಿಮ್ ಅನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಸಹಾಯಕವಾಗಿತ್ತು. ಆದರೆ ಈಗ ಈ ರೀಚಾರ್ಜ್ ಪ್ಲಾನ್‌ನ ಎಲ್ಲಾ ಸೌಲಭ್ಯಗಳನ್ನು ಬದಲಾಯಿಸಲಾಗಿದೆ.

ಬಿಎಸ್ಎನ್ಎಲ್ 197 ರೂ. ರೀಚಾರ್ಜ್ - ಹೊಸ ಸೌಲಭ್ಯಗಳು

ಇದೀಗ 197 ರೂ. ಪ್ಲಾನ್‌ನಲ್ಲಿ ಬಿಎಸ್ಎನ್ಎಲ್ ದೊಡ್ಡ ಬದಲಾವಣೆಗಳನ್ನು ತಂದಿದೆ. ಈ ಪ್ಲಾನ್‌ನ ಒಟ್ಟು ವ್ಯಾಲಿಡಿಟಿಯನ್ನು 70 ದಿನಗಳಿಂದ 54 ದಿನಗಳಿಗೆ ಇಳಿಸಲಾಗಿದೆ. ಈ ಪ್ಲಾನ್‌ನಲ್ಲಿ ಈಗ ಕೇವಲ 4 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಹಿಂದಿನ ಅನ್‌ಲಿಮಿಟೆಡ್ ಕರೆಗಳ ಬದಲಿಗೆ ಈಗ ಕೇವಲ 300 ನಿಮಿಷಗಳ ವಾಯ್ಸ್ ಕರೆಗಳನ್ನು ಮಾತ್ರ ನೀಡಲಾಗುತ್ತಿದೆ. ಈ ಆಫರ್ ಅವಧಿಯಲ್ಲಿ ಒಟ್ಟು 100 ಎಸ್‌ಎಂಎಸ್‌ಗಳನ್ನು ಮಾತ್ರ ಗ್ರಾಹಕರು ಪಡೆಯುತ್ತಾರೆ. ಸಿಮ್ ಕಾರ್ಡ್ ಅನ್ನು ಸಕ್ರಿಯವಾಗಿಡಲು ಬಯಸುವ ಮತ್ತು ಸೀಮಿತ ಡೇಟಾ ಮತ್ತು ಕರೆಗಳನ್ನು ಬಳಸುವ ಗ್ರಾಹಕರಿಗೆ ಮಾತ್ರ ಈ ಪ್ಲಾನ್ ಈಗ ಪ್ರಯೋಜನಕಾರಿಯಾಗಿದೆ. 197 ರೂ. ಪ್ಲಾನ್‌ನ ಹೊಸ ವ್ಯಾಲಿಡಿಟಿ ಮತ್ತು ಸೌಲಭ್ಯಗಳನ್ನು ಬಿಎಸ್ಎನ್ಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇದೇ ಸಮಯದಲ್ಲಿ, ಇದೇ ಬೆಲೆಗೆ ಬಿಎಸ್ಎನ್ಎಲ್ ಇತರ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳನ್ನು ಸಹ ನೀಡುತ್ತದೆ. ಬಿಎಸ್ಎನ್ಎಲ್ 199 ರೂ. ಪ್ಲಾನ್ ಅಂತಹ ಒಂದು ಪ್ಲಾನ್ ಆಗಿದೆ. ಈ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ದಿನಕ್ಕೆ 2 ಜಿಬಿ ಹೈಸ್ಪೀಡ್ ಡೇಟಾವನ್ನು ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರು ಆನಂದಿಸಬಹುದು. ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಸಹ ಬಿಎಸ್ಎನ್ಎಲ್ ನೀಡುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!