ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ! ಮುಂದಿನ ವರ್ಷ ಬ್ರಿಟನ್ ಹಿಂದಿಕ್ಕಲಿರುವ ಭಾರತ! ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾಹಿತಿ! ಬ್ರಿಟನ್ ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಲಿದೆ ಭಾರತ
ನವದೆಹಲಿ(ಆ.30): ನೋಟು ಅಮಾನ್ಯೀಕರಣದ ನಂತರ ದೇಶದ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಎಂದೆಲ್ಲಾ ಆರೋಪ ಮಾಡುವವರಿಗೆ 2019 ರಲ್ಲಿ ಭಾರತ್ ಆರ್ಥಿಕ ಬೆಳವಣಿಗೆ ಕಂಡು ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಕಾರಣ 2019 ರಲ್ಲಿ ಭಾರತದ ಆರ್ಥಿಕತೆ ಬ್ರಿಟನ್ ಆರ್ಥಿಕತೆಯನ್ನು ಮೀರಲಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, 2019ರ ವೇಳೆಗೆ ಭಾರತ ಬ್ರಿಟನ್ ಆರ್ಥಿಕತೆಯನ್ನು ಮೀರಿ ಬೆಳೆಯಲಿದೆ ಎಂದು ತಿಳಿಸಿದ್ದಾರೆ. ಸದ್ಯ ಭಾರತ ವಿಶ್ವದ ಆರನೇ ಬೃಹತ್ ಆರ್ಥಿಕತೆಯನ್ನು ಹೊಂದಿದ್ದು, ಮುಂದಿನ ವರ್ಷ ಬ್ರಿಟನ್ ನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಸದ್ಯ ಭಾರತದ ಜಿಡಿಪಿ 2.59 ಟ್ರಿಲಿಯನ್ ಯುಎಸ್ ಡಾಲರ್ ಇದ್ದು, ಬ್ರಿಟನ್ ಜಿಡಿಪಿ 2.62 ಟ್ರಿಲಿಯನ್ ಯುಎಸ್ ಡಾಲರ್ ಇದೆ. ಭಾರತ ಈ ಅಂಕಿ ಅಂಶಗಳನ್ನು 2019 ರಲ್ಲಿ ದಾಟುವುದು ಖಚಿತವಾಗಿದ್ದು, ವಿಶ್ವದ 5ನೇ ಬಲಾಡ್ಯ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರ ಹೊಮ್ಮಲಿದೆ ಎಂದು ಜೇಟ್ಲಿ ಮಾಹಿತಿ ನೀಡಿದರು.
ಇಷ್ಟೇ ಅಲ್ಲದೇ ಮುಂದಿನ 10-20 ವರ್ಷಗಳ ಅವಧಿಯಲ್ಲಿ ಭಾರತ ಬಲಾಡ್ಯ ಆರ್ಥಿಕತೆ ಹೊಂದಿರುವ ಟಾಪ್ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಸೇರಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಈಗಾಗಲೇ ಫ್ರಾನ್ಸ್ ನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ಏರಿದ್ದು, ಮುಂದಿನ ವರ್ಷ ಬ್ರಿಟನ್ ಹಿಂದಿಕ್ಕಿ 5ನೇ ಸ್ಥಾನಕ್ಕೇರಲಿದೆ.