
ನವದೆಹಲಿ(ಸೆ.21): ಭಾರತ ಮತ್ತು ಇರಾನ್ ನಡುವಿನ ತೈಲ ಸಂಬಂಧ ಸಂದಿಗ್ಧ ಸ್ಥಿತಿಗೆ ಬಂದು ನಿಂತಿದೆ. ಕಚ್ಚಾ ತೈಲಕ್ಕಾಗಿ ಬಹುತೇಕ ಇರಾನ್ ದೇಶವನ್ನೇ ಅವಲಂಬಿಸಿರುವ ಭಾರತ, ಅಮೆರಿಕ ಮತ್ತು ಇರಾನ್ ನಡುವಿನ ಗುದ್ದಾಟದಲ್ಲಿ ಮಧ್ಯೆ ಸಿಕ್ಕು ಒದ್ದಾಡುತ್ತಿದೆ.
ಇರಾನ್ ಮೇಲಿನ ಅಮೆರಿಕ ನಿರ್ಬಂಧದಿಂದಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತ ಹೆಣಗಾಡುತ್ತಿದೆ. ಈ ಮಧ್ಯೆ ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಒಪ್ಪಂದದಲ್ಲಿ ಭಾರತ ಮಹತ್ವದ ಬದಲಾವಾಣೆ ಮಾಡಿದೆ. ಇನ್ನು ಮುಂದೆ ಇರಾನ್‌ಗೆ ಕಚ್ಚಾ ತೈಲ ಆಮದಿನ ಹಣವನ್ನು ರೂಪಾಯಿಯಲ್ಲೇ ಪಾವತಿ ಮಾಡುವುದಾಗಿ ಭಾರತ ಘೋಷಿಸಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜರ್ಮನಿ ಮೂಲದ ಯುರೋಪಿಚ್-ಇರಾನಿಸ್ ಹ್ಯಾಂಡಲ್ಸ್ ಬ್ಯಾಂಕ್ ಎಜಿ ಮೂಲಕ ಯೂರೋದಲ್ಲಿ ಹಣ ಪಾವತಿ ಮಾಡುತ್ತಿದೆ. ಆದರೆ ನವೆಂಬರ್ ತಿಂಗಳಿನಿಂದ ಭಾರತ ದೇಶೀಯ ಪಾವತಿ ವ್ಯವಸ್ಥೆ ಮೂಲಕ ಯುಕೋ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್‌ನಿಂದ ಇರಾನ್‌ಗೆ ರೂಪಾಯಿಯಲ್ಲೇ ಪಾವತಿ ಮಾಡಲಿದೆ.
ಎಸ್‌ಬಿಐ ನವೆಂಬರ್‌ನಿಂದ ಭಾರತಕ್ಕೆ ತೈಲ ಪೂರೈಸುವ ಇರಾನ್ ರಿಫೈನರಿಗಳಿಗೆ ಪಾವತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಅಮೆರಿಕ ಒಪ್ಪಂದ ಮತ್ತು ನಿರ್ಬಂಧದಿಂದಾಗಿ ಇರಾನ್ ಜತೆಗೆ ವಾಣಿಜ್ಯ, ವ್ಯಾಪಾರಕ್ಕೆ ಯೂರೋ ಬಳಕೆ ಕಷ್ಟಕರವಾಗುತ್ತಿದ್ದು, ಹೀಗಾಗಿ ಅದನ್ನು ಬಿಟ್ಟು, ರೂಪಾಯಿ ವ್ಯವಸ್ಥೆಯಲ್ಲಿಯೇ ಪಾವತಿಸಲು ಭಾರತ ಮುಂದಾಗಿದೆ.
ಮೊದಲು ಭಾರತ ರೂಪಾಯಿಯಲ್ಲೇ ಇರಾನ್‌ಗೆ ಪಾವತಿ ಮಾಡುತ್ತಿದ್ದು, ಆದರೆ ನಂತರದಲ್ಲಿ ಯೂರೋಗೆ ಬದಲಾಗಿತ್ತು. ಚೀನಾ ಬಳಿಕ ಇರಾನ್‌ನಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರ ಭಾರತವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.